ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನರೇಗಲ್ | ಹದಗೆಟ್ಟ ರಸ್ತೆ: ಸಂಚಾರ ಭಯಂಕರ

ನರೇಗಲ್ ಹೋಬಳಿ ವ್ಯಾಪ್ತಿಯಲ್ಲಿ ಎಲ್ಲೆಲ್ಲೂ ಗುಂಡಿಗಳದ್ದೇ ಕಾರುಬಾರು
ಚಂದ್ರು ಎಂ. ರಾಥೋಡ್
Published 16 ಜೂನ್ 2024, 6:41 IST
Last Updated 16 ಜೂನ್ 2024, 6:41 IST
ಅಕ್ಷರ ಗಾತ್ರ

ನರೇಗಲ್:‌‌ ಹೋಬಳಿ ವ್ಯಾಪ್ತಿಯಲ್ಲಿ ಮೊದಲೇ ಹಾಳಾಗಿದ್ದ ರಸ್ತೆಗಳು ಈಗ ಮಳೆಯಿಂದಾಗಿ ಮತ್ತಷ್ಟು ಹಾಳಾಗಿವೆ. ಗ್ರಾಮೀಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ಅನೇಕ ರಸ್ತೆಗಳಲ್ಲಿ ತಗ್ಗು, ದಿನ್ನೆಗೇ ಹೆಚ್ಚಿವೆ. ಇದರಿಂದ ಜನರು ದಿನವೂ ಪ್ರಾಣ ಭಯದಲ್ಲಿ ಸಂಚಾರ ಮಾಡುವಂತಾಗಿದೆ.

ನರೇಗಲ್‌ ಪಟ್ಟಣದಿಂದ ಯಲಬುರ್ಗಾ ತಾಲ್ಲೂಕಿನ ತೊಂಡಿಹಾಳ, ಬಂಡಿಹಾಳ, ಕುಕನೂರ ಸೇರಿದಂತೆ ಇತರೆ ಗ್ರಾಮಗಳಿಗೆ ತೆರಳುವ ರಸ್ತೆಯು ಸಂಪೂರ್ಣವಾಗಿ ಕಿತ್ತು ಹೋಗಿದೆ. ತೆಗ್ಗು, ಗುಂಡಿಯಲ್ಲಿ ಬೀಳುವ ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಕಲ್ಯಾಣ ಕರ್ನಾಟಕದ ಅನೇಕ ಹಳ್ಳಿಗಳಿಂದ ಪಟ್ಟಣದ ಆಸ್ಪತ್ರೆಗೆ, ಶಾಲಾ ಕಾಲೇಜಿಗೆ ನಿತ್ಯವೂ ನೂರಾರು ಜನ ಬರುತ್ತಾರೆ. ವೃದ್ಧರ ಹಾಗೂ ಆಸ್ಪತ್ರೆಗೆ ಬರುವ ಗರ್ಭಿಣಿಯರ ಪರಿಸ್ಥಿತಿ ಹೇಳತೀರದು. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ತಮಗೂ ಇದಕ್ಕೂ ಸಂಬಂಧ ಇಲ್ಲದಂತೆ ವರ್ತಿಸುತ್ತಿದ್ದಾರೆ. ಹದಗೆಟ್ಟಿರುವ ರಸ್ತೆಗಳಲ್ಲಿ ಸಂಚರಿಸುವ ಸವಾರರು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಪಟ್ಟಣದಿಂದ ಅಬ್ಬಿಗೇರಿ ಗ್ರಾಮದ ಕಡೆಗೆ ಹೋಗುವ ಕಾಲೇಜು ರಸ್ತೆಯ ತುಂಬಾ ಗುಂಡಿಗಳು ನಿರ್ಮಾಣವಾಗಿ, ಸ್ವಲ್ಪ ಮಳೆ ಬಂದರೂ ನೀರು ನಿಲ್ಲುತ್ತದೆ. ಇದರಿಂದ ಶಾಲಾ ಕಾಲೇಜಿಗೆ ಹೋಗುವ ಸಾವಿರಾರು ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ರೈತ ಸಂಪರ್ಕ ಕೇಂದ್ರದಿಂದ ಅನ್ನದಾನೇಶ್ವರ ಶಿಕ್ಷಣ ಸಂಸ್ಥೆಯ ವರೆಗೆ ಎರಡೂ ಕಡೆಗಳಲ್ಲಿ ಹದಗೆಟ್ಟಿದೆ.

‘ರಸ್ತೆಗೆ ಬರುವ ನೀರಿಗೆ ವೈಜ್ಞಾನಿಕವಾಗಿ ಹರಿವು ತೋರಿಸದೆ ಹಾಗೂ ರಸ್ತೆ ಪಕ್ಕದಲ್ಲಿ ಚರಂಡಿಗಳನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡದೇ ಇರುವುದರಿಂದ ಈ ರೀತಿಯ ತೊಂದರೆ ನಿರ್ಮಾಣವಾಗಿದೆ’ ಎನ್ನುವುದು ಸ್ಥಳೀಯರ ಆರೋಪವಾಗಿದೆ.

ಜಕ್ಕಲಿ ಗ್ರಾಮದಿಂದ ಹೊಸಳ್ಳಿ ಕಡೆಗೆ ಹೋಗುವ ಡಾಂಬರು ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಸೇತುವೆಗಳು ಅಲ್ಲಲ್ಲಿ ಬಿರುಕು ಬಿಟ್ಟಿವೆ, ಕೆಲವು ಕಡೆ ಆಳವಾದ ಗುಂಡಿ ಬಿದ್ದಿವೆ. ನೀರು ತುಂಬಿದಾಗ ಅದರ ಆಳ ಸವಾರರಿಗೆ ಗೊತ್ತೇ ಆಗುವುದಿಲ್ಲ.

‘ಹೊಸಳ್ಳಿ ಸಮೀಪದ ಹಳ್ಳಕ್ಕೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿರುವ ಸೇತುವೆಯ ಎರಡೂ ಕಡೆಗಳಲ್ಲಿ ಅವೈಜ್ಞಾನಿಕವಾಗಿ ಕಲ್ಲುಗಳನ್ನು ಜೋಡಿಲಾಗಿದೆ. ಸೇತುವೆ ಮೂಲಕ ಹಳ್ಳಕ್ಕೆ ಮರಳು ತರಲು ಹೋಗುವ ವಾಹನಗಳಿಂದಾಗಿ ಅಪಾಯಕಾರಿಯಾಗಿ ರಸ್ತೆ ಕೊರೆದಿದೆ. ಇಷ್ಟಾದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ’ ಎಂದು ರಾಜಪ್ಪ ಜಕ್ಕಲಿ ಆರೋಪಿಸಿದರು.

ಮಾರನಬಸರಿ–ಜಕ್ಕಲಿ ರಸ್ತೆ, ಮಾರನಬಸರಿ–ನೀಡಗುಂದಿಕೊಪ್ಪ ರಸ್ತೆಯೂ ಹದಗೆಟ್ಟಿದೆ.

ನರೇಗಲ್‌ ಪಟ್ಟಣದಲ್ಲಿ ನೀರು ನಿಂತು ಕೆಸರು ಗದ್ದೆಯಂತಾಗಿರುವ ಕಾಲೇಜು ಮಾರ್ಗದ ಜೋಡು ರಸ್ತೆ
ನರೇಗಲ್‌ ಪಟ್ಟಣದಲ್ಲಿ ನೀರು ನಿಂತು ಕೆಸರು ಗದ್ದೆಯಂತಾಗಿರುವ ಕಾಲೇಜು ಮಾರ್ಗದ ಜೋಡು ರಸ್ತೆ
ನರೇಗಲ್‌ ಪಟ್ಟಣದಲ್ಲಿ ಕೆಸರು ಗದ್ದೆಯಂತಾಗಿರುವ ಕಾಲೇಜು ಮಾರ್ಗದ ಜೋಡು ರಸ್ತೆ
ನರೇಗಲ್‌ ಪಟ್ಟಣದಲ್ಲಿ ಕೆಸರು ಗದ್ದೆಯಂತಾಗಿರುವ ಕಾಲೇಜು ಮಾರ್ಗದ ಜೋಡು ರಸ್ತೆ
ನರೇಗಲ್-ತೊಂಡಿಹಾಳ ರಸ್ತೆ ಪೂರ್ಣ ಹದಗೆಟ್ಟಿದೆ. ಆ ರಸ್ತೆ ಪಿಎಂಜಿಎಸ್‌ವೈ ಯೋಜನೆಯಡಿ ಬರುತ್ತದೆ. ನಮಗೆ ಹಸ್ತಾಂತರ ಮಾಡಲು ಕೇಳಿಕೊಂಡಿದ್ದೇವೆ. ಸದ್ಯ ತಾತ್ಕಾಲಿಕ ದುರಸ್ತಿ ಮಾಡಿ ಅನುದಾನಕ್ಕೆ ಮನವಿ ಮಾಡಲಾಗುವುದು ಬಲವಂತ
ನಾಯ್ಕರ ಎಇಇ ರೋಣ

ಕಿತ್ತುಹೋದ ರಸ್ತೆ; ಅಭಿವೃದ್ಧಿಯಿಲ್ಲ ಅಂದಾಜು ₹ 9 ಕೋಟಿ ವೆಚ್ಚದಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ 2023ರಲ್ಲಿ ಅಭಿವೃದ್ಧಿಪಡಿಸಲಾದ ಅಬ್ಬಿಗೇರಿ– ಬೂದಿಹಾಳ– ಹಾಲಕೆರೆ ಗ್ರಾಮದ ರಸ್ತೆ ಕೇವಲ ಎರಡೇ ತಿಂಗಳಲ್ಲಿ ಕಿತ್ತು ಹೋಗಿತ್ತು. ರಸ್ತೆ ಹದಗೆಟ್ಟು ವರ್ಷವಾದರೂ ಅಭಿವೃದ್ಧಿಗೆ ಮುಂದಾಗಿಲ್ಲ. ಸಂಪೂರ್ಣ ಕಳಪೆ ಕಾಮಗಾರಿಯಿಂದ ರಸ್ತೆಗೆ ಗುಂಡಿಗಳು ಬಿದ್ದಿವೆ. ಎಲ್ಲೆಂದರಲ್ಲಿ ರಸ್ತೆ ಬಿರುಕು ಬಿಟ್ಟಿದೆ ಅನೇಕ ಕಡೆಗಳಲ್ಲಿ ಕಿತ್ತು ಹೋಗಿದೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ. ಆದರೆ ಹೋಬಳಿಯಾದ್ಯಂತ ಕಾಮಗಾರಿ ನಡೆಸಿರುವ ವಿಂಡ್‌ ಕಂಪನಿಯ ವಿರುದ್ಧ ಅತಿ ಭಾರದ ವಾಹನಗಳ ಸಂಚಾರದಿಂದ ರಸ್ತೆ ಸಂಪೂರ್ಣವಾಗಿ ಕಿತ್ತು ಹೋಗಿದೆ ಎಂದು ವಿಂಡ್‌ ಮಿಲ್‌ ಕಂಪನಿಯ ವಿರುದ್ಧ ಗುತ್ತಿಗೆದಾರ ರವಿಶಂಕರ ಆರ್.‌ ಅಂದ್ರಾಳ ಅವರು 2023 ಜುಲೈ 25ಕ್ಕೆ ನರೇಗಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಹದಗೆಟ್ಟಿರುವ ರಸ್ತೆ ಮಾತ್ರ ಇಂದಿಗೂ ಹಾಗೆಯೇ ಇದೆ.

ಅರ್ಧಕ್ಕೆ ನಿಂತ ರಸ್ತೆ ಕಾಮಗಾರಿ ನಿಡಗುಂದಿ ಗ್ರಾಮದಿಂದ ನಿಡಗುಂದಿಕೊಪ್ಪ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಒಳ ರಸ್ತೆಯ ಅಭಿವೃದ್ಧಿ ಕಾಮಗಾರಿಯು ಅರ್ಧಕ್ಕೆ ನಿಂತು ಎರಡು ವರ್ಷಗಳಾಗಿವೆ. ರಸ್ತೆಯ ತುಂಬಾ ಕಡಿ ಹಾಕಿ ಹಾಗೆಯೇ ಬಿಡಲಾಗಿದೆ. ಸದ್ಯ ಎಲ್ಲೆಂದರಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು ಮಳೆ ಬಂದಾಗ ಕೆಸರು ಗದ್ದೆಯಂತಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT