ಭದ್ರತಾ ಸಿಬ್ಬಂದಿ ಕೆಲಸ ಖಾಯಂಗೆ ಆಗ್ರಹ: ರವಿಕಾಂತ ಅಂಗಡಿ

7
ಅನಿರ್ದಿಷ್ಟ ಮುಷ್ಕರದ ಎಚ್ಚರಿಕೆ

ಭದ್ರತಾ ಸಿಬ್ಬಂದಿ ಕೆಲಸ ಖಾಯಂಗೆ ಆಗ್ರಹ: ರವಿಕಾಂತ ಅಂಗಡಿ

Published:
Updated:
Deccan Herald

ಮುಂಡರಗಿ: ಕಪ್ಪತಗುಡ್ಡದಲ್ಲಿ ಖಾಸಗಿ ಕಂಪನಿಗಳು ಸ್ಥಾಪಿಸಿರುವ ಗಾಳಿ ಯಂತ್ರಗಳ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಭದ್ರತಾ ಸಿಬ್ಬಂದಿಯನ್ನು ಕೆಲಸದಿಂದ ತೆಗೆದರೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಗಾಳಿಯಂತ್ರ ಭದ್ರತಾ ಸಿಬ್ಬಂದಿ ಹೋರಾಟ ಸಮಿತಿ ಸಂಚಾಲಕ ರವಿಕಾಂತ ಅಂಗಡಿ ಎಚ್ಚರಿಸಿದರು.

ತಾಲ್ಲೂಕಿನ ವಿರುಪಾಪುರ ತಾಂಡಾದ ಬಳಿ ಈಚೆಗೆ ಏರ್ಪಡಿಸಿದ್ದ ಗಾಳಿಯಂತ್ರ ಭದ್ರತಾ ಸಿಬ್ಬಂದಿ ಹೋರಾಟ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

13 ವರ್ಷಗಳಿಂದ 130 ಭದ್ರತಾ ಸಿಬ್ಬಂದಿಯವರು ಪವನ ವಿದ್ಯುತ್ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಗಾಳಿಯಂತ್ರಗಳಿಗೆ ಜೀವದ ಹಂಗು ತೊರೆದು ಅವರೆಲ್ಲ ಭದ್ರತೆ ಒದಗಿಸಿದ್ದಾರೆ. ಖಾಸಗಿ ಕಂಪನಿಯ ಮಾಲೀಕರು ಈಗ ಇಲ್ಲ ಸಲ್ಲದ ನೆಪಗಳನ್ನು ನೀಡಿ ಭದ್ರತಾ ಸಿಬ್ಬಂದಿಯನ್ನು ತಗೆದು ಹಾಕುವ ಹುನ್ನಾರ ನಡೆಸಿದ್ದಾರೆ ಎಂದು ಅವರು ಆರೋಪಿಸಿದರು.

ಈ ಕುರಿತು ಈಗಾಗಲೇ ಬಾಗೇವಾಡಿ ಗ್ರಾಮದ ಬಳಿ ವಿದ್ಯುತ್ ಪ್ರಸರಣ ಘಟಕಗಳನ್ನು ಸ್ಥಗಿತಗೊಳಿಸಿ ಎಲ್ಲ ಭದ್ರತಾ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದರು. ಅಂದು ಸ್ಥಳಕ್ಕೆ ಬಂದಿದ್ದ ಕಂಪನಿಯ ಅಧಿಕಾರಿಗಳು ಆಗಸ್ಟ್‌ 28ರಂದು ಭದ್ರತಾ ಸಿಬ್ಬಂದಿಯ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಸಿಪಿಐ ಅವರ ಸಮಕ್ಷಮದಲ್ಲಿ ಲಿಖಿತವಾಗಿ ಭರವಸೆ ನೀಡಿದ್ದರು ಎಂದು ತಿಳಿಸಿದರು.

ಗಾಳಿಯಂತ್ರಗಳ ಮಾಲೀಕರು ಕೆಲವು ಖಾಸಗಿ ಭದ್ರತಾ ಎಜೆನ್ಸಿಗಳ ಮೂಲಕ ಸದ್ಯ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯಲ್ಲಿ ಒಡಕು ಮೂಡಿಸುತ್ತಿದ್ದಾರೆ. ಭದ್ರತಾ ಸಿಬ್ಬಂದಿಯವರು ಯಾರ ಆಮಿಷಕ್ಕೂ ಒಳಗಾಗದೆ ಒಂದಾಗಿದ್ದಾರೆ. 15 ದಿನಗಳೊಳಗಾಗಿ ಭದ್ರತಾ ಸಿಬ್ಬಂದಿಯ ಎಲ್ಲ ಸಮಸ್ಯೆಗಳನ್ನು ನಿವಾರಿಸದಿದ್ದರೆ ಹಾರೋಗೇರಿ ಹಾಗೂ ಬಾಗೇವಾಡಿ ವಿದ್ಯುತ್ ಪ್ರಸರಣ ಘಟಕಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ಕೈಗೊಳ್ಳಲಾಗವುದು ಎಂದು ಅವರು ಎಚ್ಚರಿಸಿದರು.

ಎಸ್.ಎಂ.ಮುದ್ಲಾಪುರ, ಐ.ಡಿ.ಖತೀಬ್, ಎಸ್.ಎಸ್.ಪೂಜಾರ, ಎಂ.ಡಿ.ಪೂಜಾರ, ಐ.ಆರ್.ಬಳಿಗೇರ, ಎಂ.ಡಿ.ಮಕಾಂದಾರ್, ಎಚ್.ಡಿ.ಮೇಟಿ, ಎಂ.ಎ.ಮಕಾಂದಾರ, ದೇವಪ್ಪ ಬಡಿಗೇರ, ರವಿ ಮಡಿವಾಳರ, ಎಲ್.ಎಚ್.ಲಕ್ಷ್ಮೇಶ್ವರಮಠ, ಡಿ.ಸಿ.ಬೂದಿಹಾಳ, ಎಸ್.ಎಸ್.ದಂಡಿನ, ಉಮೇಶ ಹಾರೋಗೇರಿ, ಸೋಮಣ್ಣ ಬನ್ನಿಮಟ್ಟಿ, ಆರ್.ಎಂ.ಸೊರಟೂರ, ಕಾಶಪ್ಪ ದ್ಯಾವಣ್ಣವರ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !