ಗದಗ: ‘ಐದು ದಶಕಗಳನಿಂದ ನನೆಗುದಿಗೆ ಬಿದ್ದಿರುವ ಕಳಸಾ ಬಂಡೂರಿ, ಮಹದಾಯಿ ನದಿ ಜೋಡಣೆಯನ್ನು ತುರ್ತಾಗಿ ಆರಂಭಿಸಬೇಕು ಹಾಗೂ ಕಪ್ಪತ್ತಗುಡ್ಡ ರಕ್ಷಣೆಗೆ ಕ್ರಮವಹಿಸುವಂತೆ ಆಗ್ರಹಿಸಿ ಸೆ.19 ಮತ್ತು ಸೆ.20ರಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ವತಿಯಿಂದ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ’ ಎಂದು ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ಆರ್.ಬೇಲೂರ ತಿಳಿಸಿದರು.
‘ಪಾದಯಾತ್ರೆಯಲ್ಲಿ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಉತ್ತರ ಕರ್ನಾಟಕದ ಅಧ್ಯಕ್ಷ ಶರಣು ಗದ್ದುಗೆ, ರೈತ ಹೋರಾಟಗಾರರು, ವಿವಿಧ ಮಠಾಧೀಶರು ಸೇರಿದಂತೆ ಒಂದು ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವರು’ ಎಂದು ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸೆ.19ರಂದು ನರಗುಂದ ಪಟ್ಟಣದಿಂದ ಪಾದಯಾತ್ರೆ ಆರಂಭವಾಗಲಿದೆ. ಪಾದಯಾತ್ರೆಯು ಕುರ್ಲಗೇರಿ, ತಡಹಾಳ, ನಾಯಕನೂರ ಗ್ರಾಮದ ಮೂಲಕ ಶಲವಡಿ ಗ್ರಾಮದಲ್ಲಿ ವಾಸ್ತವ್ಯ ಮಾಡಲಿದೆ. ಸೆ. 20ರಂದು ಶೆಲವಡಿ ಗ್ರಾಮದಿಂದ ತುಪ್ಪದಕುರಹಟ್ಟಿ, ವೆಂಕಟಾಪೂರ, ಹೊಂಬಳ ಮೂಲಕ ಗದಗ ಪ್ರವೇಶಿಸಿ ಹೊಂಬಳನಾಕಾ, ಗಂಗಾಪೂರಪೇಟೆ, ಡಿಸಿ ಮಿಲ್ ರೋಡ್, ತಹಶೀಲ್ದಾರ್ ಕಚೇರಿ, ಗಾಂಧಿ ಸರ್ಕಲ್, ಪುಟ್ಟರಾಜ ಸರ್ಕಲ್, ಬಸವೇಶ್ವರ ಸರ್ಕಲ್, ಬಿಎಸ್‍ಎನ್‍ಎಲ್ ಟವರ್ ರೋಡ್ ಮೂಲಕ ಜಿಲ್ಲಾಡಳಿತ ಭವನ ತಲುಪಿ, ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.
ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಲೂತಿಮಠ ಮಾತನಾಡಿ, ‘ಸೆ.19ರಂದು ರಾಜ್ಯ ಘಟಕದ ಅಧ್ಯಕ್ಷ ಪ್ರವೀಣ್ ಶೆಟ್ಟಿ ಅವರು ಹುಬ್ಬಳ್ಳಿಯ ಚನ್ನಮ್ಮ ವೃತ್ತದಿಂದ ಬೈಕ್ ರ‍್ಯಾಲಿಗೆ ಚಾಲನೆ ನೀಡುವರು. ಸುಮಾರು 200ಕ್ಕೂ ಹೆಚ್ಚು ವಾಹನಗಳ ಮೂಲಕ ನಡೆಯುವ ರ‍್ಯಾಲಿ ನವಲಗುಂದ ತಲುಪಲಿದೆ. ಅಲ್ಲಿ ರೈತ ಹುತಾತ್ಮ ವೃತ್ತದಿಂದ ನರಗುಂದಕ್ಕೆ ಪ್ರಯಾಣ ಬೆಳೆಸಲಿದೆ. ಬಳಿಕ ಅಲ್ಲಿ ಸಭಾ ಕಾರ್ಯಕ್ರಮ ಮಾಡಿ ಬೆಳಿಗ್ಗೆ 11.30ಕ್ಕೆ ನರಗುಂದದಿಂದ ಗದಗ ನಗರಕ್ಕೆ ಪಾದಯಾತ್ರೆ ಆರಂಭಗೊಳ್ಳಲಿದೆ’ ಎಂದು ತಿಳಿಸಿದರು.
ಬೆಳಗಾವಿ ವಿಭಾಗೀಯ ಅಧ್ಯಕ್ಷ ಪಾಪು ಧಾರೆ ಮಾತನಾಡಿ, ‘ಕಳಸಾ ಬಂಡೂರಿ, ಮಹದಾಯಿ ನದಿಜೋಡಣೆ ವಿಚಾರಕ್ಕೆ ಸಾಕಷ್ಟು ಹೋರಾಟಗಳು ನಡೆದಿವೆ. ಆದರೆ, ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ಅದು ನನೆಗುದಿಗೆ ಬಿದ್ದಿದೆ. ಇನ್ನೇನು ನಮಗೆ ನೀರು ಸಿಕ್ಕಿತು ಎಂಬ ಖುಷಿಯಲ್ಲಿದ್ದಾಗ ಗೋವಾ ರಾಜ್ಯದವರು ಖ್ಯಾತೆ ತೆಗೆದು ಅಡ್ಡಗಾಲು ಹಾಕಿದರು’ ಎಂದು ಆಕ್ರೋಶ ಹೊರಹಾಕಿದರು.
‘ಕಾಡ್ಗಿಚ್ಚಿನಿಂದ ಕಪ್ಪತ್ತಗುಡ್ಡ ರಕ್ಷಣೆ ಮಾಡಲು ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮವಹಿಸಬೇಕು. ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಅದನ್ನು ತುಂಬಲು ಸರ್ಕಾರ ಕ್ರಮವಹಿಸಬೇಕು. ಕಪ್ಪತ್ತಗುಡ್ಡ ವೀಕ್ಷಣೆ ಹಾಗೂ ಚಾರಣಕ್ಕೆ ಬರುವ ಪ್ರವಾಸಿಗರು ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ನಿರ್ಬಂಧಿಸಬೇಕು. ಇಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ. ಅದನ್ನು ತಡೆಯಲು ಜಿಲ್ಲಾಡಳಿತ ಕ್ರಮವಹಿಸಬೇಕು ಎಂದು ಆಗ್ರಹಿಸಲಾಗುವುದು’ ಎಂದು ತಿಳಿಸಿದರು.
ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ದಾವಲ್‌ಸಾಬ್ ಮುಳಗುಂದ ಮಾತನಾಡಿ, ‘ಕಳಸಾ-ಬಂಡೂರಿ ನಾಲಾ ಜೋಡಣೆಯಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಈ ಮೂರು ಪಕ್ಷಗಳು ಕೂಡ ಅವರ ಮೇಲೆ ಇವರು ಹೇಳುವುದನ್ನು ಬಿಟ್ಟರೆ ಯೋಜನೆ ಅನುಷ್ಟಾನಕ್ಕೆ ಯಾವುದೇ ಇಚ್ಛಾಶಕ್ತಿ ಪ್ರದರ್ಶಿಸಿಲ್ಲ. ಗೋವಾ, ಕರ್ನಾಟಕ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಈ ಯೋಜನೆ ಕೈಗೆತ್ತಿಕೊಳ್ಳಲು ಆಗಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಸಂಘಟನೆಯ ಪದಾಧಿಕಾರಿಗಳಾದ ಮುತ್ತುರಾಜ ಎಸ್. ಅರಗಿನಶೆಟ್ಟಿ, ತಿಮ್ಮಣ್ಣ ಈ. ಡೋಣಿ, ಪರಶುರಾಮ ಬಂಕದಮನಿ, ರಾಜೇಶ್ ಡವಳೆ, ಹನಮಂತಸಾ ಶಿದ್ಲಿಂಗ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.