ರೋಣ: ಪಟ್ಟಣದ ಅನುದಾನಿತ ಅಂಜುಮನ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎ.ಐ.ಶೇಖ್ ಅವರು ಶಾಲಾ ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳ ಏಳ್ಗೆಗೆ ಎರಡು ವರ್ಷಗಳಿಂದ ತಮ್ಮ ವೇತನದಲ್ಲಿನ ₹ 10 ಸಾವಿರ ಮೀಸಲಿಟ್ಟಿದ್ದಾರೆ.
ವರ್ಷದಿಂದ ವರ್ಷಕ್ಕೆ ಅಂಜುಮನ್ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿತ್ತು. ಒಂದೆಡೆ ಶಿಕ್ಷಕರು ನಿವೃತ್ತರಾದರೆ, ಇನ್ನೊಂದೆಡೆ ಹೊಸ ಶಿಕ್ಷಕರ ನೇಮಕಾತಿ ಆಗುತ್ತಿರಲಿಲ್ಲ. ಜೊತೆಗೆ ಅನುದಾನ ಕೊರತೆಯೂ ಇತ್ತು. ಇದರ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಪ್ರತಿ ತಿಂಗಳು ₹ 10 ಸಾವಿರ ಹಣವನ್ನು ಶಾಲೆಗಾಗಿ ಮತ್ತು ವಿದ್ಯಾರ್ಥಿಗಳಿಗಾಗಿ ಮೀಸಲಿಡಲು ನಿರ್ಧರಿಸಿದೆ’ ಎಂದು ಎ.ಐ.ಶೇಖ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಮಹಿಳಾ ಸಾಕ್ಷರತೆಗೆ ಸರ್ಕಾರ ಪ್ರಯತ್ನ ನಡೆಸಿದೆ. ಅಲ್ಪಸಂಖ್ಯಾತ ಸಮುದಾಯದ ಬಹುತೇಕ ವಿದ್ಯಾರ್ಥಿನಿಯರಿಗೆ ಬೇರೆ ಬೇರೆ ಕಾರಣಗಳಿಂದ ಶಿಕ್ಷಣ ಪೂರ್ಣಗೊಳಿಸಲು ಆಗುತ್ತಿಲ್ಲ. ಹೀಗಾಗಿ ಪೋಷಕರಲ್ಲಿ ಜಾಗೃತಿ ಮೂಡಿಸಿ, ವಿದ್ಯಾರ್ಥಿನಿಯರ ಶಿಕ್ಷಣ ಮುಂದುವರಿಸಲು ಕೋರುತ್ತಿರುವೆ. ಆರ್ಥಿಕ ನೆರವು ನೀಡುತ್ತಿರುವೆ’ ಎಂದರು.
‘ಈ ಶಾಲೆಯಲ್ಲಿ ಓದಿದ ನನ್ನ ಮಗಳು ಸಾನಿಯಾ ಚೌಡಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 87 ಅಂಕ ಪಡೆದಳು. ಆಕೆಗೆ ಪಿಯು ವಿಜ್ಞಾನ ಕಲಿಯುವ ಅಸೆಯಿತ್ತು. ಆದರೆ, ಕೂಲಿಕಾರ್ಮಿಕರಾದ ನಮಗೆ ಆಕೆಯ ಶಿಕ್ಷಣ ವೆಚ್ಚವನ್ನು ನಿಭಾಯಿಸುವ ಶಕ್ತಿ ಇರಲಿಲ್ಲ. ಶಿಕ್ಷಣ ಮೊಟಕಗೊಳಿಸಿದ್ದೆವು. ಆಗ ಎ.ಐ. ಶೇಖ್ ಅವರು ₹30 ಸಾವಿರ ಕೊಟ್ಟು, ಆಕೆಯನ್ನು ಬೀದರ್‌ನ ವಿಜ್ಞಾನ ಕಾಲೇಜಿನಲ್ಲಿ ಓದುವಂತೆ ಮಾಡಿದರು’ ಎಂದು ಪಟ್ಟಣದ ನಿವಾಸಿ ಹಸನಸಾಬ್ ಚೌಡಿ ಹೇಳಿದರು.
‘ಈ ಶಾಲೆಗೆ ಬರುವ ಬಹುತೇಕ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಆರ್ಥಿಕವಾಗಿ ಹಿಂದುಳಿದ ಕುಟುಂಬದವರು. ಅನಾಥರೂ ಇದ್ದಾರೆ. ಬಹುತೇಕ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿವರೆಗೆ ಶಿಕ್ಷಣ ಪೂರ್ಣ ಗೊಳಿಸುವುದಿಲ್ಲ. ಅಂಥವರಿಗೆ ಎ.ಐ.ಶೇಖ್ ಅವರು ಆಸರೆಯಾಗಿದ್ದಾರೆ’ ಎಂದು ಅವರು ತಿಳಿಸಿದರು.
ಮುಖ್ಯ ಶಿಕ್ಷಕ ಎ.ಐ.ಶೇಖ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.