ಶನಿವಾರ, ಅಕ್ಟೋಬರ್ 23, 2021
20 °C
ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಬಳಕೆ

ಶಿರಹಟ್ಟಿ ವಿಧಾನಸಭಾ ಕ್ಷೇತ್ರ: ರೈತ ಸಂಪರ್ಕ ರಸ್ತೆಗಳಿಗೆ ಅನುದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ/ಲಕ್ಷ್ಮೇಶ್ವರ: ಎರಡನೇ ಬಾರಿಗೆ ಶಾಸಕರಾಗಿರುವ ಶಿರಹಟ್ಟಿ ಕ್ಷೇತ್ರದ ಶಾಸಕ ರಾಮಣ್ಣ ಲಮಾಣಿ ಶಾಸಕರ ಕ್ಷೇತ್ರದ ಪ್ರದೇಶಾಭಿವೃದ್ಧಿ ನಿಧಿಯನ್ನು ಶೇ 98ರಷ್ಟು ಬಳಕೆ ಮಾಡಿಕೊಳ್ಳುವ ಮೂಲಕ ಮುಂದಿದ್ದಾರೆ. 2018ರಿಂದ 2021ರ ಅವಧಿಯ ನಡುವೆ ಇವರು ಸಮುದಾಯ ಭವನಗಳ ನಿರ್ಮಾಣಕ್ಕೆ ಹೆಚ್ಚು ಅನುದಾನ ನೀಡಿದ್ದರೆ, 2021–22ನೇ ಸಾಲಿನಲ್ಲಿ ರೈತ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿರುವುದು ವಿಶೇಷವಾಗಿದೆ.

2018-19ರಿಂದ 2021-22ರವರೆಗೆ ಒಟ್ಟು ₹5.61 ಕೋಟಿ ಅನುದಾನ ಬಿಡುಗಡೆ ಆಗಿದ್ದು, ಅದರಲ್ಲಿ ಶಾಸಕ ರಾಮಣ್ಣ ಲಮಾಣಿ ₹5.15 ಕೋಟಿ ಅನುದಾನ ಬಿಡುಗಡೆಗೆ ಶಿಫಾರಸು ಮಾಡಿದ್ದಾರೆ. ಅದರಲ್ಲಿ ಈವರೆಗೆ ₹4,20,68,022 ಖರ್ಚಾಗಿದೆ. ₹95,29,178 ಇನ್ನಷ್ಟೇ ಬಿಡುಗಡೆ ಆಗಬೇಕಿದೆ.

ಶಾಸಕರಿಗೆ ನೀಡಿದ ಅಭಿವೃದ್ಧಿ ನಿಧಿಯು ಸರಿಯಾಗಿ ಬಳಕೆ ಆಗಿಲ್ಲ ಎಂಬ ಮಾಹಿತಿ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಾಸಕರಿಗೆ ಪತ್ರ ಬರೆದು ಅನುದಾನ ಬಳಕೆ ಕುರಿತು ಸಮಗ್ರ ವರದಿ ಕೇಳಿದ್ದರು. ಪ್ರತಿವರ್ಷ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ರೂಪದಲ್ಲಿ ₹2 ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡುತ್ತದೆ. ಅದರಂತೆ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಶಾಸಕ ರಾಮಣ್ಣ ಲಮಾಣಿ ಅವರಿಗೆ 2018-19ನೇ ಸಾಲಿನಲ್ಲಿ ಬಿಡುಗಡೆಯಾದ ₹1.61 ಕೋಟಿಯಲ್ಲಿ ₹1.41 ಕೋಟಿ ನಿಧಿಯನ್ನು ಬಳಕೆ ಮಾಡಿದ್ದಾರೆ.

2019-20ನೇ ಸಾಲಿನಲ್ಲಿ ₹2 ಕೋಟಿ ಅನುದಾನ ಬಿಡುಗಡೆ ಆಗಿದ್ದು ಅದರಲ್ಲಿ ₹1.60 ಕೋಟಿ ಖರ್ಚಾಗಿದೆ. ಆದರೆ, 2020-21ನೇ ಸಾಲಿನಲ್ಲಿ ಕೋವಿಡ್ ಕಾರಣದಿಂದಾಗಿ ₹1 ಕೋಟಿ ಮಾತ್ರ ಅನುದಾನ ಬಿಡುಗಡೆ ಆಗಿತ್ತು. ಅದರಲ್ಲಿ ₹85 ಲಕ್ಷ ಖರ್ಚಾಗಿದೆ. ಅಲ್ಲದೆ 2021-22ನೇ ಸಾಲಿಗಾಗಿ ₹1 ಕೋಟಿ ಬಿಡುಗಡೆ ಆಗಿದ್ದು, ₹55 ಲಕ್ಷ ಖರ್ಚಾಗಿದ್ದು ಇನ್ನೂ ₹45 ಲಕ್ಷ ಉಳಿದಿದೆ.

ಶಾಸಕ ರಾಮಣ್ಣ ಲಮಾಣಿ ಅವರು ಜಾತಿ, ಸಮುದಾಯ, ಧರ್ಮಗಳ ಸಮುದಾಯ ಭವನಗಳ ನಿರ್ಮಾಣಕ್ಕೆ ಹೆಚ್ಚು ಅನುದಾನ ನೀಡಿದ್ದಾರೆ. ಈ ಮೂಲಕ ಅವರು ವಿವಿಧ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಉಳಿದಂತೆ ಸ್ಮಶಾನಗಳ ಅಭಿವೃದ್ಧಿ, ರಸ್ತೆ, ದೇವಸ್ಥಾನದ ಮೈದಾನ ಅಭಿವೃದ್ಧಿ, ಸಿಸಿ ರಸ್ತೆ, ಅಂಗವಿಕಲರಿಗೆ ತ್ರಿಚಕ್ರ ವಾಹನ, ಚೆಕ್‌ ಡ್ಯಾಂ, ಸರ್ಕಾರಿ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. ಜತೆಗೆ ರೈತ ಸಂಪರ್ಕ ರಸ್ತೆಗಳಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ.

ಜಿಮ್ಸ್‌ಗೆ ₹30 ಲಕ್ಷ

ಗದಗ ಜಿಲ್ಲೆಯ ಒಟ್ಟು ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಇತರೆ ಮೂರು ಕ್ಷೇತ್ರಗಳಿಗೆ ಹೋಲಿಸಿದರೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಬಳಕೆ ಮಾಡಿಕೊಳ್ಳುವಲ್ಲಿ ಶಿರಹಟ್ಟಿ ಕ್ಷೇತ್ರ ಮುಂದಿದೆ.

‘ಎಲ್ಲ ಜಾತಿಯ ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸಮುದಾಯ ಭವನಗಳಿಗೆ ಅನುದಾನ ನೀಡಲಾಗಿದೆ. ಅದರೊಂದಿಗೆ ರೈತ ಸಂಪರ್ಕ ರಸ್ತೆಗಳಿಗೂ ಹೆಚ್ಚಿನ ಅನುದಾನ ನೀಡಲಾಗಿದೆ. ಅಲ್ಲದೆ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಗಳಿಗೆ ತಲಾ ಒಂದೊಂದು ಅಂಬುಲೆನ್ಸ್ ಮತ್ತು ಜಿಮ್ಸ್‌ಗೆ ₹30 ಲಕ್ಷ ನೀಡಲಾಗಿದೆ’ ಎಂದು ಶಾಸಕ ರಾಮಣ್ಣ ಲಮಾಣಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು