ಬುಧವಾರ, ಏಪ್ರಿಲ್ 8, 2020
19 °C
ಹಮ್ಮಿಗೆ ಬ್ಯಾರೇಜ್‌ನಿಂದ ಗದಗ–ಬೆಟಗೇರಿ ಅವಳಿ ನಗರಕ್ಕೆ ಕುಡಿಯುವ ನೀರು

ಪೈಪ್‌ಲೈನ್‌ ದುರಸ್ತಿ:ನೀರು ಪೂರೈಕೆಯಲ್ಲಿ ವ್ಯತ್ಯಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ಆಗಸ್ಟ್‌ನಲ್ಲಿ ತುಂಗಭದ್ರಾ ನದಿ ಪಾತ್ರದಲ್ಲಿ ಧಾರಾಕಾರ ಮಳೆಯಾಗಿದ್ದರಿಂದ,  ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಹಮ್ಮಿಗೆ ಬಳಿ ಇರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜ್‌ ಭರ್ತಿಯಾಗಿದೆ. ಈ ಬ್ಯಾರೇಜ್‌ನಿಂದ ಗದಗ–ಬೆಟಗೇರಿ ಅವಳಿ ನಗರಕ್ಕೆ 62 ಕಿ.ಮೀ ಉದ್ದದ ಪೈಪ್‌ಲೈನ್‌ ಅಳವಡಿಸಿ ನಿರಂತರ ನೀರು ಪೂರೈಸಲಾಗುತ್ತಿದೆ. ಬ್ಯಾರೇಜ್‌ ತುಂಬಿರುವುದರಿಂದ ನೀರಿನ ಬವಣೆ ನೀಗಿದೆ. ಆದರೆ, ಈ ಪೈಪ್‌ಲೈನ್‌ ಅಲ್ಲಲ್ಲಿ ಸೋರಿಕೆಯಾಗುತ್ತಿರುವುದರಿಂದ ನಿತ್ಯ ಲಕ್ಷಾಂತರ ಲೀಟರ್‌ ನೀರು ಸೋರಿಕೆಯಾಗಿ ಚರಂಡಿಗೆ ಹರಿಯುತ್ತಿದೆ.

ಹಮ್ಮಿಗಿ ಬ್ಯಾರೇಜ್‍ನಿಂದ ಗದಗ ನಗರದ ಎ ಪಾಯಿಂಟ್‌ವರೆಗಿನ ಪೈಪ್‌ಲೈನ್‌, ಮಾರ್ಗ ಮಧ್ಯದಲ್ಲಿ ನಾಲ್ಕು ಕಡೆಗಳಲ್ಲಿ ಸೋರಿಕೆಯಾಗುತ್ತಿದೆ. ಜತೆಗೆ ಗದಗ ನಗರದ ಹಳೆಯ ಜಿಲ್ಲಾಧಿಕಾರಿ ಕಚೇರಿ, ಭೂಮರೆಡ್ಡಿ ವೃತ್ತದ ಬಳಿಯೂ ನೀರು ಸೋರಿಕೆಯಾಗುತ್ತಿದೆ. ಮಂಗಳವಾರ ಪೈಪ್‌ಲೈನ್‌ ದುರಸ್ತಿ ಕಾರ್ಯ ಮುಂದುವರಿದಿದ್ದರಿಂದ ನಗರಕ್ಕೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಯಿತು. ಬುಧವಾರವೂ ದುರಸ್ತಿ ಮುಂದುವರಿಯಲಿದ್ದು, ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಗಳಿವೆ.

ಎಸ್.ಪಿ.ಎಂ.ಎಲ್‌ ಇನ್‌ಫ್ರಾ ಎಂಬ ಕಂಪೆನಿ ನಗರದಲ್ಲಿ 24x7 ಕುಡಿಯುವ ನೀರಿನ ಯೋಜನೆಯ ಗುತ್ತಿಗೆ ಪಡೆದುಕೊಂಡಿದೆ. ಈ ಯೋಜನೆ ಜಾರಿಗೊಂಡು ಮೂರು ವರ್ಷ ಕಳೆದಿದೆ. ಆದರೆ, ಇನ್ನೂ ಸೋರಿಕೆ ತಡೆಗಟ್ಟಿ ಸಮರ್ಪಕವಾಗಿ ನೀರು ಪೂರೈಸಲು ಆಗಿಲ್ಲ ಎನ್ನುವುದು ಸಾರ್ವಜನಿಕರ ದೂರು. ‘ನಗರದ ಒಳಗೆ ನಡೆಯುತ್ತಿರುವ ಪೈಪ್‌ಲೈನ್‌ ಅಳವಡಿಕೆ, ದುರಸ್ತಿ ಕಾಮಗಾರಿಯನ್ನು ನಿರ್ವಹಿಸಲು ನಗರಸಭೆಗೆ ಯಾವುದೇ ಅಧಿಕಾರ ಇಲ್ಲ. ಹೀಗಾಗಿ, ಈ ಕಾಮಗಾರಿ ಪ್ರಗತಿ ಮೇಲೆ ನಿಗಾ ವಹಿಸಲು, ನಿಗದಿತ ಸಮಯದೊಳಗೆ ಮುಗಿಸುವಂತೆ ಸೂಚನೆ ನೀಡಲು ಸಾಧ್ಯವಾಗುತ್ತಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದರು.

‘ಅವಳಿ ನಗರದಲ್ಲಿ ನಿರಂತರ ನೀರು ಪೂರೈಕೆಗಾಗಿ 12 ವಲಯಗಳಿದ್ದು, ಸೋರಿಕೆಯನ್ನು ಸರಿಪಡಿಸಲು ಒಂದೊಂದು ವಲಯಗಳಿಗೆ ಕನಿಷ್ಠ ಒಂದೊಂದು ವಾರ ಬೇಕಾಗಬಹುದು ಎಂದು ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ ಅಂದಾಜು ಮಾಡಿತ್ತು. ಆದರೆ, ಮೂರು ವರ್ಷ ಕಳೆದರೂ, ಸೋರಿಕೆ ಸರಿಪಡಿಸಲು ಆಗಿಲ್ಲ’ ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು