ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ನೀವು ನಾಯಕರಾಗಿ’ ರಾಜ್ಯ ಮಟ್ಟದ ಕಾರ್ಯಾಗಾರ

ಆ.25ರಂದು ನಡೆಯುವ ಕಾರ್ಯಾಗಾರದಲ್ಲಿ 500 ಮಂದಿ ಭಾಗಿ: ರಾಜು ಮೌರ್ಯ
Published 13 ಆಗಸ್ಟ್ 2024, 15:46 IST
Last Updated 13 ಆಗಸ್ಟ್ 2024, 15:46 IST
ಅಕ್ಷರ ಗಾತ್ರ

ಗದಗ: ‘ಕುರುಬ ಸಮಾಜವು ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸದೃಢವಾಗಬೇಕು ಎಂಬ ಆಶಯದಿಂದ ಹಾಲುಮತ ಮಹಾಸಭಾ ಸ್ವಾಭಿಮಾನಿ ಬಳಗದ ವತಿಯಿಂದ ನಗರದ ಪಂ. ಭೀಮಸೇನ ಜೋಶಿ ರಂಗಮಂದಿರದಲ್ಲಿ ಆ.25ರಂದು ಬೆಳಿಗ್ಗೆ 10ಕ್ಕೆ ‘ನೀವು ನಾಯಕರಾಗಿ’ ರಾಜ್ಯ ಮಟ್ಟದ ನಾಯಕತ್ವ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ’ ಎಂದು ರಾಜ್ಯ ಸಂಚಾಲಕ ರಾಜು ಮೌರ್ಯ ತಿಳಿಸಿದರು.

‘ಬೀದರ್‌ನಿಂದ ಚಾಮರಾಜನಗರ ದವರೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕುರುಬ ಸಮಾಜದವರು ಇದ್ದರೂ ನಾವು ರಾಜಕೀಯವಾಗಿ ಹಿಂದುಳಿದಿದ್ದೇವೆ. ಸಮಾಜದ ಮುಖಂಡ ಸಿದ್ದರಾಮಯ್ಯ ಅವರ ನಂತರ ನಮ್ಮ ಸಮುದಾಯದ ಮುಂದಿನ ನಾಯಕ ಯಾರು ಎಂಬ ಪ್ರಶ್ನೆ ಉದ್ಭವಿಸಿದೆ. ಹಾಗಾಗಿ, ನಮ್ಮ ಸಮಾಜದಿಂದ ಹೊಸ ನಾಯಕರನ್ನು ಹುಟ್ಟುಹಾಕುವ ಉದ್ದೇಶದಿಂದ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಚರ್ಚೆ, ಸಂವಾದ, ನಿರ್ಣಯ ಸಂಕಲ್ಪ ಎಂಬ ನಾಲ್ಕು ಅಂಶಗಳೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ’ ಎಂದು ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘2023ರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಿಂದ ಕಲಬುರಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ, ಗದಗ, ಧಾರವಾಡ, ಹಾವೇರಿ, ದಾವಣಗೆರೆ ಜಿಲ್ಲೆ ಸೇರಿದಂತೆ ದಕ್ಷಿಣ ಕರ್ನಾಟಕ ಭಾಗದಲ್ಲೂ ಟಿಕೆಟ್ ಆಕಾಂಕ್ಷಿಗಳಾಗಿ, ಆಯಾ ಕ್ಷೇತ್ರಗಳಲ್ಲಿ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರೂ ಸಹ ಕೊನೆಯ ಸಮಯದಲ್ಲಿ ಟಿಕೆಟ್‍ನಿಂದ ವಂಚಿತರಾದರು’ ಎಂದು ತಿಳಿಸಿದರು.

2024ರ ಲೋಕಸಭಾ ಚುನಾವಣೆಗಳಲ್ಲೂ ಬೆಳಗಾವಿ ಕುರುಬ ಸಮಾವೇಶದಲ್ಲಿ ಈ ಬಾರಿ ಬೆಳಗಾವಿಯ ಎರಡು ಕ್ಷೇತ್ರಗಳಲ್ಲಿ ಒಂದನ್ನು ಕುರುಬ ಸಮುದಾಯಕ್ಕೆ ನೀಡುವುದಾಗಿ ಬಹಿರಂಗವಾಗಿ ಹೇಳಿದ್ದರೂ ಸಹ ಟಿಕೆಟ್ ನೀಡಿಲ್ಲ. ಬಾಗಲಕೋಟೆ, ದಾವಣಗೆರೆ, ಮೈಸೂರು ಮತ್ತು ತುಮಕೂರು ಕ್ಷೇತ್ರಗಳಲ್ಲಿಯೂ ಸಹ ಅವಕಾಶ ವಂಚಿತರಾಗಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲೂ ಸಹ ಕುರುಬ ಸಮುದಾಯದವರಿಗೆ ನಿರೀಕ್ಷಿತ ಮಟ್ಟದಲ್ಲಿ ಟಿಕೆಟ್‍ಗಳು ನೀಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ರಾಜ್ಯದ ಜನಸಂಖ್ಯೆಯಲ್ಲಿ ಶೇ 10ರಷ್ಟು ಇರುವ ಸಮುದಾಯವಾಗಿದ್ದರೂ ಅವಕಾಶಗಳಿಂದ ವಂಚಿತರಾಗುತ್ತಿದ್ದೇವೆ. ಆದಕಾರಣ, ಮುಂಬರುವ ದಿನಗಳಲ್ಲಿ ಸ್ಥಳೀಯ ಚುನಾವಣೆಗಳು, ವಿಧಾನಸಭಾ ಚುನಾವಣೆಗಳಲ್ಲಿ ಸಮುದಾಯಕ್ಕೆ ಸಿಗಬೇಕಾದ ಸ್ಥಾನಗಳನ್ನು ಪಡೆಯುವುದರ ಬಗ್ಗೆ ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ಸ್ವಯಂ ಉದ್ಯಮಗಳನ್ನು ಪ್ರಾರಂಭಿಸುವ ಬಗ್ಗೆ ಪ್ರಸ್ತಾಪ, ಚರ್ಚೆ-ಸಂವಾದಗಳ ನಂತರ ಸಂಕಲ್ಪದೊಂದಿಗೆ ರಾಜ್ಯದಾದ್ಯಂತ ಜಾಗೃತಿ ಮತ್ತು ಸಂಘಟನೆಯ ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸಿ, ಸಂವಿಧಾನಬದ್ಧವಾಗಿ ನಮ್ಮ ಹಕ್ಕುಗಳನ್ನು ಪಡೆಯಲು ‘ನೀವೂ ನಾಯಕರಾಗಿ-ರಾಜ್ಯಮಟ್ಟದ ನಾಯಕತ್ವ ಕಾರ್ಯಾಗಾರ’ ಏರ್ಪಡಿಸಲಾಗಿದೆ’ ಎಂದು ತಿಳಿಸಿದರು.

ಹಾಲುಮತ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ರುದ್ರಣ್ಣ ಗುಳಗುಳಿ ಹಾಗೂ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಇನ್‌ಸೈಟ್ಸ್ ಐ.ಎ.ಎಸ್ ಅಕಾಡೆಮಿ ಸಂಸ್ಥಾಪಕ ಜಿ.ಬಿ. ವಿನಯಕುಮಾರ ನೇತೃತ್ವದಲ್ಲಿ ಕಾರ್ಯಾಗಾರ ನಡೆಯಲಿದೆ. ಕಾರ್ಯಾಗಾರದಲ್ಲಿ ಭಾಗವಹಿಸಲು ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಮೂನ್ನೂರಕ್ಕೂ ಹೆಚ್ಚು ಜನರು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಸುಮಾರು 500 ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.

ಹಾಲುಮತ ಮಹಾಸಭಾದ ಗೌರವಾಧ್ಯಕ್ಷ ನಾಗರಾಜ ಮೆಣಸಗಿ, ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ನೀಲಗಾರ, ಉಪಾಧ್ಯಕ್ಷ ಸೋಮನಗೌಡ ಪಾಟೀಲ, ಮಹಿಳಾ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮಾ ದ್ಯಾವನೂರ, ಜಿಲ್ಲಾ ಕಾರ್ಯಾಧ್ಯಕ್ಷ ರಾಘು ವಗ್ಗನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುತ್ತು ಜಡಿ, ಶಿರಹಟ್ಟಿ ತಾಲ್ಲೂಕು ಅಧ್ಯಕ್ಷ ಪ್ರಸಾದ ಆಡಿನ, ಮುಂಡರಗಿ ತಾಲ್ಲೂಕು ಅಧ್ಯಕ್ಷ ಸುರೇಶ ಹಲವಾಗಲಿ, ಜಿಲ್ಲಾ ಸಂಚಾಲಕ ಕುಮಾರ ಮಾರನಬಸರಿ, ಸತೀಶ್ ಗಿಡ್ಡಹನುಮಣ್ಣನವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT