ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯ ಕಣ್ಮರೆಯಾದರೂ ನೆನಪು ಶಾಶ್ವತ: ರಂಭಾಪುರಿ ಶ್ರೀ

ಕೊಟ್ಟೂರು ಬಸವೇಶ್ವರ ಶ್ರೀಗಳ 105ನೇ ವರ್ಷದ ಪುಣ್ಯಾರಾಧನೆಯಲ್ಲಿ ರಂಭಾಪುರಿ ಶ್ರೀ
Published 25 ಜೂನ್ 2023, 12:55 IST
Last Updated 25 ಜೂನ್ 2023, 12:55 IST
ಅಕ್ಷರ ಗಾತ್ರ

ಗದಗ: ‘ಮನುಷ್ಯ ಎಷ್ಟು ವರ್ಷ ಬದುಕಿದರೂ ಒಂದಿಲ್ಲ ಒಂದು ದಿನ ಅಗಲಿಕೆ ಅನಿವಾರ್ಯ. ಕಾಯ ಕಣ್ಮರೆಯಾದರೂ ನೆನಹು  ಶಾಶ್ವತವಾಗಿ ಉಳಿಯುವ ಹಾಗೆ ಶ್ರಮಿಸಿದ ಕೀರ್ತಿ- ಗೌರವ ಲಿಂ.ಕೊಟ್ಟೂರು ಬಸವೇಶ್ವರ ಶಿವಾಚಾರ್ಯರಿಗೆ ಸಲ್ಲುತ್ತದೆ’ ಎಂದು ಬಾಳೆಹೊನ್ನೂರು ರಂಭಾಪುರಿ ಡಾ.ವೀರಸೋಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಸೂಡಿ ಜುಕ್ತಿ ಹಿರೇಮಠದ ಜಗದ್ಗುರು ವಿಶ್ವಾರಾಧ್ಯ ಮಂದಿರದಲ್ಲಿ ಲಿಂ.ಕೊಟ್ಟೂರು ಬಸವೇಶ್ವರ ಶ್ರೀಗಳ 105ನೇ ವರ್ಷದ ಪುಣ್ಯಾರಾಧನೆ, ‘ಸುಪ್ರಭಾತ’ ಕೃತಿ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಮನುಷ್ಯ ಜೀವನದಲ್ಲಿ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳೆಂಬ ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಾಧಿಸುವ ಛಲ ಹೊಂದಿರಬೇಕು. ಮನುಷ್ಯ ಯಾವಾಗಲೂ ಬಯಸುವುದು ಸಂಪತ್ತು ಮತ್ತು ಆ ಸಂಪತ್ತಿನಿಂದ ತನ್ನ ಇಷ್ಟಾರ್ಥಗಳನ್ನು ಪಡೆಯಲು ಬಯಸುತ್ತಾನೆ. ಆದರೆ ಇವೆರಡು ಪ್ರಾಪ್ತವಾಗಬೇಕಾದರೆ ಮೊದಲು ಧರ್ಮಾಚರಣೆಯೇ ಮೂಲವಾಗಿದೆ. ಉಜ್ವಲ ಭವಿಷ್ಯಕ್ಕೆ ಧರ್ಮ ದಿಕ್ಸೂಚಿಯಾಗಿದೆ. ನಿಜವಾದ ಆಚರಣೆಯೇ ಧರ್ಮ ಎನಿಸಿಕೊಳ್ಳುತ್ತದೆ’ ಎಂದು ತಿಳಿಸಿದರು.

‘ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಧರ್ಮದ ದಶಸೂತ್ರಗಳನ್ನು ಲಿಂ.ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಬದುಕಿನ ಆಚರಣೆಯಲ್ಲಿ ತಂದು ಭಕ್ತರ ಬಾಳಿಗೆ ಬೆಳಕು ತೋರಿದರು. ಲಿಂಗೈಕ್ಯ ಶ್ರೀಗಳು ಧರ್ಮಮುಖಿಯಾಗಿ, ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿದ್ದನ್ನು ಮರೆಯಲು ಸಾಧ್ಯವಿಲ್ಲ’ ಎಂದರು.

ಸಮಾರಂಭ ಉದ್ಘಾಟಿಸಿದ ಮಾಜಿ ಸಚಿವ ಸಿ.ಸಿ.ಪಾಟೀಲ ಮಾತನಾಡಿ, ‘ಲಿಂ.ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಸಂಸ್ಕೃತ ವಿದ್ವಾಂಸರಾಗಿ ಭಕ್ತರ ಬಾಳಿಗೆ ಸಂಜೀವಿನಿಯಾಗಿದ್ದರು’ ಎಂದರು.

ನವಲಗುಂದ ಕ್ಷೇತ್ರದ ಶಾಸಕ ಎನ್.ಎಚ್.ಕೋನರೆಡ್ಡಿ ‘ಸುಪ್ರಭಾತ’ ಕೃತಿ ಬಿಡುಗಡೆ ಮಾಡಿದರು. ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಅಧ್ಯಕ್ಷತೆ ವಹಿಸಿದ್ದರು. 

ನೇತೃತ್ವ ವಹಿಸಿದ್ದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಮಾತನಾಡಿ, ವೀರಶೈವ ಧರ್ಮ ವಿಶ್ವ ಬಂಧುತ್ವ ಮತ್ತು ಸಾಮರಸ್ಯ ಬದುಕಿಗೆ ಅತ್ಯಮೂಲ್ಯವಾದ ಕೊಡುಗೆ ಕೊಟ್ಟಿದೆ. ಶಿಕ್ಷಣ ಮತ್ತು ಸಂಸ್ಕಾರದಿಂದ ಜೀವನ ಉಜ್ವಲಗೊಳ್ಳಲು ಸಾಧ್ಯ. ಲಿಂ.ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಧರ್ಮ ಸಂಸ್ಕೃತಿಯ ಉಳಿವು ಬೆಳವಣಿಗೆಗಾಗಿ ಬಹುದೊಡ್ಡ ಕೊಡುಗೆಯನ್ನು ಕೊಟ್ಟಿದ್ದಾರೆ. ಅವರ 105ನೇ ವರ್ಷದ ಪುಣ್ಯ ಸ್ಮರಣೋತ್ಸವ ರಂಭಾಪುರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯುತ್ತಿರುವುದು ಭಕ್ತರಲ್ಲಿ ಹರ್ಷ ತಂದಿದೆ’ ಎಂದರು.

ಪ್ರಕಾಶ ಬೇಲಿ ಸ್ವಾಗತಿಸಿದರು. ಚಂದ್ರು ಬಾಳೆಹಳ್ಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರೇಶ ಕಿತ್ತೂರು ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಸೂಡಿಯ ಉಮೇಶ ಗುಡಿಮನಿ ನಿರೂಪಿಸಿದರು.

ಶಿಕ್ಷಣ, ಸಂಸ್ಕಾರದಿಂದ ಉಜ್ವಲ ಭವಿಷ್ಯ ಅನ್ನಸಂತರ್ಪಣೆ ವ್ಯವಸ್ಥೆ ಎಲ್ಲಕ್ಕೂ ಧರ್ಮಾಚರಣೆ ಮೂಲ

ಧರ್ಮವಿಲ್ಲದೇ ಮನುಷ್ಯ ಬಾಳಲು ಸಾಧ್ಯವಾಗದು. ವ್ಯಕ್ತಿತ್ವ ವಿಕಾಸಕ್ಕೆ ಧರ್ಮ ಜ್ಞಾನದ ಅವಶ್ಯಕತೆಯಿದೆ.

–ಮಾಜಿ ಸಚಿವ ಸಿ.ಸಿ.ಪಾಟೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT