ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ 4ಕ್ಕೆ ಗದುಗಿಗೆ ಪ್ರಿಯಾಂಕಾ ಗಾಂಧಿ: ಸಚಿವ ಎಚ್.ಕೆ.ಪಾಟೀಲ

ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಸಮಾವೇಶ: ಆನಂದ ಗಡ್ಡದ್ದೇವರಮಠ ಪರ ಪ್ರಚಾರ
Published 28 ಏಪ್ರಿಲ್ 2024, 16:10 IST
Last Updated 28 ಏಪ್ರಿಲ್ 2024, 16:10 IST
ಅಕ್ಷರ ಗಾತ್ರ

ಗದಗ: ಹಾವೇರಿ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದ್ದೇವರಮಠ ಅವರ ಪರ ಪ್ರಚಾರ ಮಾಡಲು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಗದಗ ನಗರಕ್ಕೆ ಬರಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.

ನಗರದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮೇ 4ರಂದು ಸಂಜೆ 4.30ಕ್ಕೆ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸುವ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸೇರಿ ಹಲವರು ಭಾಗವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ರಾಜ್ಯದಲ್ಲಿ ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ನೀಡಿದ್ದ ಭರವಸೆಯಂತೆ ಪಂಚ ಗ್ಯಾರಂಟಿಗಳನ್ನು ಸಮರ್ಪಕವಾಗಿ ಅನುಷ್ಟಾನ ಮಾಡಿದೆ. ಇದರಿಂದಾಗಿ ಜನರ ಮನಸ್ಸು ಕಾಂಗ್ರೆಸ್‍ನತ್ತ ತಿರುಗಿದೆ’ ಎಂದು ತಿಳಿಸಿದರು.

‘ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ದೇಶದಲ್ಲಿ ಅಧಿಕಾರಕ್ಕೆ ಬಂದರೆ ತಾವು ಮಾಡುವ ಕೆಲಸ, ಯೋಜನೆ, ಬಡವರಿಗೆ ನೆರವಿನ ಬಗ್ಗೆ ರಾಷ್ಟ್ರಮಟ್ಟದಲ್ಲಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಈ ಭರವಸೆಯನ್ನು ಈಡೇರಿಸುವ ಗ್ಯಾರಂಟಿ ಕಾರ್ಡ್‍ಗಳನ್ನು ಪಕ್ಷದ ಕಾರ್ಯಕರ್ತರು ಮನೆ-ಮನೆಗೆ ತೆರಳಿ ಹಂಚುತ್ತಿದ್ದು, ಇದರಿಂದ ಹತಾಶೆಗೊಂಡ ಬಿಜೆಪಿಯ ಕೆಲ ವರ್ಗ ಕಾನೂನಾತ್ಮಕವಾಗಿ ಕಾಂಗ್ರೆಸ್ ಪಕ್ಷದ ಪ್ರಚಾರ ಹಾಗೂ ಮನೆ-ಮನೆಗೆ ಕಾರ್ಡ್ ಹಂಚಲು ಅಡಚಣೆ ಮಾಡಲು ಯತ್ನಿಸುತ್ತಿದೆ. ಅವರ ಉದ್ದಟತನ ಸರಿಯಾದ ಕ್ರಮವಲ್ಲ’ ಎಂದು ಕಿಡಿಕಾರಿದರು.

ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಈ ಬಗ್ಗೆ ಗಮನ ನೀಡಿ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮಾಡುತ್ತಿರುವ ಮನೆ-ಮನೆ ಪ್ರಚಾರ ಹಾಗೂ ಭರವಸೆ ಈಡೇರಿಸುವ ಗ್ಯಾರಂಟಿ ಕಾರ್ಡ್ ಹಂಚಿಕೆಗೆ ಅಡಚಣೆ ಮಾಡದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಬರ ಪರಿಹಾರ ಸಾಕಾಗಲ್ಲ: ರಾಜ್ಯದಲ್ಲಿ ಉಂಟಾದ ಭೀಕರ ಬರಗಾಲದಿಂದ ₹35 ಸಾವಿರ ಕೋಟಿಗೂ ಅಧಿಕ ನಷ್ಟವಾಗಿದೆ ಎಂದು ರಾಜ್ಯ ಸರ್ಕಾರ ಅಂದಾಜಿಸಿದೆ. ಆದರೆ, ಇದರ ಮಧ್ಯೆ ಕೇಂದ್ರ ಸರ್ಕಾರ ಕಳುಹಿಸಿದ್ದ ಕೇಂದ್ರ ಬರ ಅಧ್ಯಯನ ತಂಡವು ಎನ್‍ಡಿಆರ್‌ಎಫ್ ನಿಯಮದ ಪ್ರಕಾರವೇ ನಮ್ಮ ರಾಜ್ಯದಲ್ಲಿ ₹18,172 ಕೋಟಿ ಹಾನಿಯಾಗಿದೆ ಎಂದು ಪ್ರಸ್ತಾವ ಸಲ್ಲಿಸಿತ್ತು. ಆದರೆ, ಆದರೆ ಸುಪ್ರೀಂ ಕೋರ್ಟ್‌ನಿಂದ ತಪರಾಕಿ ಬರಿಸಿಕೊಂಡು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು ಕೇವಲ ₹3,454 ಕೋಟಿ ಮಾತ್ರ. ಇದು ನಮಗೆ ಅಗತ್ಯವಿರುವ ಮೊತ್ತದ ಕಾಲು ಭಾಗಕ್ಕಿಂತ ಕಡಿಮೆಯಾಗಿದೆ’ ಎಂದು ಹರಿಹಾಯ್ದರು.

ಈ ಮೂಲಕ ರಾಜ್ಯದ ರೈತರಿಗೆ ನರೇಂದ್ರ ಮೋದಿ ಸರ್ಕಾರ ಮತ್ತೆ ಅನ್ಯಾಯ ಮಾಡಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಾವೇರಿ-ಗದಗ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದ್ದೇವರಮಠ ಮಾತನಾಡಿ, ಕ್ಷೇತ್ರದಲ್ಲಿ ಪಂಚಾಯ್ತಿ ಮಟ್ಟದಿಂದ ಶಹರ ಮಟ್ಟದಲ್ಲಿ ವಾರ್ಡ್ ವಾರು ಸಭೆ ಮಾಡಿ, ಪ್ರಚಾರ ಕೈಗೊಂಡಿದ್ದೇವೆ. ಎಲ್ಲ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರು, ಸಚಿವರು, ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ತಾಯಂದಿರ ಆಶೀರ್ವಾದ ನಮ್ಮ ಮೇಲಿದೆ. ಅದಕ್ಕೆ ಕಾರಣ ನಮ್ಮ ಗ್ಯಾರಂಟಿ ಯೋಜನೆಗಳು ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಎಸ್.ಪಾಟೀಲ ಮಾತನಾಡಿ, ಬಿಜೆಪಿಯವರು ಕೆಟ್ಟ ಮನೋಭಾವನೆ ಇಟ್ಟುಕೊಂಡು ಕಾಂಗ್ರೆಸ್ ಕಾರ್ಯಕರ್ತರ ಪ್ರಚಾರಕ್ಕೆ ಅಡ್ಡಿ ಮಾಡುತ್ತಿದ್ದಾರೆ. ಹಿಂದೆ ಹೇಳಿದ್ದನ್ನು ನಾವು ಮಾಡಿ ತೋರಿಸಿದ್ದೇವೆ. ಇದರಿಂದ ಬಿಜೆಪಿಯವರಿಗೆ ಭಯ ಹುಟ್ಟಿದೆ. ಈ ಬಗ್ಗೆ ಚುನಾವಣಾಧಿಕಾರಿಗಳ ಗಮನಕ್ಕೆ ತಂದು ಮನವಿ ಸಲ್ಲಿಸಿದ್ದೇವೆ. ಕ್ರಮ ಕೈಗೊಳ್ಳದಿದ್ದರೇ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗದಗ ಶಹರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಬಿ.ಅಸೂಟಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT