ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ವಿರೋಧ ಸಲ್ಲ: ತೋಂಟದ ಶ್ರೀ

Last Updated 19 ಅಕ್ಟೋಬರ್ 2018, 15:19 IST
ಅಕ್ಷರ ಗಾತ್ರ

ಗದಗ: ‘ಭಾರತದ ಸಂವಿಧಾನದ ಮೂಲ ಆಶಯಗಳಿಗೆ ಬಸವ ತತ್ವವೇ ಅಡಿಗಲ್ಲು. ತಮ್ಮ ಮೂಗಿನ ನೇರದ ಅನುಕೂಲವಾದಿ ರಾಜಕಾರಣಕ್ಕೆ ಬಸವತತ್ವವನ್ನು ಬಳಸಿ, ಇತ್ತೀಚೆಗೆ ನೀಡಲಾಗುತ್ತಿರುವ ಹೇಳಿಕೆಗಳನ್ನು ಸಮಾಜ ಉಪೇಕ್ಷಿಸಬೇಕು’ಎಂದು ಗದುಗಿನ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದ್ದಾರೆ.

‘ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರತ್ಯೇಕ ಧರ್ಮ ಕುರಿತ ಕಾನೂನುಬದ್ಧ ಅವಕಾಶದ ಸಂಗತಿಯನ್ನು ಬಸವನುಯಾಯಿಗಳು ಮನಗಾಣಿಸಿದ್ದೇವೇ ವಿನಾ ಅವರ ಮುಂದೆ ನಾವು ಯಾವುದೇ ಸಹಾಯಕ್ಕೆ ಕೈ ಚಾಚಿರಲಿಲ್ಲ. ಸಿದ್ದರಾಮಯ್ಯ ಮತ್ತು ಅಂದಿನ ಸಚಿವ ಸಂಪುಟ ಕೂಡ, ಕಾನೂನುಬದ್ಧವಾಗಿ ತಾವು ಮಾಡಬೇಕಾಗಿದ್ದ ಕೆಲಸವನ್ನು ಮಾಡಿದ್ದಾರೆ. ಈ ಇಡೀ ವಿದ್ಯಮಾನಕ್ಕೆ ಈಗ ವೋಟು ಗಳಿಕೆಯ ರಾಜಕಾರಣದ ಬಣ್ಣ ಬಳಿಯುವುದು ಬಸವ ತತ್ವಕ್ಕೆ ಮಾಡುವ ಬಹುದೊಡ್ಡ ಅಪಚಾರ’ ಎಂದು ಅವರು ಪ್ರಕಟಣೆಯಲ್ಲಿ ದೂರಿದ್ದಾರೆ.

‘ಮನುಕುಲವೆಲ್ಲ ಒಂದು ಎಂದು ಸಮಾನತೆಯ ಬೆಳಕನ್ನು ಹರಡಿದ ಬಸವಣ್ಣ ಜಗತ್ತು ಕಂಡ ಬಹುದೊಡ್ಡ ಸಮಾನತೆಯ ಹರಿಕಾರ. ಎಲ್ಲ ಸಾಮಾಜಿಕ- ರಾಜಕೀಯ ಭೇದ ಭಾವಗಳನ್ನು ಮೀರಿ ಬಾನೆತ್ತರಕ್ಕೆ ನಿಂತ ಮಾನವೀಯ ತತ್ವದ ಮತ್ತೊಂದು ಹೆಸರೇ ಬಸವಣ್ಣ.ಬಸವಣ್ಣ ಮತ್ತು ಆತನ ತತ್ವ ಸ್ವಯಂಪ್ರಕಾಶಿತ. ಆತನ ಮೇರು ವ್ಯಕ್ತಿತ್ವ ಮತ್ತು ಉನ್ನತ ಜೀವಪರ ತತ್ವಗಳನ್ನು ರಾಜಕೀಯ ಹೇಳಿಕೆಗಳಿಂದ ಕುಗ್ಗಿಸುವ ಭ್ರಮೆಯನ್ನು ಕೂಡಲೇ ಕೈಬಿಡತಕ್ಕದ್ದು’ ಎಂದು ಸ್ವಾಮೀಜಿ ಆಗ್ರಹಿಸಿದ್ದಾರೆ.

‘ಬಸವಣ್ಣ ಸ್ಥಾಪಿಸಿದ ಸಮಾನತೆ ಸಾರುವ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಸಿಗುವವರೆಗೆ ಈ ಹೋರಾಟ ನಿರಂತರ. ಈ ಹೋರಾಟ ಬೆಂಬಲಿಸಿದವರನ್ನು ಸಮಾಜ ಸ್ಮರಿಸಬೇಕು. ವಿರೋಧಿಸಿದವರನ್ನು ಹಾಗೂ ವಿರೋಧಿಸುತ್ತಿರುವವರನ್ನು ಸಮಾಜ ಉಪೇಕ್ಷಿಸಬೇಕು’ಎಂದೂ ಸ್ವಾಮೀಜಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT