ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ ‍ಪರಿಕಲ್ಪನೆ ಅರ್ಥೈಸಿಕೊಳ್ಳಿ; ಕುಲಪತಿ ಪ್ರೊ. ವಿಷ್ಣುಕಾಂತ ಎಸ್‌.ಚಟಪಲ್ಲಿ

2021-22ನೇ ಸಾಲಿನ ಕೇಂದ್ರ ಬಜೆಟ್ ನೇರ ಪ್ರಸಾರ: ಚರ್ಚೆ, ವಿಶ್ಲೇಷಣೆ
Last Updated 2 ಫೆಬ್ರುವರಿ 2021, 1:23 IST
ಅಕ್ಷರ ಗಾತ್ರ

ಗದಗ: ‘ಬಜೆಟ್‍ನ ಪಾರಿಭಾಷಿಕ ಪರಿಕಲ್ಪನೆಗಳನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು. ಗ್ರಾಮೀಣಾಭಿವೃದ್ಧಿಗೆ ಸಂಬಂಧಪಟ್ಟಂತೆ ಬಜೆಟ್‍ನಲ್ಲಿರುವ ಅಂಶಗಳನ್ನು ವಿಶ್ಲೇಷಿಸಬೇಕು’ ಎಂದು ಕುಲಪತಿ ಪ್ರೊ. ವಿಷ್ಣುಕಾಂತ ಎಸ್‌.ಚಟಪಲ್ಲಿ ತಿಳಿಸಿದರು.

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ವತಿಯಿಂದ 2021-22ರ ಕೇಂದ್ರ ಬಜೆಟ್‍ನ ನೇರಪ್ರಸಾರ ಮತ್ತು ಮುಖ್ಯಾಂಶಗಳ ಚರ್ಚೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಬಜೆಟ್ ಕೇವಲ ಅರ್ಥಶಾಸ್ತ್ರ ವಿದ್ಯಾರ್ಥಿಗಳಿಗೆ ಸೀಮಿತವಾಗಿರದೆ ಎಲ್ಲರಿಗೂ ಸಂಬಂಧಿಸಿದ್ದಾಗಿದೆ. ವಿದ್ಯಾರ್ಥಿಗಳು ತಮ್ಮ ತಮ್ಮ ವಿಭಾಗಕ್ಕೆ ಸಂಬಂಧಪಟ್ಟಂತೆ ಬಜೆಟ್ ವಿಶ್ಲೇಷಣೆ ಮಾಡಬೇಕು’ ಎಂದು ತಿಳಿಸಿದರು.

ಕುಲಸಚಿವರಾದ ಪ್ರೊ. ಬಸವರಾಜ ಎಲ್. ಲಕ್ಕಣ್ಣವರ, ಡಾ. ಅಬ್ದುಲ್ ಅಜೀಜ್, ಶಶಿಭೂಷಣ, ಡಾ.ಸಂಗನಗೌಡ ಪಾಟೀಲ ಇದ್ದರು.

ವಿದ್ಯಾರ್ಥಿಗಳಾದ ಮೋಹಿದ್ದೀನ್‌, ಗಣೇಶ ಸುಲ್ತಾನಪುರ ಬಜೆಟ್ ಕುರಿತು ಚರ್ಚಿಸಿದರು.

‘ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಿಶ್ರ ಮುಂಗಡ ಪತ್ರ ಮಂಡಿಸಿದ್ದಾರೆ ಎಂದು ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಆನಂದ ಎಲ್.ಪೊತ್ನೀಸ್‌ ಅಭಿಪ್ರಾಯ ‍ಪಟ್ಟಿದ್ದಾರೆ.

‘ಆದಾಯಕರ ಕಾನೂನಿನಲ್ಲಿ ಯಾವುದೇ ವಿಶೇಷ ಬದಲಾವಣೆಗಳು ಆಗಿಲ್ಲ. ಈ ದಿಸೆಯಲ್ಲಿ ಕೇಂದ್ರ ಮುಂಗಡ ಪತ್ರದಿಂದ ಸಾಮಾನ್ಯ ಜನರಿಗೆ ಯಾವುದೇ ರೀತಿಯ ಅನುಕೂಲ ಇರುವುದಿಲ್ಲ. ಹೆಚ್ಚಿನ ನಿರೀಕ್ಷೆ ಹೊಂದಿದ್ದ ಜನರಿಗೆ ಈ ಮುಂಗಡ ಪತ್ರ ಆಶಾದಾಯಕವಾಗಿಲ್ಲ’ ಎಂದು ಹೇಳಿದ್ದಾರೆ.

‘ನೇರ ತೆರಿಗೆ ಬಿಟ್ಟರೆ ಉಳಿದ ಎಲ್ಲಾ ಕ್ಷೇತ್ರಗಳಲ್ಲಿ ಹೆಚ್ಚಿನ ಅನುದಾನ ಮೀಸಲಿಟ್ಟಿರುವುದರಿಂದ ಒಳ್ಳೆಯ ಅಭಿವೃದ್ಧಿಯಾಗುವ ನಿರೀಕ್ಷೆ ಇದೆ. ಆರೋಗ್ಯ ಕ್ಷೇತ್ರಕ್ಕೆ ₹223 ಲಕ್ಷ ಕೋಟಿ ನಿಗದಿಪಡಿಸಿದ್ದು, ಹಿಂದಿನ ವರ್ಷದ ಮುಂಗಡ ಪತ್ರಕ್ಕೆ ಹೋಲಿಸಿದಾಗ ಶೇ 137ರಷ್ಟು ಹೆಚ್ಚಿಗೆ ಇರುತ್ತದೆ’ ಎಂದು ತಿಳಿಸಿದ್ದಾರೆ.

ವಿಮಾನ ನಿಲ್ದಾಣ ಹಾಗೂ ಬಂದರುಗಳಿಗೆ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಗೆ ಅವಕಾಶ ಕಲ್ಪಿಸಲಾಗಿದೆ. ₹330 ಲಕ್ಷ ಕೋಟಿ ಭಾರತ ಮಾಲಾ ಯೋಜನೆಗೆ ನಿಗದಿ ಪಡಿಸಿರುವುದರಿಂದ ನಿರ್ಮಾಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಸಿಗಲಿದೆ ಎಂದು ಹೇಳಿದ್ದಾರೆ.

‘ಒಂದು ದೇಶ ಒಂದು ರೇಷನ್‌ ಕಾರ್ಡ್‌, 100 ಸೈನಿಕ ಶಾಲೆಗಳು, 750 ಹಿಂದುಳಿದ ಬುಡಕಟ್ಟು ಪ್ರದೇಶದಲ್ಲಿ ವಸತಿ ಶಾಲೆಗಳು ತೆರೆಯಲು ಆದ್ಯತೆ ನೀಡಲಾಗಿದೆ’ ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ವೀರೇಶ ಎಸ್. ಕೂಗು ಅಭಿಪ್ರಾಯಪಟ್ಟಿದ್ದಾರೆ.

ಶೈಕ್ಷಣಿಕ ಸ್ನೇಹಿ ಬಜೆಟ್‌

ಪ್ರಾಥಮಿಕ ಶಾಲೆಗಳನ್ನು ಉನ್ನತೀಕರಿಸಲು ತೆಗೆದುಕೊಂಡಿರುವ ಕ್ರಮ ಸೂಕ್ತವಾಗಿದೆ. ದೇಶದ ವಿವಿಧೆಡೆ ಸೈನಿಕ ಶಾಲೆಗಳು ಹಾಗೂ ಕೇಂದ್ರೀಯ ವಿಶ್ವವಿದ್ಯಾಯಲಗಳನ್ನು ಸ್ಥಾಪಿಸುವುದಾಗಿ ಪ್ರಕಟಿಸಲಾಗಿದೆ. ಇದರಿಂದಾಗಿ ಜನಸಾಮಾನ್ಯನಿಗೂ ಕೈಗೆಟುಕುವ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ಸಿಗಲಿದೆ. ಈ ಬಾರಿಯ ಬಜೆಟ್‌ ಹೊಸ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ಪೂರಕವಾಗಿದೆ

- ಪ್ರೊ. ಬಿ.ಎಲ್‌.ಲಕ್ಕಣ್ಣವರ,ಕುಲಸಚಿವ, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯ, ಗದಗ

***

‌ಬಲವರ್ಧನೆಗೆ ಆದ್ಯತೆ

2021-22ನೇ ಸಾಲಿನ ಕೇಂದ್ರ ಮುಂಗಡ ಪತ್ರದಲ್ಲಿ ಕೃಷಿ ವಲಯಕ್ಕೆ ₹16.5 ಲಕ್ಷ ಕೋಟಿ ಸಾಲ ನೀಡುವ ಗುರಿಯೊಂದಿಗೆ, ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಸಹಾಯಕವಾಗುವ ಬಜೆಟ್ ಮಂಡಿಸಲಾಗಿದೆ

ಅಮೃತ ಯೋಜನೆಗೆ 500 ನಗರಗಳನ್ನು ಸೇರ್ಪಡೆ ಮಾಡುವುದರೊಂದಿಗೆ ನಗರ ಜಲಜೀವನ್ ಮಿಷನ್‍ ಯೋಜನೆ ಅಡಿ ಶುದ್ಧ ಕುಡಿಯುವ ನೀರು ಪೂರೈಕೆಗೆ ₹2.87 ಲಕ್ಷ ಕೋಟಿ ಮೀಸಲಿಟ್ಟಿರುವುದು ಸ್ವಾಗತಾರ್ಹ ಎಂದು ತಿಳಿಸಿದ್ದಾರೆ.

- ಶಿವಕುಮಾರ ಉದಾಸಿ,ಸಂಸದ

***

ಉತ್ತಮ ಬಜೆಟ್

ಬಜೆಟ್‌ನಲ್ಲಿ ಕೃಷಿ, ಶಿಕ್ಷಣ, ಉದ್ಯಮ, ಸಣ್ಣ ಮಧ್ಯಮ ಕೈಗಾರಿಕೆಗೆ, ಮೂಲ ಸೌಕರ್ಯಕ್ಕೆ ಆದ್ಯತೆ ನೀಡಲಾಗಿದೆ. ಎಪಿಎಂಸಿ ಸುಧಾರಣೆಗೆ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಒನ್ ನೇಷನ್ ಒನ್ ರೇಷನ್ ಕಾರ್ಡ್‌ ಯೋಜನೆ ಜಾರಿಗೆ ತಂದಿರುವುದು ಸ್ವಾಗತಾರ್ಹ. ಒಟ್ಟಿನಲ್ಲಿ ಇದೊಂದು ಉತ್ತಮ ಬಜೆಟ್ ಎಂದು ಹೇಳಬಹುದು.

- ಮುತ್ತಣ್ಣ ಕಡಗದ,ಬಿಜೆಪಿ ರೋಣ ಮಂಡಲದ ಅಧ್ಯಕ್ಷ

***

ನಿರಾಶದಾಯಕ ಬಜೆಟ್

ಕೇಂದ್ರ ಸರ್ಕಾರ ಮಂಡಿಸಿರುವ 2021–22ರ ಬಜೆಟ್ ನಿರಾಶದಾಯಕವಾಗಿದೆ. ಕೃಷಿ, ಆಹಾರ ಮತ್ತು ದಿನನಿತ್ಯ ಬಳಸುವ ಆಹಾರ ಪದಾರ್ಥಗಳ ಬೆಲೆ ಏರಿಸಿ ಬಡವರ ಮೇಲೆ ಮತ್ತಷ್ಟು ಹೊರೆ ಹೇರಿದ್ದಾರೆ.

ಕೃಷಿ ಬೆಳೆಗಳ ಮೇಲೆ ಸೆಸ್ ವಿಧಿಸಿ ಅದನ್ನೇ ಬಳಸಿಕೊಂಡು ಕೃಷಿಗೆ ನೀಡುವುದರೊಂದಿಗೆ ಕೆರೆಯ ನೀರನ್ನು ಕೆರೆಗೆ ಚೆಲ್ಲುವ ಧೋರಣೆ ಅನುಸರಿಸುತ್ತಿದ್ದಾರೆ. ಇದು ಯಾವುದೇ ವಿಶೇಷವನ್ನು ಒಳಗೊಂಡಿರದ ಬಜೆಟ್. ಕೆಲವು ರಾಜ್ಯಗಳ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಮಂಡಿಸಿದ ಬಜೆಟ್‌ ಇದಾಗಿದೆ.

- ಜಿ.ಎಸ್.ಪಾಟೀಲ,ಅಧ್ಯಕ್ಷರು ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT