ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಗುಂದ: ಕಡಲೆ ಕುಡಿ ಚಿವುಟಲು ಹೊಸ ತಂತ್ರಜ್ಞಾನ

ಕೂಲಿ ಹೆಚ್ಚಿಗೆ ಕೊಟ್ಟರೂ ಕೆಲಸಕ್ಕೆ ಬರಲು ಹಿಂದೇಟು ಹಾಕುವ ಕೂಲಿಕಾರರು
Last Updated 9 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ನರಗುಂದ: ಅತಿವೃಷ್ಟಿ ನಂತರ ತಾಲ್ಲೂಕಿನ ಹೆಚ್ಚಿನ ರೈತರು ಹಿಂಗಾರು ಬೆಳೆಯಾದ ಕಡಲೆಯನ್ನು ಹೆಚ್ಚು ಬಿತ್ತನೆ ಮಾಡಿದ್ದಾರೆ.

ಆಹಾರಧಾನ್ಯ ಹಾಗೂ ವಾಣಿಜ್ಯ ಬೆಳೆಯಂತಿರುವ ಕಡಲೆ ಬೆಳೆ ಈಗ ಒಂದು ತಿಂಗಳು ಪೂರೈಸಿದೆ. ಹೆಚ್ಚಿನ ಇಳುವರಿ ಪಡೆಯಬೇಕೆಂದರೆ ಈ ಸಮಯದಲ್ಲಿ ಕಡಲೆ ಸಸಿಯ ಕುಡಿ ಚಿವುಟಬೇಕು. ಆದರೆ, ಆಳುಗಳ ಕೊರತೆ ರೈತರನ್ನು ಕಾಡುತ್ತಿದೆ. ಜತೆಗೆ ಇದು ಹೆಚ್ಚಿನ ಸಮಯ ಹಿಡಿಯುವುದರಿಂದ ಕೂಲಿ ಹೆಚ್ಚಿಗೆ ಕೊಡುತ್ತೇನೆಂದರೂ ಕೆಲಸಕ್ಕೆ ಬರಲು ಹೆಚ್ಚಿನವರು ಹಿಂದೇಟು ಹಾಕುತ್ತಾರೆ.

ರೈತರಿಗೆ ಎದುರಾಗಿರುವ ಈ ಬಗೆಯ ಕಷ್ಟ ಪರಿಹರಿಸಿ, ಅವರಿಗೆ ಅನುಕೂಲ ಮಾಡಿ ಕೊಡಲು ಕೃಷಿ ಇಲಾಖೆ ಆತ್ಮಾ ಯೋಜನೆ ಮೂಲಕ ಹೊಸ ತಂತ್ರಜ್ಞಾನ ಪರಿಚಯಿಸಿದೆ. ಇದರಿಂದ ತುಂಬ ಸುಲಭವಾಗಿ ಕಡಲೆಯ ಕುಡಿ ಕತ್ತರಿಸಲು ಸಾಧ್ಯ ಎನ್ನುತ್ತಾರೆ ಅಧಿಕಾರಿಗಳು.

ಹೊಸ ತಂತ್ರಜ್ಞಾನ: ಹೆಲ್ಮೆಟ್ ಒಳಗೊಂಡ ಸೋಲಾರ್ ಪ್ಯಾನಲ್, ವಿದ್ಯುತ್ ವಾಹಕ ತಂತಿ ಒಳಗೊಂಡ ಪ್ಲಾಸ್ಟಿಕ್ ಸ್ಟಿಕ್ ಹಾಗೂ ಮೂರು ಬ್ಲೇಡ್‌ಗಳನ್ನು ಇದು ಒಳಗೊಂಡಿದೆ. ಇದನ್ನು ಬಳಸಿ ರೈತರು ಕುಡಿ ಕತ್ತರಿಸಬಹುದಾಗಿದೆ.

ಕೃಷಿ ಇಲಾಖೆ ಈ ತಂತ್ರಜ್ಞಾನದ ಬಗ್ಗೆ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ಕ್ಷೇತ್ರ ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ತರಬೇತಿ ನೀಡುತ್ತಿದೆ. ಗಂಗಾಪುರ, ಬನಹಟ್ಟಿಗಳಲ್ಲಿ ಮೊದಲ ಹಂತದಲ್ಲಿ ತರಬೇತಿ ಮುಗಿದಿದೆ. ಈ ತಂತ್ರಜ್ಞಾನ ಬಳಕೆಯಿಂದ ಸಮಯ ಉಳಿತಾಯ, ಕಡಿಮೆ ಖರ್ಚು ಹಾಗೂ ಕುಡಿ ಚಿವುಟಿದ್ದರಿಂದ ಹೆಚ್ಚು ಇಳುವರಿ ಪಡೆಯಲು ಸಾಧ್ಯವಾಗುತ್ತಿರುವುದು ರೈತರಿಗೆ ಸಂತಸ ತಂದಿದೆ.

‘ಕಡಲೆ ಚಿವುಟಬೇಕು. ಆದರೆ ಆಳುಗಳ ಕೊರತೆ ಇತ್ತು. ಈಗ ಹೊಸ ಸಾಧನ ಬಂದಿದೆ. ಕುಡಿ ಚಿವುಟಲು ತಂತ್ರಜ್ಞಾನ ಬಳಕೆ ಮಾಡುತ್ತಿದ್ದೇವೆ’ ಎನ್ನುತ್ತಾರೆ ಗಂಗಾಪುರದ ರೈತ ಮಲ್ಲಿಕಾರ್ಜುನ ಪಾಟೀಲ.

‘ರೈತರು ಕಡಲೆ ಬೆಳೆ ಕುಡಿ ಕತ್ತರಿಸಲು ಹೊಸ ತಂತ್ರಜ್ಞಾನ ಬಳಸಲು ಮುಂದಾಗಬೇಕು. ಇದರಿಂದ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ. ಈ ಸಾಧನವನ್ನು ರೈತರೇ ತಯಾರಿಸಿಕೊಳ್ಳಬಹುದು. ಈಗ ವಿಜಯಪುರದಲ್ಲಿ ಕಡಿಮೆ ಬೆಲೆಗೆ ದೊರೆಯುತ್ತಿದೆ’ ಎನ್ನುತ್ತಾರೆ ಆತ್ಮಾ ಯೋಜನೆ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕ ಬಿ.ಬಿ.ಹಾಲವರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT