ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಾಜಿ ಮಹಾರಾಜ ಅಪ್ರತಿಮ ದೇಶಭಕ್ತ: ಜೆ.ಕೆ.ಜಮಾದಾರ

Published 20 ಫೆಬ್ರುವರಿ 2024, 4:23 IST
Last Updated 20 ಫೆಬ್ರುವರಿ 2024, 4:23 IST
ಅಕ್ಷರ ಗಾತ್ರ

ಗದಗ: ‘ಪರಕೀಯರ ಆಡಳಿತ ಕಿತ್ತೊಗೆದು ಸ್ವರಾಜ್ಯ ಸ್ಥಾಪಿಸಿದ ಛತ್ರಪತಿ ಶಿವಾಜಿ ಮಹಾರಾಜರು ರಾಷ್ಟ್ರಪ್ರೇಮಿ, ನ್ಯಾಯವಂತ, ದಕ್ಷ ಆಡಳಿತಗಾರರಾಗಿದ್ದರು’ ಎಂದು ಹುಲಕೋಟಿ ಸಹಕಾರ ರೇಡಿಯೊದ ನಿಲಯ ನಿರ್ದೇಶಕ ಜೆ.ಕೆ.ಜಮಾದಾರ ತಿಳಿಸಿದರು.

ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವದಲ್ಲಿ ಮಾತನಾಡಿದರು.

‘ಶಿವಾಜಿಯ ತಾಯಿ ವೀರಮಾತೆ ಜೀಜಾಬಾಯಿ ಅವರು ಶಿವಾಜಿಗೆ ರಾಮಾಯಣ, ಮಹಾಭಾರತ ಮಹಾಕಾವ್ಯಗಳನ್ನು ಹೇಳುತ್ತ ಜೀವನ ಮೌಲ್ಯಗಳ ಶಿಕ್ಷಣ ನೀಡಿದರು. ಇವರ ಗುರು ದಾದಾಜಿ ಕೊಂಡದೇವ ಶಸ್ತ್ರಾಸ್ತ್ರ ವಿದ್ಯೆ, ಕಲಿಸಿ, ತರುಣ ವೀರನ ಮನಸ್ಸನ್ನು ಜಾಗೃತಗೊಳಿಸಿದರು. ಹಿಂದೂ ಧರ್ಮ ಪುನರುಜ್ಜೀವನಗೊಳಿಸಬೇಕು, ಸ್ವರಾಜ್ಯ ಕಟ್ಟಬೇಕೆಂಬ ಆಕಾಂಕ್ಷೆಯಿಂದ ಮರಾಠ ಮುಖಂಡರು ಮತ್ತು ಪಶ್ಚಿಮ ಘಟ್ಟಗಳ ಮಾವಳರೆಂಬ ದೃಢಕಾಯರಾದ ಗಿರಿಜನರನ್ನು ಸೇರಿಸಿ ತರುಣರ ಪಡೆಯನ್ನು ಕಟ್ಟಿದರು. ಶಿವಾಜಿಯು ಸಂತ ರಾಮದಾಸರ ಪರಮ ಭಕ್ತರಾಗಿದ್ದರು. ಹಿಂದೂ ಧರ್ಮಕ್ಕೆ ಛತ್ರಪತಿ ಶಿವಾಜಿಯ ಕೊಡುಗೆ ಅಪಾರವಾಗಿದೆ.  ದಕ್ಷ ಆಡಳಿತಗಾರರಿಗೆ ಅವರು ಎಂದೆಂದಿಗೂ ಪ್ರೇರಣಾದಾಯಕರಾದವರು’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿದರು.

ವಕೀಲ ಸುಧೀರ ಘೋರ್ಪಡೆ ಪ್ರಾಸ್ತಾವಿಕವಾಗಿ ಮಾತನಾಡಿ, ‘ಶಿವಾಜಿ ಮಹಾರಾಜರು ದೇಶಪ್ರೇಮ ಬಡಿದೆಬ್ಬಿಸಿ, ಸುರಾಜ್ಯ ಸ್ಥಾಪಿಸಿದ ಮೇಧಾವಿ. ಪರಕೀಯರ ಆಳ್ವಿಕೆಯಿಂದ ಸ್ವರಾಜ್ಯ ಸ್ಥಾಪಿಸಿದ ಶೂರ’ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ., ಜಿಲ್ಲಾ ಕ್ಷತ್ರಿಯ ಮಹಾಸಭಾ ಅಧ್ಯಕ್ಷ ಶ್ರೀಕಾಂತ ಖಟವಟೆ, ರಾಜಮಾತಾ ಜೀಜಾಬಾಯಿ ಮಹಿಳಾ ಮಂಡಳದ ಅಧ್ಯಕ್ಷೆ ಶ್ರುತಿ ಗ್ವಾರಿ, ಸಮಾಜದ ಗಣ್ಯರಾದ ಮೋಹನ್ ರಾವ್ ಗ್ವಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯ ಸ್ವಾಮಿ ಬಿ. ಸೇರಿದಂತೆ ಸಮುದಾಯದ ಮುಖಂಡರು, ಹಿರಿಯರು ಹಾಜರಿದ್ದರು.

ಮಂಜರಿ ಹೊಂಬಾಳಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT