ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದಲ್ಲಿ ಲಿಂಗಾಯತರನ್ನು ಒಬಿಸಿಗೆ ಸೇರಿಸಲು ಶಿಫಾರಸು ಮಾಡಿ: CMಗೆ ತೋಂಟದ ಶ್ರೀ

ಗದಗ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ
Published 13 ಆಗಸ್ಟ್ 2023, 10:32 IST
Last Updated 13 ಆಗಸ್ಟ್ 2023, 10:41 IST
ಅಕ್ಷರ ಗಾತ್ರ

ಗದಗ: ಲಿಂಗಾಯತ ಧರ್ಮದ ಎಲ್ಲ ಒಳಪಂಗಡಗಳನ್ನು ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲು ಶಿಫಾರಸು ಮಾಡುವಂತೆ ಆಗ್ರಹಿಸಿ ಗದಗ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

‘ಎಲ್ಲ ಸಮುದಾಯಗಳಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರು ಇರುವಂತೆ ಲಿಂಗಾಯತ ಒಳಪಂಗಡಗಳಲ್ಲಿಯೂ ಇದ್ದಾರೆ. ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಅವರಿಗೆ ಮೀಸಲಾತಿಯ ಆವಶ್ಯಕತೆ ಇದ್ದೇ ಇದೆ’ ಎಂದು ಅವರು ಪತ್ರದಲ್ಲಿ ಒತ್ತಿ ಹೇಳಿದ್ದಾರೆ.

‘ಈಗಾಗಲೇ ಈ ಧರ್ಮದ ಕೆಲವು ಪಂಗಡಗಳು ಕೇಂದ್ರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಮತ್ತು ರಾಜ್ಯದ ವಿವಿಧ ಪ್ರವರ್ಗಗಳಲ್ಲಿ ಸ್ಥಾನ ಪಡೆದಿವೆ. ಇನ್ನುಳಿದ ಒಳಪಂಗಡಗಳಲ್ಲಿರುವ ಬಡವರ ಅಭಿವೃದ್ಧಿ ಮತ್ತು ಹಿತದೃಷ್ಟಿಯಿಂದ ಈ ಒಳಪಂಗಡಗಳಿಗೂ ಮೀಸಲಾತಿ ಸೌಲಭ್ಯ ಕಲ್ಪಿಸಿಕೊಡುವುದು ಅಗತ್ಯವಾಗಿದೆ’ ಎಂದೂ ತಿಳಿಸಿದ್ದಾರೆ.

ಕರ್ನಾಟಕದ ವಿವಿಧ ಸಮುದಾಯ ಮತ್ತು ಜಾತಿಗಳಿಗೆ ಸಂಬಂಧಿಸಿದ ಸಂಘಟನೆಗಳು ಮೀಸಲಾತಿಗಾಗಿ ವಿಭಿನ್ನ ರೀತಿಯಲ್ಲಿ ಹೋರಾಟ ಮಾಡುತ್ತಿರುವುದು, ಬೇಡಿಕೆಗಳನ್ನು ಮಂಡಿಸುತ್ತಿರುವುದು ತಮ್ಮ ಗಮನಕ್ಕೆ ಬಂದಿರುವ ಸಂಗತಿ. ಇದರ ಹಿಂದೆ ಆಯಾ ಸಮುದಾಯ ಹಾಗೂ ಜಾತಿಗಳ ಏಳಿಗೆಯ ಆಶಯವಿರುವುದು ಸ್ಪಷ್ಟ. ಎಲ್ಲರ ಆಶಯಗಳನ್ನು ಈಡೇರಿಸುವುದು ಕಷ್ಟಸಾಧ್ಯವಾದರೂ ಆ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬಹುದಾಗಿದೆ. ಇದಕ್ಕಾಗಿ ಹಿಂದುಳಿದ ವರ್ಗಗಳ ಆಯೋಗದಿಂದ ವರದಿಯನ್ನು ಪಡೆದು, ಸಂಪುಟ ಸಭೆಯಲ್ಲಿ ಚರ್ಚಿಸಿ, ಅಗತ್ಯವೆನಿಸಿದರೆ ಶಾಸನ ಸಭೆಯ ಒಪ್ಪಿಗೆ ಪಡೆದು ತೀರ್ಮಾನ ಕೈಗೊಳ್ಳಬೇಕು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

‘ಕೇಂದ್ರ ಹಿಂದುಳಿದ ವರ್ಗಗಳ ಪಟ್ಟಿಗೆ ಲಿಂಗಾಯತ ಎಲ್ಲ ಒಳಪಂಗಡಗಳನ್ನೂ ಸೇರಿಸಬೇಕೆಂಬ ಆಗ್ರಹದ ಹಿನ್ನೆಲೆಯಲ್ಲಿ ಆಯಾ ಸಮುದಾಯ ಮತ್ತು ಪಂಗಡಗಳ ಸಂಘಟನೆಗಳೊಂದಿಗೆ ಸಮಾಲೋಚಿಸಿ ಅಭಿಪ್ರಾಯ ಪಡೆದು ಕೇಂದ್ರ ಸರ್ಕಾರ ಮತ್ತು ಕೇಂದ್ರ ಹಿಂದುಳಿದ ವರ್ಗಗಳ ಆಯೋಗಕ್ಕೆ ಶಿಫಾರಸು ಮಾಡಲು ಕ್ರಮವಹಿಸಬೇಕು’ ಎಂದು ಅವರು ಮುಖ್ಯಮಂತ್ರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT