ಮಂಗಳವಾರ, ಜೂನ್ 28, 2022
21 °C
ಗ್ರಾಮಾರೋಗ್ಯ

ಗದಗ: ತುರ್ತು ಸಂದರ್ಭದಲ್ಲಿ ಸಿಗದ ಚಿಕಿತ್ಸೆ, ಹದಗೆಟ್ಟ ಗ್ರಾಮೀಣ ಆರೋಗ್ಯ ವ್ಯವಸ್ಥೆ

ಕೆ.ಎಂ.ಸತೀಶ್‌ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

Prajavani

ಗದಗ: ಜಿಲ್ಲೆಯ ಗ್ರಾಮೀಣ ಭಾಗದ ಆಸ್ಪತ್ರೆಗಳು ಸಿಬ್ಬಂದಿ ಕೊರತೆಯಿಂದ ರೋಗಗ್ರಸ್ತಗೊಂಡಿವೆ. ಸುಸಜ್ಜಿತ ಕೋವಿಡ್‌ ಆರೈಕೆ ಕೇಂದ್ರಗಳಿದ್ದರೂ ಸೋಂಕಿತರು ಅಲ್ಲಿಗೆ ಬರಲು ಒಪ್ಪುತ್ತಿಲ್ಲ. ಲಸಿಕೆ ಪ್ರಕ್ರಿಯೆ ಮಾತ್ರ ನಿರಂತರವಾಗಿ ನಡೆಯುತ್ತಿದೆ. ಜಿಲ್ಲೆಯಲ್ಲಿ ಸೋಂಕು ನಿಯಂತ್ರಣದಲ್ಲಿದೆ ಎಂದು ಜಿಲ್ಲಾಡಳಿತ ಹೇಳುತ್ತದೆ. ಆದರೆ, ಸ್ಮಶಾನದಲ್ಲಿ ಪ್ರತಿನಿತ್ಯ ಸುಟ್ಟು ಬೂದಿಯಾಗುವ ಹೆಣಗಳ ಸಂಖ್ಯೆ ಬೇರೆಯದೇ ಚಿತ್ರಣ ನೀಡುತ್ತವೆ. ಒಟ್ಟಾರೆಯಾಗಿ, ಜಿಲ್ಲೆಯ ಕೋವಿಡ್‌ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಇದೆ.

ಜಿಲ್ಲೆಯಲ್ಲಿನ ಗ್ರಾಮೀಣ ಪ್ರದೇಶದ ಜನರು ಈಗಲೂ ಕೋವಿಡ್‌ ಅನ್ನು ಗಂಭೀರವಾಗಿ ಪರಿಗಣಿಸಿಲ್ಲ. ಲಕ್ಷ ರೂಪಾಯಿ ಸಂಬಳ ಕೊಡುತ್ತೇನೆಂದರೂ ಗದಗ ಜಿಲ್ಲೆಗೆ ಬಂದು ಕೆಲಸ ಮಾಡುವ ಉತ್ಸಾಹವನ್ನು ಯಾವ ಎಂಬಿಬಿಎಸ್‌ ವೈದ್ಯರೂ ತೋರುತ್ತಿಲ್ಲ. ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯೂ ಸೇರಿದಂತೆ 4 ತಾಲ್ಲೂಕು ಆಸ್ಪತ್ರೆ, 3 ಸಮುದಾಯ ಆರೋಗ್ಯ ಕೇಂದ್ರ, 42 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ 190 ಸಬ್‌ ಸೆಂಟರ್‌ಗಳಲ್ಲಿ ವೈದ್ಯರು, ತಜ್ಞ ವೈದ್ಯರು ಹಾಗೂ ಸಿಬ್ಬಂದಿಯ ಕೊರತೆ ಕಾಡುತ್ತಿದೆ. ಸದ್ಯಕ್ಕೆ ಆಯುರ್ವೇದ ಕಲಿತವರೇ ಗ್ರಾಮೀಣ ಭಾಗದ ರೋಗಿಗಳ ಪಾಲಿಗೆ ಸಂಜೀವಿನಿಯಾಗಿದ್ದಾರೆ.

ಏಳು ತಾಲ್ಲೂಕುಗಳಿದ್ದರೂ ತಾಲ್ಲೂಕು ಆಸ್ಪತ್ರೆಗಳಿರುವುದು ನಾಲ್ಕರಲ್ಲಿ ಮಾತ್ರ. ಲಕ್ಷ್ಮೇಶ್ವರ ಮತ್ತು ಗಜೇಂದ್ರಗಡಗಳಲ್ಲಿ ಈಗಲೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ತಾಲ್ಲೂಕುಗಳಲ್ಲಿ ಆಂಬುಲೆನ್ಸ್‌ ಕೊರತೆಯೂ ಕಾಡುತ್ತಿದೆ.

ಗಜೇಂದ್ರಗಡ ತಾಲ್ಲೂಕಿನ ನರೇಗಲ್‌ ಅಂದಾಜು 25 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಊರು. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸುತ್ತಲಿನ 10 ಹಳ್ಳಿಗಳ ಜನರು ಅವಲಂಬಿಸಿದ್ದಾರೆ. 

‘ಈ ಎರಡು ತಿಂಗಳ ಅವಧಿಯಲ್ಲಿ ನರೇಗಲ್‌ ಭಾಗದಲ್ಲಿ 140 ಮಂದಿಗೆ ಕೋವಿಡ್‌ ದೃಢಪಟ್ಟಿದೆ. ಹೆಚ್ಚಿನವರು ಹೋಂ ಐಸೊಲೇಷನ್‌ನಲ್ಲೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಗಂಭೀರ ಪರಿಸ್ಥಿತಿ ಇದ್ದ ಐವರನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದೆವು’ ಎಂದು ನರೇಗಲ್‌ ವೈದ್ಯಾಧಿಕಾರಿ ಡಾ. ಎ.ಡಿ.ಸಾಮುದ್ರಿ ತಿಳಿಸಿದರು.

‘ನರೇಗಲ್‌ ಭಾಗದಲ್ಲಿ ಸೋಂಕು ಪ್ರಮಾಣ ಹೆಚ್ಚುತ್ತಿದ್ದು, ಕೋವಿಡ್‌ ಆರೈಕೆ ಕೇಂದ್ರದ ಅವಶ್ಯಕತೆ ಹೆಚ್ಚಿದೆ. ಈ ಪಿಎಚ್‌ಸಿಗೆ ಆಂಬುಲೆನ್ಸ್‌ ಕೊಡಬೇಕು. ಆರೈಕೆ ಕೇಂದ್ರ ತೆರೆಯಲು ಕಟ್ಟಡ ಲಭ್ಯವಿದ್ದು, ಅದರ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಸ್ಥಳೀಯರಾದ ಅಶೋಕ ಬೇವಿನಕಟ್ಟಿ, ದಾವುದ್‌ ಅಲಿ ಕುದರಿ, ಶಿವನಗೌಡ ಪಾಟೀಲ ಆಗ್ರಹಿಸಿದರು.

ಒಂದೆಡೆ ಜನರು ಆರೈಕೆ ಕೇಂದ್ರ ತೆರೆಯುವಂತೆ ಆಗ್ರಹಿಸುತ್ತಾರೆ. ಆದರೆ ಜಿಲ್ಲಾಡಳಿತದ ವತಿಯಿಂದ ತೆರೆದಿರುವ ಸುಸಜ್ಜಿತ ಕೇಂದ್ರಗಳಲ್ಲಿ ಮುಕ್ಕಾಲು ಪಾಲು ಹಾಸಿಗೆಗಳು ಖಾಲಿ ಬಿದ್ದಿವೆ.

ಜಿಲ್ಲೆಯ ವಿವಿಧೆಡೆ 2000 ಹಾಸಿಗೆ ಸಾಮರ್ಥ್ಯದ 15ಕ್ಕೂ ಅಧಿಕ ಕೋವಿಡ್‌ ಆರೈಕೆ ಕೇಂದ್ರಗಳನ್ನು ತೆರೆಯಲಾಗಿದೆ. ಹೊಸದಾಗಿ ಸೋಂಕು ದೃಢಪಟ್ಟ ಎಲ್ಲರನ್ನೂ ಕೋವಿಡ್‌ ಆರೈಕೆ ಕೇಂದ್ರಗಳಿಗೆ ದಾಖಲಿಸಬೇಕು ಎಂದು ಜಿಲ್ಲಾಧಿಕಾರಿ ಈಗ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಅದರ ಅನುಷ್ಠಾನಕ್ಕಾಗಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯ್ತಿ ಹಾಗೂ ಪೊಲೀಸ್‌ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.  ಪ್ರತಿ ಕೇಂದ್ರದಲ್ಲಿ ಶೇ 15ರಿಂದ 20ರಷ್ಟು ಹಾಸಿಗೆಗಳು ಮಾತ್ರ ಭರ್ತಿಯಾಗಿವೆ. 

ಮುಳಗುಂದ ವ್ಯಾಪ್ತಿಯಲ್ಲಿ 132 ಮಂದಿ ಸೋಂಕಿತರು ಇದ್ದಾರೆ. 100 ಹಾಸಿಗೆಗಳ ಸುಸಜ್ಜಿತ ಕೋವಿಡ್‌ ಕೇಂದ್ರ ತೆರೆಯಲಾಗಿದೆ. ಆದರೆ, ಏಳು ಮಂದಿ ಮಾತ್ರ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಜೇಂದ್ರಗಡ ತಾಲ್ಲೂಕಿನಲ್ಲಿ 50 ಹಾಸಿಗೆಗಳ ಆರೈಕೆ ಕೇಂದ್ರ ತೆರೆಯಲಾಗಿದೆ. ದಾಖಲಿರುವುದು 15 ಮಂದಿ ಮಾತ್ರ. ರೋಣ ಮತ್ತು ನರಗುಂದ ತಾಲ್ಲೂಕಿನ ಚಿಕ್ಕನರಗುಂದ, ಲಕ್ಷ್ಮೇಶ್ವರ, ಶಿರಹಟ್ಟಿಗಳಲ್ಲಿ ಕೇಂದ್ರಗಳಿದ್ದರೂ ಸೋಂಕಿತರು ಇಲ್ಲಿಗೆ ಬರಲು ಒಪ್ಪುತ್ತಿಲ್ಲ.

‘ಶೇ 80ರಷ್ಟು ಸೋಂಕಿತರು ಕಾಳಜಿ ಕೇಂದ್ರಕ್ಕೆ ಬರಲು ಒಪ್ಪುತ್ತಿಲ್ಲ. ಅಧಿಕಾರದ ಬಲ ಪ್ರಯೋಗಿಸಿ ಕರೆದೊಯ್ಯುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಚಿಕ್ಕನರಗುಂದ ಪಂಚಾಯ್ತಿ ಪಿಡಿಒ ಶಹನಾಜ್‌ ಹೇಳಿದರು.

‘ಬೆಳ್ಳಟ್ಟಿ ಗ್ರಾಮ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ಸುತ್ತಮುತ್ತಲಿನ 32 ಹಳ್ಳಿಗಳ ಜನರು ಪ್ರತಿಯೊಂದಕ್ಕೂ ಈ ಊರನ್ನೇ ಅವಲಂಬಿಸಿದ್ದಾರೆ. ಸೋಂಕು ನಿಯಂತ್ರಣಕ್ಕೆ ಪಂಚಾಯ್ತಿ ವತಿಯಿಂದ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ವಿಲೇಜ್‌ ಟಾಸ್ಕ್‌ಫೋರ್ಸ್‌ ಎಂಬ ವಾಟ್ಸ್ಆ್ಯಪ್‌ ಗ್ರೂಪ್‌ ರಚಿಸಿದ್ದು, ಆಶಾ ಕಾರ್ಯಕರ್ತೆಯರು ಪ್ರತಿದಿನದ ಸ್ಥಿತಿಗತಿಯನ್ನು ಅಪ್‌ಡೇಟ್‌ ಮಾಡುತ್ತಾರೆ’ ಎನ್ನುತ್ತಾರೆ ಬೆಳ್ಳಟ್ಟಿ ಪಂಚಾಯ್ತಿ ಪಿಡಿಒ ಸುರೇಶ್‌ ಕಲ್ಲೋದರ.

ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಔಷಧ, ಲಸಿಕೆಗಳು ನಿರಂತರವಾಗಿ ಪೂರೈಕೆ ಆಗುತ್ತಿವೆ. ಬಹುತೇಕ ಆಸ್ಪತ್ರೆಗಳು ಉತ್ತಮ ಕಟ್ಟಡ ಹೊಂದಿವೆ. ಲಕ್ಷ್ಮೇಶ್ವರ ತಾಲ್ಲೂಕಿನ ಶಿಗ್ಲಿ ಆರೋಗ್ಯ ಕೇಂದ್ರದಲ್ಲಿ ಪಾಳಿ ಅನುಸಾರ ವೈದ್ಯರು ಕರ್ತವ್ಯಕ್ಕೆ ಹಾಜರಾಗುತ್ತಾರೆ. ಗಡಿ ಗ್ರಾಮ ಬಾಲೆಹೊಸೂರಿನಲ್ಲಿ ಸುಸಜ್ಜಿತ ಕಟ್ಟಡ ಇದ್ದು, ಅಲ್ಲಿ ವೈದ್ಯರೇ ಇಲ್ಲ.

ಜಿಲ್ಲೆಯ ಮುಂಡರಗಿ, ಲಕ್ಷ್ಮೇಶ್ವರ, ಶಿರಹಟ್ಟಿ, ನರಗುಂದ ತಾಲ್ಲೂಕುಗಳ ಪರಿಸ್ಥಿತಿ ಒಂದು ರೀತಿಯದ್ದಾದರೆ, ಗಜೇಂದ್ರಗಡ ಹಾಗೂ ರೋಣ ತಾಲ್ಲೂಕಿನಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಲಾಕ್‌ಡೌನ್‌ ಜಾರಿಯಲ್ಲಿದ್ದರೂ ಇಲ್ಲಿ ಇಡೀ ದಿನ ಜನ ಸಂಚಾರ ಜೋರಾಗಿತ್ತು. ಅಂಗಡಿಗಳು ತೆರೆದಿದ್ದವು. ಹೋಟೆಲ್‌ಗಳಲ್ಲಿ ಕಾಫಿ ತಿಂಡಿ ಸರಬರಾಜು ಕೂಡ ಎಂದಿನಂತೆಯೇ ಇತ್ತು.  

‘ಜನರು ಜಾಗೃತರಾಗದ ತನಕ ಕೋವಿಡ್‌ ನಿಯಂತ್ರಣಕ್ಕೆ ಬರುವುದಿಲ್ಲ. ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್‌ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಿ, ಸೋಂಕು ಸರಪಳಿ ತುಂಡರಿಸಬೇಕು’ ಎಂದು ನರೇಗಲ್‌ನ ನಿಂಗನಗೌಡ ಲಕ್ಕನಗೌಡ್ರ ಆಗ್ರಹಿಸುತ್ತಾರೆ.

ವೆಂಟಿಲೇಟರ್‌ ಕೊರತೆ; ಸಾವಿನ ಪ್ರಮಾಣದಲ್ಲಿ ಹೆಚ್ಚಳ
ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ರೋಗಿಯ ಪರಿಸ್ಥಿತಿ ಗಂಭೀರವಾದರೆ ಹೆಚ್ಚಿನ ಚಿಕಿತ್ಸೆಗೆ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಬೇಕು. ಆದರೆ, ಜಿಮ್ಸ್‌ನಲ್ಲಿರುವ 78 ವೆಂಟಿಲೇಟರ್‌ಗಳು ಸದಾ ಭರ್ತಿಯಾಗಿರುತ್ತವೆ. ವೆಂಟಿಲೇಟರ್‌ ಬೆಡ್‌ಗಾಗಿ ದಿನವೂ ಕನಿಷ್ಠ 15 ಮಂದಿ ರೋಗಿಗಳು ಕ್ಯೂನಲ್ಲಿ ಇರುತ್ತಾರೆ.

ಜಿಲ್ಲೆಯ ಯಾವ ತಾಲ್ಲೂಕು ಆಸ್ಪತ್ರೆಯಲ್ಲೂ ವೆಂಟಿಲೇಟರ್‌ ಸೌಲಭ್ಯ ಇಲ್ಲ. ಅವುಗಳ ನಿರ್ವಹಣೆಗೆ ಅಗತ್ಯ ಸಿಬ್ಬಂದಿ ಇಲ್ಲದ್ದರಿಂದ ಅಲ್ಲಿಯ ವೆಂಟಿಲೇಟರ್‌ಗಳನ್ನು ಜಿಲ್ಲಾ ಆಸ್ಪತ್ರೆಗೆ ನೀಡಲಾಗಿದೆ. 

ವೆಂಟಿಲೇಟರ್‌ ಬೆಡ್‌ ಸಿಗದ ಕಾರಣ ಮುಂಡರಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಾಲ್ಕು ಮಂದಿ ಹಾಗೂ ರೋಣ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂರು ಮಂದಿ ಕೋವಿಡ್‌ ರೋಗಿಗಳು ಈಚೆಗಷ್ಟೇ ಮೃತಪಟ್ಟಿದ್ದರು.

***
ಲಾಕ್‌ಡೌನ್‌ ಕಾರಣದಿಂದ ಊರಿಗೆ ಹಿಂದಿರುಗಿದ 34 ಮಂದಿಯನ್ನು ತಕ್ಷಣವೇ ಹೋಂ ಕ್ವಾರಂಟೈನ್‌ ಮಾಡಿದ್ದರಿಂದ ಸೋಂಕು ನಿಯಂತ್ರಣಕ್ಕೆ ಬಂತು.

-ಸುರೇಶ್‌ ಕಲ್ಲೋದರ

***
ಜಿಲ್ಲಾಡಳಿತ ನರೇಗಲ್‌ನಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ತೆರೆದು ಅಗತ್ಯ ಸಿಬ್ಬಂದಿ ಒದಗಿಸಿದರೆ, ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಇಲ್ಲಿಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲು ಸಮಸ್ಯೆ ಇಲ್ಲ.

-ಡಾ. ಎ.ಡಿ.ಸಾಮುದ್ರಿ, ನರೇಗಲ್‌ ವೈದ್ಯಾಧಿಕಾರಿ ಬೆಳ್ಳಟ್ಟಿ ಗ್ರಾಮ ಪಂಚಾಯ್ತಿ ಪಿಡಿಒ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು