ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ್ರೀಡಾ ರತ್ನ’ಗಳನ್ನು ರೂಪಿಸುತ್ತಿರುವ ಶಿವಾನಂದ..!

ಎಎಫ್‌ಎ ತರಬೇತುದಾರರಾಗಿ ಆಯ್ಕೆಯಾದ ಜಿಲ್ಲೆಯ ಏಕೈಕ ಅಥ್ಲಿಟ್‌
Last Updated 25 ಜೂನ್ 2019, 19:45 IST
ಅಕ್ಷರ ಗಾತ್ರ

ನರಗುಂದ: 'ಮನಸ್ಸಿದ್ದರೆ ಮಾರ್ಗವಿದೆ’ ಎನ್ನುವುದಕ್ಕೆ ನರಗುಂದ ತಾಲ್ಲೂಕಿನ ಬನಹಟ್ಟಿಯ ಡಾ.ಶಿವಾನಂದ ಹೊಂಬಳ ಸಾಕ್ಷಿ. ಅಥ್ಲೆಟಿಕ್ಸ್‌ನಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಈ ಕ್ರೀಡಾ ಪ್ರತಿಭೆ, ಸದ್ಯ ಅಥ್ಲೆಟಿಕ್ಸ್‌ ಫಡರೇಷನ್‌ ಆಫ್‌ ಇಂಡಿಯಾದ (ಎಎಫ್‌ಎ)ಕ್ರೀಡಾ ತರಬೇತಿ ಕೇಂದ್ರದ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪದವಿ ಮುಗಿಸಿದ ಇವರು ಕ್ರೀಡಾ ಕೋಟಾದಲ್ಲಿ ರೈಲ್ವೆ ಇಲಾಖೆಯಲ್ಲಿ ಉದ್ಯೋಗಕ್ಕೆ ಸೇರಿದರು. ಸದ್ಯ 46 ವರ್ಷದ ಶಿವಾನಂದ ಅವರಿಗೆಓಡುವುದು, ಓಟ ಕಲಿಸುವುದೇ ಕಾಯಕವಾಗಿದೆ. ಧರ್ಮಶಾಲಾ, ಬೆಂಗಳೂರು, ಊಟಿ, ದೆಹಲಿಯಲ್ಲಿ ರಾಷ್ಟ್ರಮಟ್ಟದ ಕ್ರೀಡಾಪಟುಗಳಿಗೆ ತರಬೇತಿ ನೀಡುತ್ತಿದ್ದಾರೆ.

ಬನಹಟ್ಟಿಯಂತಹ ಪುಟ್ಟ ಹಳ್ಳಿಯಲ್ಲಿ ಜನಿಸಿದ ಇವರು ಬೆಟ್ಟದಷ್ಟು ಸಾಧನೆ ಮಾಡಿದ್ದಾರೆ. ಪ್ರೌಢ ಶಾಲೆ ಹಂತದಲ್ಲಿದ್ದಾಗಲೇ ಕೇರಳದ ತಿರುವನಂತಪುರಂನಲ್ಲಿ ನಡೆದ ರಾಷ್ಟ್ರಮಟ್ಟದ 3 ಸಾವಿರ ಮೀಟರ್ ಓಟದ ಸ್ಪರ್ಧೆಗೆ ಆಯ್ಕೆಯಾಗಿ ಪ್ರಶಸ್ತಿ ಜಯಿಸಿದರು. 1995ರಲ್ಲಿ ರಾಂಚಿಯಲ್ಲಿ ನಡೆದ ರಾಷ್ಟ್ರಮಟ್ಟದ 10 ಸಾವಿರ ಮೀಟರ್ ಓಟದ ಸ್ಪರ್ಧೆಯಲ್ಲಿ ಬಂಗಾರದ ಪದಕ ಗಳಿಸಿದರು. ಅಲ್ಲಿಂದ ಇವರ ಜೀವನ ಪಥವೇ ಬದಲಾಯಿತು. ರೈಲ್ವೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಾ ಭಾರತ ತಂಡವನ್ನು 13 ವರ್ಷಗಳ ಕಾಲ ಭಾರತೀಯ ಕ್ರೀಡಾ ತರಬೇತಿ ಕೇಂದ್ರದಿಂದ ರನ್ನಿಂಗ್‍ನಲ್ಲಿ ಪ್ರತಿನಿಧಿಸಿದರು.

7 ಬಾರಿ ಅಂತರರಾಷ್ಟ್ರೀಯ ಮಟ್ಟದ ಓಟದ ಸ್ಪರ್ಧೆಗಳಲ್ಲಿ ಪದಕ ಜಯಿಸಿದ್ದು ಇವರ ಹೆಗ್ಗಳಿಕೆ. 1997ರಲ್ಲಿ ಇಟಲಿಯಲ್ಲಿ 12.5 ಕೀಮಿ ಕ್ರಾಸ್ ಕಂಟ್ರಿ ಓಟದ ಸ್ಪರ್ಧೆಯಲ್ಲಿ ಪದಕ ಜಯಿಸಿದರು. 1998ರಲ್ಲಿ ಏಷಿಯನ್ ಚಾಂಪಿಯನ್‍ಶಿಪ್‍ಗೆ ಆಯ್ಕೆಯಾದರು. 1999ರಲ್ಲಿ ಐರ್ಲಂಡ್‍ನಲ್ಲಿ ನಡೆದ ಕ್ರಾಸ್ ಕಂಟ್ರಿಯಲ್ಲಿ ಭಾರತವನ್ನು ಪ್ರತಿನಿಧಿಸಿದರು. ಅದೇ ವರ್ಷ ಇರಾನ್‍ನಲ್ಲಿ ನಡೆದ 12.5 ಕೀ.ಮೀ ಕ್ರಾಸ್ ಕಂಟ್ರಿಯಲ್ಲಿ ಕಂಚು ಗೆದ್ದರು. 2002ರಲ್ಲಿ ಕೋಲಂಬೋದಲ್ಲಿ ನಡೆದ 14ನೇ ಏಷ್ಯನ್ ಗೇಮ್ಸನಲ್ಲಿ 5 ಕೀಮಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದರು. ಅದೇ ವರ್ಷ ಮನಿಲಾದಲ್ಲಿ ನಡೆದ 3000 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಪಡೆದರು.

ಅಥ್ಲೆಟಿಕ್ಸ್‌ನಲ್ಲಿ ಭಾರತದ ಚಿನ್ನದ ಹುಡುಗಿ ಎಂದೇ ಖ್ಯಾತರಾದ ಪಿ.ಟಿ.ಉಷಾ ಅವರೊಂದಿಗೆ ತರಬೇತಿ ಹಾಗೂ ಅಭ್ಯಾಸ ನಡೆಸಿದ ಹೆಮ್ಮೆಯೂ ಇವರದು. ಕ್ರೀಡಾಪಟುವಾಗಿ ಬೆಳಗಿದ ಇವರ ನಂತರ ಅಥ್ಲೀಟ್‍ಗಳಿಗೆ ತರಬೇತುದಾರರಾಗಿ ನೇಮಕಗೊಂಡರು. ಇವರು ತರಬೇತಿ ನೀಡಿದ ಅಜಿತ್‌ ಯಾದವ ಎಂಬ ಅಥ್ಲೀಟ್‌ ಜಪಾನ್‍ನಲ್ಲಿ ನಡೆದ ಜೂನಿಯರ್ ಏಷಿಯನ್ ಚಾಂಪಿಯನ್‌ಷಿಪ್‌ನಲ್ಲಿ ಬಂಗಾರದ ಪದಕ ಪಡೆದು ಸಾಧನೆ ಮಾಡಿದ್ದಾರೆ.

ಶಿವಾನಂದ ಅವರಿಗೆ 2000ರಲ್ಲಿ ಭಾರತೀಯ ರೈಲ್ ಖೇಲ್ ಶ್ರೀ ಪ್ರಶಸ್ತಿ, 2001ರಲ್ಲಿ ರಾಜ್ಯ ಸರ್ಕಾರದ ಏಕಲವ್ಯ ಪ್ರಶಸ್ತಿ, 2010 ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2011ರಲ್ಲಿ ಕೆಂಪೆಗೌಡ ಪ್ರಶಸ್ತಿ ಲಭಿಸಿವೆ.

ಏಕಲವ್ಯ ಪ್ರಶಸ್ತಿಯೊಂದಿಗೆ ಶಿವಾನಂದ ಹೊಂಬಳ
ಏಕಲವ್ಯ ಪ್ರಶಸ್ತಿಯೊಂದಿಗೆ ಶಿವಾನಂದ ಹೊಂಬಳ

*
ನಾನು ಈ ಮಟ್ಟಕ್ಕೆ ಬೆಳೆಯಲು ಪ್ರೌಢಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಜೆ.ಎನ್.ಗೋಡ್ಕಿಂಡಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಎಂ.ಎಂ.ಕಲಹಾಳ ಅವರು ಸ್ಪೂರ್ತಿ
-ಡಾ.ಶಿವಾನಂದ ಹೊಂಬಳ, ಎಎಫ್‌ಎ ತರಬೇತುದಾರ

*
ಶಿವಾನಂದ ಹೊಂಬಳ ಅವರ ಓಟವನ್ನು ನೋಡುವುದೇ ಚೆಂದ. ಅವರ ಓಟಕ್ಕೆ ಅವರೇ ಸಾಟಿ. ಅವರ ನಂತರ ಈ ಭಾಗದಿಂದ ಅಂತರರಾಷ್ಟ್ರೀಯ ಮಟ್ಟದ ಮತ್ತೋರ್ವ ಪ್ರತಿಭೆ ಕಂಡಿಲ್ಲ
–ಎಂ.ಎಂ.ಕಲಹಾಳ, ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT