ಗುರುವಾರ , ಮಾರ್ಚ್ 30, 2023
24 °C
ಗದಗ ಬೆಟಗೇರಿ ಅವಳಿ ನಗರದಲ್ಲಿ ಉತ್ತಮ ಮಳೆ

ರಸ್ತೆ, ಚರಂಡಿಗಳ ವಾಸ್ತವ ದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ಶನಿವಾರ ಬೆಳಿಗ್ಗೆಯಿಂದ ಬಿಸಿಲು ಜೋರಾಗಿದ್ದರೂ ಸಂಜೆ ವೇಳೆಗೆ ಎಲ್ಲೆಡೆ ಮೋಡಕವಿದ ವಾತಾವರಣ ಕಂಡುಬಂತು. ಸಂಜೆ 5ರ ಸುಮಾರಿಗೆ ಮೋಡ ಕರಗಿ ಮಳೆಯಾಗಿ ಸುರಿಯಿತು. ಸತತ ಒಂದು ಗಂಟೆಗಳ ಕಾಲ ಸುರಿದ ಮಳೆಗೆ ಇಳೆ ತಂಪಾಯಿತು.

ಗದಗ ಬೆಟಗೇರಿ ಅವಳಿ ನಗರದಲ್ಲಿ ಶನಿವಾರ ಸಂಜೆ ಆರಂಭಗೊಂಡ ಮಳೆ ಬಿಟ್ಟು ಬಿಟ್ಟು ಚೆನ್ನಾಗಿಯೇ ಸುರಿಯಿತು. ರಾತ್ರಿಯಾದರೂ ತುಂತುರು ಮಳೆ ಮುಂದುವರಿದಿತ್ತು.

ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿ ಇದ್ದಿದ್ದರಿಂದ ಶನಿವಾರ ಸಂಜೆ ಮಳೆಯಿಂದ ಜನರಿಗೆ ಅಷ್ಟೇನೂ ತೊಂದರೆ ಆಗಲಿಲ್ಲ. ವ್ಯಾಪಾರ– ವಹಿವಾಟೆಲ್ಲವೂ ಮಧ್ಯಾಹ್ನ 2ಕ್ಕೆ ಮುಗಿದಿತ್ತು. ನಂತರದಲ್ಲಿ ರಸ್ತೆಗಳು ಖಾಲಿ ಖಾಲಿಯಾಗಿದ್ದವು. ವಾಹನಗಳ ಸಂಚಾರವೂ ವಿರಳವಾಗಿತ್ತು.

ದಿನದ ಕೆಲಸ ಮುಗಿಸಿ ಮನೆ ಸೇರಿದ್ದವರೆಲ್ಲರೂ ಬಾಲ್ಕನಿ, ವರಾಂಡದಲ್ಲಿ ಕುಳಿತು ಕಾಫಿ ಜತೆಗೆ ಸಂಜೆ ಮಳೆಯ ಸೊಬಗನ್ನೂ ಆಸ್ವಾದಿಸಿದರು. ಹೊರಗೆ ಸುರಿಯುವ ತುಂತುರು ಮಳೆ, ತಣ್ಣನೆಯ ಗಾಳಿಗೆ ಬಿಸಿಬಿಸಿ ಮಿರ್ಚಿ ಭಜ್ಜಿ, ಗಿರ್ಮಿಟ್‌ ಕೂಡ ಜತೆಯಾದವು. ಅನೇಕರು ಕೆಲಸದ ಒತ್ತಡವನ್ನು ಮಳೆ ನೋಡಿ ಕಡಿಮೆ ಮಾಡಿಕೊಂಡರು.

ಕೆಸರುಗದ್ದೆಯಂತಾದ ರಸ್ತೆಗಳು: ಸಣ್ಣ ಮಳೆಗೆ ಮಣ್ಣಿನ ರಸ್ತೆಗಳೆಲ್ಲವೂ ಕೆಸರುಗದ್ದೆಯಂತಾಗಿದ್ದವು. ಬಡಾವಣೆ ಒಳಗಿನ ರಸ್ತೆಗಳ ಪಾಡು ಹೇಳತೀರದಾಗಿತ್ತು. ಬೈಕ್‌ ಸವಾರರು ಮಣ್ಣಿನ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪ‍ಟ್ಟರು. ರಸ್ತೆ ಕಾಮಗಾರಿ ನಡೆಯುತ್ತಿರುವ ಕಡೆಗಳಲ್ಲೂ ವಾಹನ ಸಂಚಾರ ಕಷ್ಟವಾಗಿತ್ತು. ರಸ್ತೆ ಮಧ್ಯೆ ಬಿದ್ದ ಗುಂಡಿಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ದ್ವಿಚಕ್ರ ವಾಹನ ಸವಾರರು ಕಷ್ಟಪಟ್ಟರು.

ಜಿಲ್ಲಾಧಿಕಾರಿ ಎಂ.ಸುಂದರೇಶ್‌ಬಾಬು ಸ್ಪಷ್ಟ ಸೂಚನೆ ನೀಡಿದ್ದರೂ ಎಚ್ಚೆತ್ತುಕೊಳ್ಳದ ನಗರಸಭೆ ಅಧಿಕಾರಿಗಳು ಮಳೆಗಾಲ ಆರಂಭಗೊಂಡರು ಚರಂಡಿ ಸ್ವಚ್ಛತೆ ಪೂರ್ಣಪ್ರಮಾಣದಲ್ಲಿ ಗಮನ ಕೇಂದ್ರೀಕರಿಸಿಲ್ಲ. ಹಾಗಾಗಿ, ಶನಿವಾರ ಸುರಿದ ಸಣ್ಣ ಮಳೆಗೆ ಚರಂಡಿಗಳೆಲ್ಲವೂ ಉಕ್ಕಿ ಹರಿದವು. ರಸ್ತೆ ತುಂಬ ಚರಂಡಿ ತ್ಯಾಜ್ಯ ಹರಡಿದ್ದು ಕಂಡುಬಂತು. ಗದಗ ಬೆಟಗೇರಿ ಸಾರ್ವಜನಿಕರು ನಗರಸಭೆ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು