ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ದಿನಕ್ಕೂ ಪತ್ತೆಯಾಗದ ದೇಹ

ಮುಂದುವರಿದ ಕಾರ್ಯಾಚರಣೆ: ಕೊಣ್ಣೂರು ಮನೆಯಲ್ಲಿ ನೀರವ ಮೌನ
Last Updated 13 ಅಕ್ಟೋಬರ್ 2020, 4:26 IST
ಅಕ್ಷರ ಗಾತ್ರ

ನರಗುಂದ: ತಾಲ್ಲೂಕಿನ ಕೊಣ್ಣೂರು ಬಳಿಯ ಮಲಪ್ರಭಾ ಹಳೆ ಸೇತುವೆ ಮೇಲೆ ನೀರಿನ ಪ್ರವಾಹಕ್ಕೆ ಕೊಚ್ಚಿ ಹೋದ ತಾಲ್ಲೂಕಿನ ಕೊಣ್ಣೂರು ಗ್ರಾಮದ ವೆಂಕನಗೌಡ ರಾಮನಗೌಡ ಸಾಲಿಗೌಡ್ರ (41) ದೇಹ ಸೋಮವಾರ ಸಂಜೆಯಾದರೂ ಪತ್ತೆಯಾಗಿಲ್ಲ.

ಬಾದಾಮಿ ತಾಲ್ಲೂಕಿನಿಂದ ಬಂದಿರುವ ಅಗ್ನಿಶಾಮಕ ದಳದವರು ನಿರಂತರ ಕಾರ್ಯಾಚರಣೆ ನಡೆಸಿದ್ದಾರೆ. ಇವರಿಗೆ ಕೊಣ್ಣೂರಿನ ಈಜುಗಾರರು ಸಾಥ್ ನೀಡುತ್ತಿದ್ದಾರೆ. ಶೋಧನಾ ಕಾರ್ಯ ಮುಂದುವರಿದಿದೆ. ದೇಹದ ಪತ್ತೆಗಾಗಿ ವಿಶೇಷ ಪರಿಣತರ ತಂಡ ಕರೆಸಬೇಕೆಂದು ಕೊಣ್ಣೂರು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಹಶೀಲ್ದಾರ್ ಭೇಟಿ: ನರಗುಂದ ತಹಶೀಲ್ದಾರ್ ಮಹೇಂದ್ರ ಅವರು ಹಳೆ ಮಲಪ್ರಭಾ ಸೇತುವೆಯ ಜಾಗಕ್ಕೆ ಭೇಟಿ ನೀಡಿ ಘಟನೆ ವಿವರ ಪಡೆದರು. ‘ಮೃತ ದೇಹದ ಪತ್ತೆಗಾಗಿ ಬಾದಾಮಿ ತಹಶೀಲ್ದಾರ್ ಜೊತೆ ಮಾತನಾಡಿದ್ದು ಕಾರ್ಯಾಚರಣೆ ನಡೆಸುತ್ತಿದ್ದಾರೆ’ ಎಂದರು.

‌ಘಟನೆಯ ವಿವರ: ಬಾದಾಮಿ ತಾಲ್ಲೂಕು ಗೋವನಕೊಪ್ಪ ವ್ಯಾಪ್ತಿಗೆ ಬರುವ ಈ ಹಳೆ ಸೇತುವೆ ಶನಿವಾರ ರಾತ್ರಿಯಿಂದ ತುಂಬಿ ಹರಿಯುತ್ತಿದೆ. ಭಾನುವಾರ ಎಂದಿನಂತೆ ಕಡಿಮೆ ನೀರು ಇದೆ ಎಂದು ಹೊಲಕ್ಕೆ ಹೋಗಿ ಮರಳಿ ದಾಟಿ ಕೊಣ್ಣೂರಿಗೆ ಬರುವಾಗ ಪ್ರವಾಹದ ಸೆಳೆತಕ್ಕೆ ಅವರು ಕೊಚ್ಚಿ ಹೋಗಿದ್ದಾರೆ.

ವೆಂಕನಗೌಡರ ದೇಹ ಎರಡು ದಿನಗಳಾದರೂ ಪತ್ತೆಯಾಗದ ಕಾರಣ ಕೊಣ್ಣೂರು ಗ್ರಾಮದ ಅವರ ಮನೆಯಲ್ಲಿ ಪತ್ನಿ, ಮಕ್ಕಳ ರೋದನ ನಿಂತಿಲ್ಲ. ಕುಟುಂಬಸ್ಥರನು ಸಮಾಧಾನಗೊಳಿಸಲು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಕುಟುಂಬದ ರೋದನ ಹೇಳತೀರದಾಗಿದೆ.

ರಕ್ಷಕನಿಗೆ ರಕ್ಷಣೆ ಇಲ್ಲ:ಕಳೆದ ವರ್ಷ ಇದೇ ರೀತಿ ಪ್ರವಾಹ ಬಂದಾಗ ವೆಂಕನಗೌಡ ಅವರು ಪ್ರವಾಹಕ್ಕೆ ಕೊಚ್ಚಿಹೋಗುತ್ತಿದ್ದ ಇಬ್ಬರನ್ನು ರಕ್ಷಿಸಿ ದಡ ಸೇರಿಸಿದ್ದರು. ಆದರೆ ಈ ಬಾರಿ ಅವರೇ ಪ್ರವಾಹಕ್ಕೆ ಸಿಕ್ಕಾಗ ಈಜಿ ಮರಳಿ ದಡ ಸೇರದೇ ಇರುವುದು ಕುಟುಂಬಸ್ಥರಿಗೆ, ಗೆಳೆಯರ ಬಳಗಕ್ಕೆ ನೋವುಂಟು ಮಾಡಿದೆ.

‘ನಿತ್ಯ ತಮ್ಮ ಪೇರಲ ತೋಟದ ಕೆಲಸಕ್ಕೆ ಇದೇ ಸೇತುವೆ ದಾಟಿ ನನ್ನ ಸಹೋದರ ವೆಂಕನಗೌಡ ಹೋಗುತ್ತಿದ್ದ. ಭಾನುವಾರವೂ ಹೊಸ ಸೇತುವೆ ಮೂಲಕ ಗೋವನಕೊಪ್ಪಕ್ಕೆ ಬಂದು ಅಲ್ಲಿಂದ ತೋಟಕ್ಕೆ ಹೋಗಿದ್ದ. ಮರಳಿ ಬರುವಾಗ ಹಳೆ ಸೇತುವೆ ಮೇಲೆ ನೀರಿದ್ದರೂ ಅದನ್ನು ಲೆಕ್ಕಿಸದೇ ಪ್ರವಾಹ ನೀರಿನಲ್ಲಿ ಬರುವಾಗ ಕೊಚ್ಚಿ ಹೋಗಿದ್ದಾನೆ’ ಎಂದು ಈತನ ಸಹೋದರ ಸಂತೋಷ ಸಾಲಿಗೌಡ್ರ ರೋದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT