ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಹಟ್ಟಿ | ಹದಗೆಟ್ಟ ರಸ್ತೆ: ಸಂಚಾರಕ್ಕೆ ನಿತ್ಯ ಪರದಾಟ

ಹಿಂದುಳಿದ ತಾಲ್ಲೂಕು ಹಣೆಪಟ್ಟಿಗೆ ದುಃಸ್ಥಿತಿಯಲ್ಲಿರುವ ರಸ್ತೆಗಳೇ ಕೈಗನ್ನಡಿ: ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ
ನಿಂಗಪ್ಪ ಹಮ್ಮಿಗಿ
Published : 26 ಆಗಸ್ಟ್ 2024, 5:55 IST
Last Updated : 26 ಆಗಸ್ಟ್ 2024, 5:55 IST
ಫಾಲೋ ಮಾಡಿ
Comments

ಶಿರಹಟ್ಟಿ: ತಾಲ್ಲೂಕು ಕೇಂದ್ರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಬಹುತೇಕ ರಸ್ತೆಗಳಲ್ಲಿ ತಗ್ಗು ಗುಂಡಿಗಳೇ ಕಾರುಬಾರು ನಡೆಸಿದ್ದು, ಪ್ರಯಾಣಿಕರು ಜೀವಭಯದಲ್ಲೇ ಸಂಚರಿಸುವ ಪರಿಸ್ಥಿತಿ ಇದೆ.

ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿಷ್ಕಾಳಜಿಯಿಂದ ರಸ್ತೆಗಳು ಅಭಿವೃದ್ಧಿ ಕಂಡಿಲ್ಲ. ಕೆಲವು ಮುಖ್ಯರಸ್ತೆಗಳಲ್ಲಿ ಪ್ರತಿನಿತ್ಯ ಅವರೇ ಸಂಚರಿಸಿದರೂ ರಸ್ತೆ ಅಭಿವೃದ್ಧಿಗೆ ಕ್ರಮವಹಿಸದೇ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ. ತೆಗ್ಗು-ಗುಂಡಿಗಳಿರುವ ರಸ್ತೆಗಳಲ್ಲಿ ಸಂಚರಿಸಲು ಸಾಧ್ಯವಾಗದ ಕಾರಣ, ವಾಹನ ಸವಾರರು ಜನಪ್ರತಿನಿಧಿಗಳಿಗೆ ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ.

ತಾಲ್ಲೂಕಿನ ಹೆಬ್ಬಾಳ-ತೊಳಲಿ, ತಂಗೋಡ- ಕೊಗನೂರು, ಗೋವನಕೊಪ್ಪ-ವಡವಿ, ತೊಳಲಿ-ಕಲ್ಲಾಗನೂರು, ಚವಡಾಳ- ನಾಗರಮಡವು, ಸುಗನಹಳ್ಳಿ- ವಡವಿಹೊಸೂರ, ಹೆಬ್ಬಾಳ-ತಂಗೋಡ, ಮಾಗಡಿ ರಸ್ತೆ ಸೇರಿದಂತೆ ಗ್ರಾಮೀಣ ಪ್ರದೇಶದಿಂದ ಜಿಲ್ಲಾ ಮುಖ್ಯರಸ್ತೆ, ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಬಹುತೇಕ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ.

ತಾಲ್ಲೂಕು ಕೇಂದ್ರದಿಂದ ಖಾನಾಪುರ ಮಾರ್ಗವಾಗಿ ಮುಳಗುಂದ ರಸ್ತೆ, ಶೆಟ್ಟಿಕೆರಿಯಿಂದ ಶಿರಹಟ್ಟಿಯ ಮುಖ್ಯರಸ್ತೆ, ಮಾಗಡಿಯಿಂದ ಶಿರಹಟ್ಟಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಪ್ರಯಾಣಿಕರು ಹಾಗೂ ವಾಹನ ಸವಾರರು ಸಂಚಾರದಲ್ಲಿ ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.

‘ತಾಲ್ಲೂಕಿನ ತೊಳಲಿ-ಚವಡಾಳ ಮಧ್ಯದ ಸೇತುವೆ ಹಾಳಾಗಿ ಸುಮಾರು ವರ್ಷಗಳೇ ಕಳೆದಿವೆ. ಈಗ ಮಳೆಗಾಲವಾದ್ದರಿಂದ ಸೇತುವೆಯ ಗುಂಡಿಯಲ್ಲಿ ನೀರು ತುಂಬಿಕೊಂಡಿದೆ. ಬಹುತೇಕ ಪ್ರಯಾಣಿಕರು ಇದರಲ್ಲಿ ಜಾರಿಬಿದ್ದು ಕೈ,ಕಾಲುಗಳಿಗೆ ಪೆಟ್ಟು ಮಾಡಿಕೊಂಡು ಹೊಲಿಗೆ ಹಾಕಿಸಿಕೊಂಡ ಉದಾಹಣೆಗಳು ಸಾಕಷ್ಟಿವೆ. ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಶಾಸಕರ ಗಮನಕ್ಕಿದ್ದರೂ ಇತ್ತ ಕಡೆ ಗಮನ ಹರಿಸದೇ ಇರುವುದು ಗ್ರಾಮಸ್ಥರ ದೌರ್ಭಾಗ್ಯ. ಸಾವು ಸಂಭವಿಸುವ ಮುನ್ನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು’ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಅದೇರೀತಿ, ತಾಲ್ಲೂಕಿನ ಬಹುತೇಕ ಗ್ರಾಮೀಣ ಪ್ರದೇಶದಿಂದ ಪಕ್ಕದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿನ ಸೇತುವೆಗಳು ಕಿತ್ತುಹೋಗಿವೆ. ಸದ್ಯ ಮಳೆಗಾಲದ ನೀರಿನ ರಭಸಕ್ಕೆ ಅವು ಕುಸಿದು ಸಂಚಾರ ಸ್ಥಗಿತಗೊಳ್ಳುವ ಸಂಭವ ಅಧಿಕವಾಗಿದೆ. ತಾಲ್ಲೂಕಿನ ತೆಗ್ಗಿನಭಾವನೂರು ಗ್ರಾಮದ ಹೊರವಲದ ಸೇತುವೆ, ಹಡಗಲಿ ಗ್ರಾಮದ ಸೇತುವೆ, ಬನ್ನಿಕೊಪ್ಪ ಗ್ರಾಮದ ಸೇತುವೆಗಳು ಹಾಳಾಗಿದ್ದು, ದುರಸ್ತಿಗೆ ಕಾದಿವೆ.

ತಾಲ್ಲೂಕಿನಲ್ಲಿ ಅಲ್ಪಸ್ವಲ್ಪ ಉಳಿದ ಡಾಂಬರು ರಸ್ತೆಗಳು ಮಳೆ ಹಾಗೂ ಟಿಪ್ಪರ್ ಸಂಚಾರದಿಂದ ಕಿತ್ತು ಹೋಗುತ್ತಿವೆ.

ತಾಲ್ಲೂಕಿನ ರಸ್ತೆಗಳ ಅಭಿವೃದ್ಧಿಗೆ ಅನುದಾನ ಅವಶ್ಯಕವಾಗಿದ್ದು, ಗ್ರಾಮಮಟ್ಟದಿಂದ ಲೋಕಸಭಾ ಮತಕ್ಷೇತ್ರದ ಜನಪ್ರತಿನಿಧಿಗಳವರೆಗೆ ರಸ್ತೆಗಳ ಅಭಿವೃದ್ದಿಗೆ ಟೊಂಕ ಕಟ್ಟಿ ನಿಲ್ಲಬೇಕು. ರಸ್ತೆ ಅಭಿವೃದ್ಧಿಗೆ ಮಂಜೂರಾದ ಅನುದಾನವನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಮರ್ಪಕವಾಗಿ ಬಳಕೆ ಮಾಡಬೇಕು. ಅಂದಾಗ ತಾಲ್ಲೂಕಿನ ರಸ್ತೆಗಳು ಉತ್ತಮ ಗುಣಮಟ್ಟದ ರಸ್ತೆಯಾಗಿ ನಿರ್ಮಾಣವಾಗಲು ಸಾಧ್ಯ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಗಲಿರುಳು ಸಂಚರಿಸುವ ಟಿಪ್ಪರ್‌ಗಳು

ತಾಲ್ಲೂಕಿನಲ್ಲಿ ಮರಳು ಗಣಿಗಾರಿಕೆ ಹಾಗೂ ಕ್ರಷರ್‌ ಚಟುವಟಿಕೆ ಜೋರಾಗಿದೆ. ನಿಯಮಬಾಹಿರವಾಗಿ ಪ್ರತಿನಿತ್ಯ ಓವರ್ ಲೋಡ್ ಮಾಡಿದ ಮರಳು ಹೊತ್ತು ಸಾಗುವ ಟಿಪ್ಪರ್‌ಗಳು ಗ್ರಾಮೀಣ ಪ್ರದೇಶಗಳಲ್ಲಿನ ರಸ್ತೆಗಳನ್ನು ಸಂಪೂರ್ಣ ಹಾಳು ಮಾಡಿವೆ.

ಅಲ್ಲದೇ ಗಣಿ ದಾಹಕ್ಕೆ ನೈಸರ್ಗಿಕ ಕಲ್ಲುಗುಡ್ಡಗಳು ಕರಗುತ್ತಿದ್ದು, ಕ್ರಷರ್‌ಗಳ‌ ಬಾಯಿಗೆ ಸಿಕ್ಕಿ ಜೆಲ್ಲಿ ಹಾಗೂ ಎಂ–ಸ್ಯಾಂಡ್ ಆಗಿ ಮಾರ್ಪಾಡಾಗುತ್ತಿದೆ. ಅಲ್ಲಿಂದ ಎಂ–ಸ್ಯಾಂಡ್ ಹಾಗೂ ಜೆಲ್ಲಿಗಳ ಮಣಭಾರ ಹೊತ್ತು ಸಾಗುವ ಟಿಪ್ಪರ್‌ಗಳ ಸಂಚಾರದಿಂದ ರಸ್ತೆಗಳಲ್ಲಿ ತಗ್ಗು ಗುಂಡಿಗಳು ನಿರ್ಮಾಣವಾಗಿವೆ.

ನಿಯಮಬಾಹಿರವಾಗಿ ನಡೆಯುವ ಇವೆರಡು ದಂಧೆ ಹಾಗೂ ಟಿಪ್ಪರ್‌ಗಳ ಹಾವಳಿಗೆ ಕಡಿವಾಣ ಹಾಕದೇ ಇದ್ದಲ್ಲಿ ಗ್ರಾಮೀಣ ಭಾಗದ ರಸ್ತೆಗಳು ಸಂಪೂರ್ಣ ಹಾಳಾಗುವುದರಲ್ಲಿ ಸಂದೇಹವಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ತೊಳಲಿ– ಚವಡಾಳ ಸೇತುವೆ ಸಂಪೂರ್ಣ ಹಾಳಾಗಿದೆ. ಜಿಲ್ಲಾಧಿಕಾರಿಗೆ ಮನವಿ ಮಾಡಿದರೂ ಯಾವುದೇ ಕ್ರಮ ಆಗಿಲ್ಲ. ಅಪಘಾತ ಅಗುವ ಮುನ್ನವೇ ಕ್ರಮ ಕೈಗೊಳ್ಳಿ
ಹನುಮಂತ ಪೂಜಾರ, ಕಲ್ಲಾಗನೂರ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT