ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನರೇಗಲ್ | ಕೆಸರು ಗದ್ದೆಯಂತಾಗುವ ರಸ್ತೆ: ಜೀವಭಯ

ನರೇಗಲ್ ಹೋಬಳಿಯಾದ್ಯಂತ ಹದಗೆಟ್ಟ ರಸ್ತೆಗಳು, ಅಭಿವೃದ್ಧಿಗೆ ಹಿಂದೇಟು; ಸಾರ್ವಜನಿಕರ ಅಸಮಾಧಾನ
ಚಂದ್ರು ಎಂ. ರಾಥೋಡ್‌
Published 24 ಆಗಸ್ಟ್ 2024, 5:25 IST
Last Updated 24 ಆಗಸ್ಟ್ 2024, 5:25 IST
ಅಕ್ಷರ ಗಾತ್ರ

ನರೇಗಲ್:‌ ಹೋಬಳಿ ಕೇಂದ್ರವಾಗಿರುವ ನರೇಗಲ್‌ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಬಹುತೇಕ ರಸ್ತೆಗಳು ಹದಗೆಟ್ಟಿದ್ದು ಎಲ್ಲೆಂದರಲ್ಲಿ ತಗ್ಗು ದಿಣ್ಣೆಗಳ ಸಾಮ್ರಾಜ್ಯವೇ ನಿರ್ಮಾಣವಾಗಿದೆ. ಇದರಿಂದ ರಸ್ತೆ ಅಪಘಾತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಪಿಡಬ್ಲ್ಯುಡಿ ಹಾಗೂ ಪಿಎಂಜಿಎಸ್‌ವೈ ಹಾಗೂ ಇತರೆ ಇಲಾಖೆಯ ಅಧಿಕಾರಿಗಳು ರಸ್ತೆ ಅಭಿವೃದ್ದಿಗೆ ಮುಂದಾಗುತ್ತಿಲ್ಲ ಎನ್ನುವುದು ಜನರ ಆರೋಪವಾಗಿದೆ.

ಜಕ್ಕಲಿ-ಹೊಸಳ್ಳಿ ಮಾರ್ಗದ ರಸ್ತೆ ಮೊದಲೇ ಹಾಳಾಗಿತ್ತು. ಆದರೆ ಈಚೆಗೆ ಸುರಿದ ಮಳೆಗೆ, ಅತಿ ಭಾರದ ವಾಹನಗಳ ಓಡಾಟದಿಂದ ಸಂಪೂರ್ಣವಾಗಿ ಕಿತ್ತು ಹೋಗಿದೆ. ರಸ್ತೆ ಮಧ್ಯೆ ಬರುವ ಸೇತುವೆಗಳು ಅಲ್ಲಲ್ಲಿ ಬಿರುಕು ಬಿಟ್ಟಿವೆ. ಕೆಲವೊಂದು ಕಡೆ ಆಳವಾದ ಗುಂಡಿ ಬಿದ್ದಿರುವ ಕಾರಣ ಸವಾರರಿಗೆ ಗೊತ್ತೇ ಆಗುವುದಿಲ್ಲ. ಇದರಿಂದ ಜನರ ಜೀವದ ಜೊತೆಯಲ್ಲಿ ಆಟವಾಡುವಂತೆ ರಸ್ತೆ ಮಾರ್ಪಟ್ಟಿದೆ.

ಸೇತುವೆಗಳ ಗುಂಡಿಗಳು ಗೊತ್ತಾಗಲಿ ಎಂದು ಕೆಲವು ಕಡೆಗಳಲ್ಲಿ ರೈತರು ಮುಳ್ಳಿನ ಕಂಟಿಗಳನ್ನು, ಗಿಡದ ಟೊಂಗೆಗಳನ್ನು ಹಾಕಿದ್ದಾರೆ. ಹೊಸಳ್ಳಿ ಸಮೀಪದ ಹಳ್ಳಕ್ಕೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿರುವ ಸೇತುವೆ ಎರಡು ಕಡೆಗಳಲ್ಲಿ ಅವೈಜ್ಞಾನಿಕವಾಗಿ ಕಲ್ಲುಗಳನ್ನು ಜೋಡಿಲಾಗಿದೆ. ಸೇತುವೆ ಮೂಲಕ ಹಳ್ಳಕ್ಕೆ ಮರಳು ತರಲು ಹೋಗುವ ವಾಹನಗಳು ಅಪಘಾತ ನಡೆಯುವ ಮಾದರಿಯಲ್ಲಿ ರಸ್ತೆಯನ್ನು ಕೊರೆದಿದ್ದಾರೆ. ಇದರಿಂದ ಸೇತುವೆ ಏರಲು ಹಾಗೂ ಇಳಿಯಲಾಗದಂತಹ ಹಂತಕ್ಕೆ ತಲುಪಿದೆ.

ನರೇಗಲ್‌ ಹೋಬಳಿಯಲ್ಲಿ ಪಿಎಂಜಿಎಸ್‌ವೈ ಅಡಿ ₹907.29 ಲಕ್ಷ ವೆಚ್ಚದಲ್ಲಿ ಅಬ್ಬಿಗೇರಿ-ಬೂದಿಹಾಳ-ಹಾಲಕೆರೆ ಗ್ರಾಮದವರೆಗೆ ಅಭಿವೃದ್ದಿ ಪಡಿಸಲಾದ ರಸ್ತೆ ಕಿತ್ತು ಹೋಗಿರುವುದು
ನರೇಗಲ್‌ ಹೋಬಳಿಯಲ್ಲಿ ಪಿಎಂಜಿಎಸ್‌ವೈ ಅಡಿ ₹907.29 ಲಕ್ಷ ವೆಚ್ಚದಲ್ಲಿ ಅಬ್ಬಿಗೇರಿ-ಬೂದಿಹಾಳ-ಹಾಲಕೆರೆ ಗ್ರಾಮದವರೆಗೆ ಅಭಿವೃದ್ದಿ ಪಡಿಸಲಾದ ರಸ್ತೆ ಕಿತ್ತು ಹೋಗಿರುವುದು

ಮಾರನಬಸರಿ-ಕಳಕಾಪುರ, ಮಾರನಬಸರಿ-ನರೇಗಲ್‌, ಮಾರನಬಸರಿ-ನಿಡಗುಂದಿಕೊಪ್ಪ ರಸ್ತೆಯು ಹದಗೆಟ್ಟಿದ್ದು ಗ್ರಾಮೀಣರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಮಾರ್ಗಗಳಲ್ಲಿ ಬರುವ ಹಳ್ಳಗಳಿಗೆ ಎಲ್ಲಿಯೂ ಸೇತುವೆ ನಿರ್ಮಾಣ ಮಾಡದಿರುವ ಕಾರಣ ಜೋರು ಮಳೆ ಬಂದರೆ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಗಜೇಂದ್ರಗಡ-ನರೇಗಲ್‌ ಮಾರ್ಗದ ಹೆದ್ದಾರಿಯು ಕಚ್ಚಾ ದಾರಿಯಂತಾಗಿದೆ. ಎಲ್ಲೆಂದರಲ್ಲಿ ಗುಂಡಿಗಳು ನಿರ್ಮಾಣವಾಗುತ್ತಿವೆ. ಇದರಿಂದ ಅಪಘಾತಗಳು ನಡೆಯುತ್ತಿವೆ. ರಸ್ತೆ ಸರಿಪಡಿಸಲು ಮುಂದಾಗಬೇಕು ಎಂದು ದಲಿತ ಮುಖಂಡ ಹನುಮಂತ ಪೂಜಾರ ಆಗ್ರಹಿಸಿದ್ದಾರೆ.

ನರೇಗಲ್‌ ಹೋಬಳಿಯಲ್ಲಿ ಪಿಎಂಜಿಎಸ್‌ವೈ ಯಡಿ ₹907.29 ಲಕ್ಷ ವೆಚ್ಚದಲ್ಲಿ ಅಬ್ಬಿಗೇರಿ-ಬೂದಿಹಾಳ-ಹಾಲಕೆರೆ ಗ್ರಾಮದ ವರೆಗೆ ಅಭಿವೃದ್ದಿ ಪಡಿಸಲಾದ ರಸ್ತೆ ಕಿತ್ತು ಹೋಗಿರುವುದು
ನರೇಗಲ್‌ ಹೋಬಳಿಯಲ್ಲಿ ಪಿಎಂಜಿಎಸ್‌ವೈ ಯಡಿ ₹907.29 ಲಕ್ಷ ವೆಚ್ಚದಲ್ಲಿ ಅಬ್ಬಿಗೇರಿ-ಬೂದಿಹಾಳ-ಹಾಲಕೆರೆ ಗ್ರಾಮದ ವರೆಗೆ ಅಭಿವೃದ್ದಿ ಪಡಿಸಲಾದ ರಸ್ತೆ ಕಿತ್ತು ಹೋಗಿರುವುದು

ಪಟ್ಟಣದಿಂದ ಅಬ್ಬಿಗೇರಿ ಗ್ರಾಮದ ಕಡೆಗೆ ಹೋಗುವ ಕಾಲೇಜು ರಸ್ತೆಯ ತುಂಬಾ ಗುಂಡಿಗಳು ನಿರ್ಮಾಣವಾಗಿವೆ. ಸ್ವಲ್ಪ ಮಳೆ ಬಂದರು ರಸ್ತೆಯ ತುಂಬಾ ನೀರು ನಿಲ್ಲುತ್ತದೆ. ಇದರಿಂದ ಶಾಲಾ ಕಾಲೇಜಿಗೆ ಹೋಗುವ ಸಾವಿರಾರು ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ನರೇಗಲ್‌ ಪಟ್ಟಣದಿಂದ ಯಲಬುರ್ಗಾ ತಾಲ್ಲೂಕಿನ ತೊಂಡಿಹಾಳ, ಬಂಡಿಹಾಳ, ಕುಕನೂರ ಸೇರಿದಂತೆ ಇತರೆ ಗ್ರಾಮಗಳಿಗೆ ತೆರಳುವ ರಸ್ತೆಯು ಸಂಪೂರ್ಣವಾಗಿ ಕಿತ್ತು ಹೋಗಿದೆ. ತೆಗ್ಗು, ಗುಂಡಿಯಲ್ಲಿ ಬೀಳುವ ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ವಣವಾಗಿದೆ. ಹದಗೆಟ್ಟಿರುವ ರಸ್ತೆಗಳಲ್ಲಿ ಸಂಚರಿಸುವ ಸವಾರರು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ನರೇಗಲ್‌ ಹೋಬಳಿಯ ವ್ಯಾಪ್ತಿಯಲ್ಲಿ ಪಿಡಬ್ಲ್ಯುಡಿ ವತಿಯಿಂದ ಸದ್ಯ ಯಾವುದೇ ಅಭಿವೃದ್ದಿ ಕಾಮಗಾರಿ ಆರಂಭವಾಗಿಲ್ಲ. ಆದರೆ ಹದಗೆಟ್ಟ ರಸ್ತೆಗಳ ದುರಸ್ತಿಯನ್ನು ವಾರ್ಷಿಕ ನಿರ್ವಹಣೆಯಲ್ಲಿ ತೆಗೆದುಕೊಂಡಿದೆ -
ಬಲವಂತ ನಾಯ್ಕರ ಎಇಇ ಪಿಡಬ್ಲ್ಯುಡಿ ರೋಣ
ಮಳೆಯಿಂದ ಹದಗೆಟ್ಟ ರಸ್ತೆಗಳ ದುರಸ್ತಿಗಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಅದರಂತೆ ಅನುದಾನ ದೊರೆತಲ್ಲಿ ಅಭಿವೃದ್ದಿ ಕಾರ್ಯವನ್ನು ಆರಂಭಿಸಲಾಗುವುದು
- ಚಂದ್ರಕಾಂತ ನರ್ಲೇಕರ್‌ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ರೋಣ
ಎರಡೇ ದಿನದಲ್ಲಿ ಕಿತ್ತು ಹೋದ ₹907.29 ಲಕ್ಷ ವೆಚ್ಚದ ರಸ್ತೆ
ಅಂದಾಜು ₹907.29 ಲಕ್ಷ ವೆಚ್ಚದಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ಅಬ್ಬಿಗೇರಿ-ಬೂದಿಹಾಳ-ಹಾಲಕೆರೆ ಗ್ರಾಮದವರೆಗೆ 2023ರಲ್ಲಿ ಅಭಿವೃದ್ದಿ ಪಡಿಸಲಾದ ರಸ್ತೆ ಕೇವಲ ಎರಡೇ ತಿಂಗಳಲ್ಲಿ ಕಿತ್ತು ಹೋಗಿತ್ತು. ರಸ್ತೆ ಹದಗೆಟ್ಟು ವರ್ಷವಾದರೂ ಅಭಿವೃದ್ದಿಗೆ ಮುಂದಾಗಿಲ್ಲ. ಸಂಪೂರ್ಣ ಕಳಪೆ ಕಾಮಗಾರಿಯಿಂದ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ಎಲ್ಲೆಂದರಲ್ಲಿ ರಸ್ತೆ ಬಿರುಕು ಬಿಟ್ಟಿದೆ ಅನೇಕ ಕಡೆಗಳಲ್ಲಿ ಕಿತ್ತು ಹೋಗಿದೆ ಹಾಗೂ ಅಲ್ಲಲ್ಲಿ ಗುಂಡಿಗಳು ನಿರ್ಮಾಣಗೊಂಡಿವೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ. ಆದರೆ ಹೋಬಳಿಯಾದ್ಯಂತ ಕಾಮಗಾರಿ ನಡೆಸಿರುವ ವಿಂಡ್‌ ಕಂಪನಿಯ ಅತಿ ಭಾರದ ವಾಹನಗಳ ಸಂಚಾರದಿಂದ ರಸ್ತೆ ಕಿತ್ತು ಹೋಗಿದೆ ಎನ್ನುವುದು ಗುತ್ತಿಗೆದಾರರ ವಾದವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT