ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವೆಂಕಟಾಪೂರದ ಚಿಕ್ಕ ತಿರುಪತಿ

1836ರಲ್ಲಿ ನಿರ್ಮಾಣಗೊಂಡ ಲಕ್ಷ್ಮಿ ವೆಂಕಟೇಶ್ವರ ದೇವಾಲಯ
ಚಂದ್ರಶೇಖರ್ ಭಜಂತ್ರಿ
Published 28 ಜನವರಿ 2024, 5:29 IST
Last Updated 28 ಜನವರಿ 2024, 5:29 IST
ಅಕ್ಷರ ಗಾತ್ರ

ಮುಳಗುಂದ: ಇಲ್ಲಿಗೆ ಸಮೀಪದ ವೆಂಕಟಾಪೂರ ಕ್ಷೇತ್ರದ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನವು ಚಿಕ್ಕ ತಿರುಪತಿ ಎಂದೇ ಪ್ರಸಿದ್ದಿ ಹೊಂದಿದೆ.

ಸೊರಟೂರ ಗ್ರಾಮದ ವೆಂಕಪ್ಪ ದೇಸಾಯಿ ಅವರು ತಿರುಪತಿ ತಿಮ್ಮಪ್ಪನ ಪರಮಭಕ್ತರಾಗಿದ್ದರು. ಅವರ ಇಳಿವಯಸ್ಸಿನಲ್ಲಿ ತಿರುಪತಿಗೆ ಹೋಗಲು ಕಷ್ಟವಾದಾಗ, ತಿರುಪತಿಯ ತಿಮ್ಮಪ್ಪ ಅವರ ಕಸಸಿನಲ್ಲಿ ಬಂದು ನುಡಿದ ವಾಣಿಯಂತೆ, ಅವರಿಗೆ ಉತ್ತರ ದಿಕ್ಕಿನ ಗುಡ್ಡದಲ್ಲಿ ಕಲ್ಲಿನ ಉದ್ಭವ ಮೂರ್ತಿಯೊಂದು ಲಭಿಸಿತು. ಅದು ಲಕ್ಷ್ಮಿ ವೆಂಕಟೇಶ್ವರರ ಮೂರ್ತಿಯಾಗಿತ್ತು. ಅದನ್ನೇ ವೆಂಕಪ್ಪ ಅವರು ಭಕ್ತಿಯಿಂದ ಪೂಜೆ ಸಲ್ಲಿಸುತ್ತಿದ್ದರು. 1836ರಲ್ಲಿ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ ಕಟ್ಟಿಸಿದರು ಎನ್ನುವ ಕಥೆ ಉಲ್ಲೇಖವಿದೆ.

ನಂತರದ ದಿನಗಳಲ್ಲಿ ಬ್ರಹ್ಮಾನನಂದ ಮಹಾರಾಜರು ವೆಂಕಟಾಪೂರವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ಈ ದೇವಸ್ಥಾನವನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಈ ಭಾಗದಲ್ಲಿ ಆಧ್ಮಾತ್ಮಿಕ, ಧಾರ್ಮಿಕ ಪರಂಪರೆಯನ್ನು ಬೆಳೆಸಿದರು.

ಇಲ್ಲಿನ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಿದ ಲಕ್ಷ್ಮಿ ವೆಂಕಟೇಶ್ವರ ಮೂರ್ತಿ ಸ್ವಯಂಭೋ ಮೂರ್ತಿಗಳಾಗಿವೆ, ಅವು ಈಗಲು ಬೆಳೆಯುತ್ತಿವೆ. ಇಲ್ಲಿ ಲಕ್ಷ್ಮಿ ವೆಂಕಟೇಶ್ವರನ ಜೊತೆಗೆ ಪದ್ಮಾವತಿ ಇರುವುದು ವಿಶೇಷ.

ಇಲ್ಲಿಗೆ ಬಂದು ದರ್ಶನ ಪಡೆದರೆ ತಿರುಪತಿಗೆ ಹೋಗಿ ಬಂದಷ್ಟೇ ಪುಣ್ಯಫಲಗಳು ಲಭಿಸುತ್ತವೆ ಎನ್ನುವುದು ಇಲ್ಲಿಗೆ ಬರುವ ಭಕ್ತರ ನಂಬಿಕೆ. ಗದಗ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಂದಲೂ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡಿ ದರ್ಶನ ಪಡೆಯುತ್ತಾರೆ.

ನವರಾತ್ರಿ ಉತ್ಸವದಲ್ಲಿ ಘಟಸ್ಥಾಪನೆ, ದುರ್ಗಾಷ್ಟಮಿ, ದುರ್ಗಾ ಪೂಜೆ, ಪಂಚಮಿ ದಿನ ಲಕ್ಷ್ಮಿ ವೆಂಕಟೇಶ್ವರ ವಿವಾಹ ಮಹೋತ್ಸವ, ಮಹಾನವಮಿ ಆಯುಧ ಪೂಜೆ, ವಿಜಯದಶಮಿ ಬನ್ನಿ ಮುಡಿಯುವ ಸಾಂಪ್ರದಾಯಕ ಆಚರಣೆಗಳು ನಡೆಯುತ್ತವೆ. ವೈಶಾಕ ಶುದ್ಧ ದಶಮಿ ದಿವಸ ಪದ್ಮಾವತಿ ಕಲ್ಯಾಣೋತ್ಸವ ನಡೆಯುತ್ತದೆ. ಏಕಾದಶಿ ಸೇರಿದಂತೆ ವಿಶೇಷ ದಿನಗಳಲ್ಲಿ ಸಾವಿರಾರು ಭಕ್ತರು ಬಂದು ದರ್ಶನ ಪಡೆಯುತ್ತಾರೆ.

ಭಕ್ತರ ಹಾಗೂ ಸರ್ಕಾರದ ಸಹಕಾರದಿಂದ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ಧ್ಯಾನ ಮಂದಿರ, ಬ್ರಮ್ಮಾನಂದ ಭವನ, ಕಲ್ಯಾಣ ಭವನ, ಸಿ.ಸಿ ರಸ್ತೆ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ.

ದೇವಸ್ಥಾನಕ್ಕೆ ಬರುವ ಭಕ್ತರಿಗೆ ಬೆಳಿಗ್ಗೆ ಉಪಹಾರ ಮಧ್ಯಾಹ್ನ ಪ್ರಸಾದ ವ್ಯವಸ್ಥೆಯನ್ನು ಹಲವು ವರ್ಷಗಳಿಂದ ಮಾಡಿಕೊಂಡು ಬರಲಾಗುತ್ತಿದೆ
ಎ.ಕೆ.ತಮ್ಮಣ್ಣವರ ಅಧ್ಯಕ್ಷ ದೇವಸ್ಥಾನ ಟ್ರಸ್ಟ್ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT