ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ಚಟುವಟಿಕೆಗಳಿಗೆ ಮಠದ ಶ್ರೀರಕ್ಷೆ

ಗದಗ ಜಿಲ್ಲಾ ಕಸಾಪ ಕಾರ್ಯಾಲಯ ಪ್ರಾರಂಭೋತ್ಸವದಲ್ಲಿ ತೋಂಟದ ಶ್ರೀ
Last Updated 8 ಅಕ್ಟೋಬರ್ 2022, 6:21 IST
ಅಕ್ಷರ ಗಾತ್ರ

ಗದಗ: ‘ಸಾಂಸ್ಕೃತಿಕ ಶ್ರೀಮಂತಿಕೆ, ಸಾಹಿತ್ಯಿಕ ವೈಭವವನ್ನು ಕಂಡ ನಗರ ಗದಗ. ಇಲ್ಲಿ ಪರಿಷತ್ತಿನ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೈಕೊಳ್ಳುವ ಕನ್ನಡ ಪರ ಚಟುವಟಿಕೆಗಳಿಗೆ ಶ್ರೀಮಠ ಸದಾ ಬೆನ್ನೆಲುಬಾಗಿ ನಿಲ್ಲಲಿದೆ’ ಎಂದು ಡಾ. ಸಿದ್ಧರಾಮ ಸ್ವಾಮೀಜಿ ತಿಳಿಸಿದರು.

ನಗರದ ಕೆ.ಸಿ.ರಾಣಿ ರಸ್ತೆಯಲ್ಲಿರುವ ‘ತೋಂಟದ ಸಿದ್ಧಲಿಂಗ ಶ್ರೀಗಳ ಕನ್ನಡ ಭವನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಾಲಯ ಮಾಡಿಕೊಂಡು ಸತತವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾಹಿತಿಗಳ ಆಶೋತ್ತರಗಳನ್ನು ಈಡೇರಿಸಬೇಕು. ಹೀಗಾಗಿ ಪರಿಷತ್ತಿನ ಅಧ್ಯಕ್ಷರು ಸ್ಥಳಾವಕಾಶ ನೀಡುವಂತೆ ವಿನಂತಿಸಿದ್ದಕ್ಕಾಗಿ ಕನ್ನಡದ ಕಾರ್ಯಕ್ರಮಗಳನ್ನು ಆಯೋಜಿಸಲು ಸುಸಜ್ಜಿತವಾದ ಕಟ್ಟಡ ನೀಡಲಾಗಿದೆ’ ಎಂದು ಶ್ರೀಗಳು ತಿಳಿಸಿದರು.

‘ಲಿಂ. ಡಾ.ತೋಂಟದ ಸಿದ್ದಲಿಂಗ ಶ್ರೀಗಳು ಕನ್ನಡದ ಜಗದ್ಗುರುಗಳೆಂದೇ ಖ್ಯಾತಿ ಹೊಂದಿದವರು. ಅವರ ಸ್ಮರಣೆಯಲ್ಲಿ ಸುಸಜ್ಜಿತವಾದ ಕನ್ನಡ ಭವನವನ್ನು ನಿರ್ಮಿಸಲು ಈಗಾಗಲೇ ಶ್ರೀಮಠವು ಸನ್ನದ್ಧವಾಗಿದೆ. ಈ ಕುರಿತು ಸರ್ಕಾರಕ್ಕೆ ಸಂದೇಶ ರವಾನೆ ಮಾಡಿದ್ಧೇವೆ. ನಗರದ ಮಧ್ಯಭಾಗದಲ್ಲಿ ಸುಮಾರು 20 ಗುಂಟೆ ಸ್ಥಳವನ್ನು ಕನ್ನಡ ಭವನಕ್ಕೆ ಶ್ರೀಮಠದಿಂದ ನೀಡಬೇಕೆನ್ನುವ ಆಕಾಂಕ್ಷೆ ನಮ್ಮದಾಗಿದೆ’ ಎಂದು ತಿಳಿಸಿದರು.

‘ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಕಟ್ಟಡದ ಕೊರತೆ ಇದ್ದು, ಶಾಶ್ವತ ಪರಿಹಾರ ಒದಗಿಸುವ ದಿಸೆಯಲ್ಲಿ ಮುಂದಡಿ ಇಡಲಾಗಿದೆ. ಲಿಂ. ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿಯವರ ಪುಸ್ತಕ ಪ್ರೇಮ, ಸಾಹಿತ್ಯಿಕ ಸಂಪನ್ನತೆ, ಕನ್ನಡಕ್ಕೆ ನ್ಯಾಯ ಒದಗಿಸುವ ಕಳಕಳಿಯನ್ನು ನಾವು ಜೀವಂತವಾಗಿರಿಸುವ ಹಿನ್ನೆಲೆಯಲ್ಲಿ ಒಂದೆರಡು ವರ್ಷಗಳಲ್ಲಿ ಕನ್ನಡ ಭವನವದ ಕಟ್ಟಡವನ್ನು ಪೂರ್ಣಗೊಳಿಸಲಾಗುವುದು. ಶ್ರೀಗಳ ಕನ್ನಡ ಪ್ರೇಮವನ್ನು ಚಿರಸ್ಥಾಯಿಯಾಗಿ ಇರಿಸಬೇಕೆನ್ನುವುದು ನಮ್ಮ ಆಶಯವಾಗಿದೆ. ಅದಕ್ಕಾಗಿ ಜನಪ್ರತಿನಿಧಿಗಳು ಸಾಹಿತಿಗಳು ಸಾರ್ವಜನಿಕರು ಕೈಜೋಡಿಸಿ ಈ ಕಾರ್ಯವನ್ನು ಪೂರ್ಣಗೊಳಿಸಲು ನೆರವಾಗಬೇಕು’ ಎಂದು ಆಶಿಸಿದರು.

ವಿಧಾನ ಪರಿಷತ್‌ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ, ‘ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಒಂದು ಕಾರ್ಯಾಲಯದ ಅವಶ್ಯಕತೆ ಇತ್ತು. ಕನ್ನಡದ ಕಾರ್ಯ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕೆನ್ನುವ ಆಶಯದಿಂದ ಸಿದ್ದರಾಮ ಶ್ರೀಗಳು ಪರಿಷತ್ತಿಗೆ ಉಚಿತವಾಗಿ ಸ್ಥಳಾವಕಾಶ ನೀಡಿದ್ದಾರೆ. ಕಟ್ಟಡದ ಕಾರ್ಯವನ್ನು ಪ್ರಾರಂಭಿಸಿದಲ್ಲಿ ಶಾಸಕರ ನಿಧಿಯಿಂದ ಅನುದಾನ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ‘ಕನ್ನಡದ ಚಟುವಟಿಕೆಗಳನ್ನು ನಡೆಸಲು ಜಾಗಕ್ಕಾಗಿ ಅಲೆದಾಡುವ ಪರಿಸ್ಥಿತಿ ತಲೆದೋರಿತ್ತು. ಅದಕ್ಕಾಗಿ ಶ್ರೀಗಳಿಗೆ ವಿಷಯವನ್ನು ನಿವೇದಿಸಿದಾಗ ಕೇವಲ ಎರಡು ತಾಸಿನಲ್ಲಿ ನಮ್ಮ ಸಮಸ್ಯೆಯನ್ನು ಬಗೆಹರಿಸಿ ಪರಿಷತ್ತಿಗೆ ಬೆಲೆಬಾಳುವ ಕಟ್ಟಡವನ್ನು ಉಚಿತವಾಗಿ ನೀಡಿದ್ದಾರೆ. ಇದು ಶ್ರೀಗಳ ಕನ್ನಡ ಕಾಳಜಿ ಹಾಗೂ ಹೃದಯವೈಶಾಲ್ಯತೆ ತೋರಿಸುತ್ತದೆ’ ಎಂದು ಹೇಳಿದರು.

ತೋಂಟದಾರ್ಯ ವಿದ್ಯಾಪೀಠದ ಆಡಳಿತಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟಿ, ಅನುದಾನಿತ ಖಾಸಗಿ ಪ್ರೌಢಶಾಲಾ ಮಂಡಳಿ ಅಧ್ಯಕ್ಷ ಡಾ. ಬಸವರಾಜ ಧಾರವಾಡ ,ಕ.ಸಾ.ಪ ಮಾಜಿ ಅಧ್ಯಕ್ಷ ಡಾ. ಶಿವಪ್ಪ ಕುರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT