ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಬಾಂಡ್ ಹೆಸರಿನಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಸಚಿವ ಎಚ್‌.ಕೆ.ಪಾಟೀಲ ವಾಗ್ಧಾಳಿ
Published 30 ಮಾರ್ಚ್ 2024, 16:08 IST
Last Updated 30 ಮಾರ್ಚ್ 2024, 16:08 IST
ಅಕ್ಷರ ಗಾತ್ರ

ಗದಗ: ‘ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಷ್ಟೇ ತೊಡಗಿಸಿಕೊಂಡಿಲ್ಲ. ಚುನಾವಣಾ ಬಾಂಡ್‌ ವಿಚಾರದಲ್ಲಿ ಹಲವರನ್ನು ಶೋಷಣೆ ಮಾಡಿ ಅವರಿಂದ ಹಣ ಪಡೆದಿದೆ. ಜಾಗತಿಕ ಮಟ್ಟದಲ್ಲಿ ಇದು ಅತ್ಯಂತ ದೊಡ್ಡ ಹಗರಣ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ ಆರೋಪ ಮಾಡಿದರು.

‘ಭ್ರಷ್ಟಾಚಾರದ ಮುಂದಿನ ಹಂತವೇ ಹಿಂಸಾತ್ಮಕ ಶೋಷಣೆ. ದೇಣಿಗೆ ಪಡೆಯಲು ಇಂತಹ ಮಾರ್ಗ ಅನುಸರಿಸಿರುವ ರಾಜಕೀಯ ಪಕ್ಷ ಜಗತ್ತಿನಲ್ಲಿ ಎಲ್ಲೂ ಇಲ್ಲ. ಚುನಾವಣಾ ಬಾಂಡ್‌ ವಿಷಯದಲ್ಲಿ ಪ್ರಧಾನಿ ಮೋದಿ ಅವರ ಸುತ್ತ ಆರೋಪದ ಮೋಡಗಳು ಕವಿದಿವೆ. ಅದಕ್ಕೆ ಚುನಾವಣಾ ಬಾಂಡ್‌ ಮತ್ತು ರಾಜಕೀಯ ಪಕ್ಷಗಳಿಗೆ ಬಂದಿರುವ ಹಣದ ಬಗ್ಗೆ ಚುನಾವಣೆಗೂ ಮುನ್ನ ಶ್ವೇತಪತ್ರ ಹೊರಡಿಸಬೇಕು’ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ರೋಚಕ ಸುದ್ದಿಗಳು ಒಂದೊಂದೇ ಹೊರಬರುತ್ತಿವೆ. ಕೆಲವು ಸುಪ್ರೀಂ ಕೋರ್ಟ್ ಮೂಲಕ ಬೆಳಕಿಗೆ ಬರುತ್ತಿದ್ದರೆ; ಮತ್ತೆ ಕೆಲವು ಬಿಜೆಪಿ ಜತೆಯಲ್ಲಿದ್ದವರ ಮೂಲಕವೇ ಬರುತ್ತಿವೆ. ಮತ್ತೊಂದಿಷ್ಟು ಸಂಘ-ಸಂಸ್ಥೆ, ಮಾಧ್ಯಮಗಳ ಮೂಲಕ ಜನತೆಗೆ ತಿಳಿಯುತ್ತಿದ್ದು, ಬಿಜೆಪಿ ಆಡಳಿತ ನಿಜವಾದ ಬಣ್ಣ ಜನರ ಮುಂದೆ ಕಳಚುತ್ತಿದೆ’ ಎಂದು ಹೇಳಿದರು.

‘ಚುನಾವಣಾ ಬಾಂಡ್‌ಗಳ ಮೂಲಕ ಅಧಿಕೃತ ವಾಗಿಯೇ ಇಷ್ಟು ಹಣ ಪಡೆದಿದ್ದು ಒಂದೆಡೆಯಾದರೆ, ಖಾಸಗಿಯಾಗಿ ಎಷ್ಟು ಪಡೆದಿರಬಹುದು? ಇದರಲ್ಲಿ ಕಪ್ಪುಹಣ ಎಷ್ಟಿರಬಹುದು? ಎಂದು ಜನರು ಯೋಚಿಸುತ್ತಿದ್ದಾರೆ. ಯಾರೆಲ್ಲ ದೊಡ್ಡ ಕುಳಗಳು ಚುನಾವಣಾ ಬಾಂಡ್‌ ಖರೀದಿಸಿದ್ದಾರೆ? ಖರೀದಿಗೂ ಮುನ್ನ ಅವರ ಮೇಲೆ ಜಾರಿ ನಿರ್ದೇಶನಾಲಯ, ಸಿಬಿಐ ಹಾಗೂ ಐಟಿ ಪ್ರಕರಣಗಳು ಎಷ್ಟಿದ್ದವು? ಈ ಅಂಶಗಳನ್ನು ಮೊದಲು ಗುರುತಿಸಬೇಕು. ಚುನಾವಣಾ ಬಾಂಡ್‌ ಖರೀದಿಸಿದ ಬಳಿಕ ಅವರ ವಿರುದ್ಧ ಇದ್ದ ಪ್ರಕರಣಗಳ ತನಿಖೆ ಸ್ಥಗಿತಗೊಂಡಿದ್ದರೆ ಅಥವಾ ಪೂರ್ಣಗೊಂಡಿದ್ದರೆ ಅದರ ಮಾಹಿತಿಯನ್ನು ಜನರಿಗೆ ಒದಗಿಸಬೇಕು’ ಎಂದು ಆಗ್ರಹಿಸಿದರು.

‘ಮೋದಿ ನೇತೃತ್ವದ ಕಾಂಗ್ರೆಸ್ ಸರ್ಕಾರವು ಆಡಳಿತ ವಿರೋಧಿ ಅಲೆ ತಪ್ಪಿಸಿಕೊಳ್ಳಲು ವಿರೋಧ ಪಕ್ಷಗಳನ್ನು ಹಣಿಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ’ ಎಂದು ಕಿಡಿಕಾರಿದರು.

‘10 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಇದೀಗ ಚುನಾವಣೆ ನೀತಿ ಸಂಹಿತೆ ಘೋಷಣೆ ಬಳಿಕ ಐಟಿ ಇಲಾಖೆ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ₹1,800 ತೆರಿಗೆ ಬಾಕಿ ನೋಟಿಸ್ ಕೊಡಿಸಿ, ಚುನಾವಣೆಯಲ್ಲಿ ಭಯ ಮೂಡಿಸುತ್ತಿದೆ. ಆದರೆ, ಕಾಂಗ್ರೆಸ್ ಪಕ್ಷ ಅದಕ್ಕೆ ಅಂಜುವುದಿಲ್ಲ’ ಎಂದು ತಿಳಿಸಿದರು.

ಕಾಂಗ್ರೆಸ್‌ ಮುಖಂಡರಾದ ಸಿದ್ದು ಪಾಟೀಲ, ಅಶೋಕ ಮಂದಾಲಿ, ಬಿ.ಬಿ.ಅಸೂಟಿ ಇದ್ದರು.

‘ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುವೆ’

‘ಯಾವುದೇ ದುರುದ್ದೇಶದಿಂದ ಹಾವೇರಿ-ಗದಗ ಬಿಜೆಪಿ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ದಾವಣಗೆರೆ ಚಾರ್ಲಿಗೆ ಹೋಲಿಕೆ ಮಾಡಿಲ್ಲ’ ಎಂದು ಸಚಿವ ಎಚ್‌.ಕೆ.ಪಾಟೀಲ ಸ್ಪಷ್ಟಪಡಿಸಿದರು. ‘ಚುನಾವಣಾ ಸ್ಪರ್ಧಾ ಕಣದಲ್ಲಿ ಹಿರಿಯರು-ಕಿರಿಯರು ಮುಖಾಮುಖಿ ಆದಾಗ ಇದನ್ನು ಬಳಸುವುದು ವಾಡಿಕೆ. ಬೊಮ್ಮಾಯಿ ಅವರೂ ಸೇರಿ ಹಲವರು ಇದನ್ನು ತಪ್ಪಾಗಿ ಅರ್ಥೈಸಿಕೊಂಡಂತಿದೆ. ಆದಾಗ್ಯೂ ಈ ಹೋಲಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT