ಮಂಗಳವಾರ, ಮೇ 17, 2022
29 °C
ವಿಧಾನ ಪರಿಷತ್‌ ಸದಸ್ಯ ಸಂಕನೂರ ಅಭಿಮತ

ಒತ್ತಡ ನಿವಾರಣೆಗೆ ಕ್ರೀಡೆ ಸಹಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಸರ್ಕಾರಿ ನೌಕರರು ನಿತ್ಯವೂ ಒತ್ತಡದಲ್ಲಿ ಕೆಲಸ ನಿರ್ವಹಿಸಬೇಕಾದ ಪರಿಸ್ಥಿತಿ ಇದ್ದು ಅದನ್ನು ಉತ್ತಮವಾಗಿ  ನಿರ್ವಹಿಸಲು ದೈಹಿಕ ಸದೃಢತೆ ಅತ್ಯಗತ್ಯ’ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ತಿಳಿಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

‘ಸರ್ಕಾರಿ ಇಲಾಖೆಗಳಲ್ಲಿ ಹಲವಾರು ಹುದ್ದೆಗಳು ಭರ್ತಿಯಾಗದ ಕಾರಣ ನಾಲ್ಕು ಜನರ ಕೆಲಸಗಳನ್ನು ಒಬ್ಬರೇ ಮಾಡಬೇಕಾದ ಅನಿವಾರ್ಯತೆ ಇದೆ. ಈ ಒತ್ತಡ ನಿವಾರಣೆಗಾಗಿ ನಿತ್ಯ ಕನಿಷ್ಠ ಒಂದು ಗಂಟೆಯಾದರೂ ದೈಹಿಕ ಚಟುವಟಿಕೆಗಳಲ್ಲಿ ತೊಡಗುವ ಮೂಲಕ ಮಾನಸಿಕವಾಗಿ ಬಲಿಷ್ಠಗೊಳ್ಳಬೇಕು. ನೌಕರರು ವೃತ್ತಿ ಜತೆಗೆ ಕುಟುಂಬದ ಕಡೆಗೂ ಹೆಚ್ಚಿನ ಗಮನ ನೀಡಬೇಕು’ ಎಂದರು.

ಜಿಲ್ಲಾಧಿಕಾರಿ ಎಂ.ಸುಂದರೇಶ್‍ಬಾಬು, ‘ಕ್ರೀಡಾಕೂಟವು ಸರ್ಕಾರಿ ನೌಕರರಲ್ಲಿ ಅಡಗಿರುವ ಪ್ರತಿಭೆ ಅನಾವರಣಕ್ಕೆ ವೇದಿಕೆಯಾಗಿ ಹೊರಹೊಮ್ಮಲಿದೆ’ ಎಂದು ತಿಳಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ‘ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಸಾಧನೆ ಮಾಡಬೇಕು’ ಎಂದರು.

ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರವಿ ಗುಂಜೀಕರ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಎನ್‌., ತಾ.ಪಂ ಇಒ ಜಿನಗಾ, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಬಿ.ಎಸ್.ಅಣ್ಣಿಗೇರಿ, ಕೋಶಾಧ್ಯಕ್ಷ ಸತೀಶ ಕಟ್ಟಿಮನಿ, ಜಿಲ್ಲಾ ಪಂಚಾಯ್ತಿ ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತಪ್ಪ ಪೂಜಾರ, ಪ್ರಧಾನ ಕಾರ್ಯದರ್ಶಿ ಕೆ.ಎಫ್.ಹಳ್ಯಾಳ, ಕ್ರೀಡಾ ಕಾರ್ಯದರ್ಶಿ ವೈ.ಕೆ.ಚೌಡಾಪುರ, ತಾಲ್ಲೂಕು ಘಟಕಗಳ ಅಧ್ಯಕ್ಷ ಆನಂದ ಬಣಪ್ಪನವರ ಡಾ. ಎಂ.ಎ.ಹಾದಿಮನಿ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಬಿ. ವಿಶ್ವನಾಥ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಶರಣು ಗೋಗೇರಿ ಇದ್ದರು.

‘ರಕ್ತದಾನ ಮಾಡಿ; ಜೀವಹಾನಿ ತಪ್ಪಿಸಿ’

ಜಿಲ್ಲಾ ಪಂಚಾಯ್ತಿ ಸಿಇಒ ಡಾ. ಆನಂದ್ ಕೆ. , ‘ನೌಕರರು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಕೋವಿಡ್‌–19 ಕಾರಣದಿಂದಾಗಿ ಜಿಲ್ಲೆಯಲ್ಲಿ ರಕ್ತದಾನಿಗಳ ಸಂಖ್ಯೆ ಕಡಿಮೆಯಾಗಿದ್ದು, ರಕ್ತದ ಅಗತ್ಯತೆ ಈ ಮೊದಲಿನಷ್ಟೇ ಇರುತ್ತದೆ. ಆದ್ದರಿಂದ ನೌಕರರು ರಕ್ತದಾನ ಮಾಡುವ ಮೂಲಕ ಜೀವಹಾನಿ ಆಗುವುದನ್ನು ತಡೆಯಲು ಸಹಕರಿಸಬೇಕು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು