ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನರಗುಂದ: ಕೆರೆಗಳಿಗೆ ಹರಿದು ಬಂದ ಮಲಪ್ರಭೆ ನೀರು

ನೀರಿನ ಸಂಕಷ್ಟ ತೀವ್ರ: 26 ಕೆರೆಗಳ ಭರ್ತಿಗೆ ಮುಂದಾದ ನೀರಾವರಿ ಇಲಾಖೆ
Published 18 ಮೇ 2024, 6:41 IST
Last Updated 18 ಮೇ 2024, 6:41 IST
ಅಕ್ಷರ ಗಾತ್ರ

ನರಗುಂದ: ಕಳೆದ ಸಾಲಿನಲ್ಲಿ ಮುಂಗಾರು, ಹಿಂಗಾರು ಮಳೆ ಸುರಿ ಯದ ಪರಿಣಾಮ ಪಟ್ಟಣ ಸೇರಿದಂತೆ ತಾಲ್ಲೂಕಿನ ಎಲ್ಲ ಗ್ರಾಮಗಳ ಕುಡಿಯುವ ನೀರಿನ ಕೆರೆ ಭರ್ತಿಯಾಗಲೇ ಇಲ್ಲ. ಇದರಿಂದ ಜನ–ಜಾನುವಾರುಗಳು ಬೇಸಿಗೆಯಲ್ಲಿ ಸಂಕಷ್ಟ ಅನುಭವಿಸಿದವು.

ಎಲ್ಲದಕ್ಕೂ ನವಿಲುತೀರ್ಛ ಜಲಾಶಯದಿಂದ ಪೈಪ್‌ಲೈನ್‌ ಮೂಲಕ ಸರಬರಾಜು ಮಾಡುತ್ತಿರುವ 24X7 ಕುಡಿಯುವ ನೀರಿನ ಯೋಜನೆ ಅಥವಾ ಸ್ಥಳೀಯ ಕೊಳವೆಬಾವಿ ನೀರನ್ನೇ ಆಶ್ರಯಿಸಬೇಕಾಗಿತ್ತು.

ಕೆರೆಗಳು ಇದ್ದು ಇಲ್ಲದಂತಾಗಿದ್ದವು. ಇದರಿಂದ ತಾಲ್ಲೂಕಿನ 32 ಗ್ರಾಮಗಳ ಕೆರೆಗಳು ಬರಿದಾಗಿದ್ದವು. ಅಂತರ್ಜಲವಿಲ್ಲದೇ ಕೊಳವೆಬಾವಿಗಳು ಬತ್ತುವ ಸ್ಥಿತಿ ಉಂಟಾಗಿತ್ತು.

ಆದ್ದರಿಂದ ರೈತಾಪಿ ವರ್ಗ, ದನಗಾಹಿಗಳು , ರೈತ ಸಂಘಟನೆಗಳು ಮಲಪ್ರಭಾ ಕಾಲುವೆಗಳಿಗೆ ನೀರು ಹರಿಸುವಂತೆ ತಹಶೀಲ್ದಾರ್ ಗೆ, ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದವು. ಕೊನೆಗೂ ವಾಸ್ತವ ಸ್ಥಿತಿ ಅರಿತ ಅಧಿಕಾರಿಗಳು ಕೆರೆಗಳನ್ನು ತುಂಬಿಸುವ ಸಲುವಾಗಿ ಸವದತ್ತಿ ಬಳಿಯಶ ನವಿಲುತೀರ್ಥ ಜಲಾಶಯದಿಂದ ನರಗುಂದ ಶಾಖಾ ಕಾಲುವೆ ಹಾಗೂ ಮಲಪ್ರಭಾ ಬಲದಂಡೆ ಕಾಲುವೆ ಮೂಲಕ ನೀರು ಹರಿಸುತ್ತಿದ್ದಾರೆ. ಇದರಿಂದ ತಾಲ್ಲೂಕಿನ ರೈತರು ಸಂತಸಗೊಂಡಿದ್ದಾರೆ.

ನೀರು ಪೋಲಾಗಬಾರದು: ಕೆಲವು ರೈತರು ಅನಗತ್ಯವಾಗಿ ಹೊಲಕ್ಕೆ ನೀರು ಹರಿಸಿಕೊಳ್ಳುತ್ತಿದ್ದು ಇದರಿಂದ ನೀರು ಪೋಲಾಗುತ್ತಿದೆ.

ರೈತರು ನೀರಿನ ಸಮಸ್ಯೆ ಅರಿತು ನೀರು ಪೋಲಾಗದಂತೆ ಎಚ್ಚರ ವಹಿಸಬೇಕು ಎಂದು ನೀರಾವರಿ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

‘ಪಟ್ಟಣದ ಕೆಂಪಗೆರೆಯೂ ಬರಿದಾಗಿದೆ. ಇದರಿಂದ ಅಂತರ್ಜಲ ಇಲ್ಲದೇ ಸ್ಥಳೀಯ ಕೊಳವೆಬಾವಿಗಳು ಬತ್ತುತ್ತಿವೆ. ಆದ್ದರಿಂದ ಕೆಂಪಗೆರೆಗೂ ನವಿಲುತೀರ್ಥ ಜಲಾಶಯದಿಂದ ನೀರು ಹರಿಸಬೇಕು ಎನ್ನುವುದು’ ಪಟ್ಟಣದ ನಾಗರಿಕರ ಆಗ್ರಹವಾಗಿದೆ.

26 ಕೆರೆ ತುಂಬಿಸಲು 1 ಟಿಎಂಸಿ ನೀರು
ನರಗುಂದ ತಾಲ್ಲೂಕಿನ 26 ಕೆರೆ ತುಂಬಿಸಲು 1 ಟಿಎಂಸಿ ನೀರು ಹರಿಸಲಾಗಿದೆ. ಜಮೀನುಗಳಲ್ಲಿ ಬೆಳೆ ಇಲ್ಲದ್ದರಿಂದ ಕಾಲುವೆ ಭರ್ತಿಯಾಗಿ ಕೆರೆಗಳತ್ತ ನೀರು ಹರಿದು ಬರುತ್ತಿದೆ. ಈಗಾಗಲೇ ಶಿರೋಳದ ಕೆರೆಗೆ ನೀರು ಹರಿದು ಬಂದಿದೆ. ಮೇ 14ರಿಂದ 24ರವರೆಗೆ 10 ದಿನಗಳ ಕಾಲ ನೀರು ಹರಿಸಲಾಗುತ್ತಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಮುಂದಿನ ನೀರಿನ ಲಭ್ಯತೆ ಅರಿತು ತಾವೇ ಜವಾಬ್ದಾರಿಯಿಂದ ಕೆರೆಗೆ ನೀರು ತುಂಬಿಸಬೇಕಿದೆ. ಈಗಾಗಲೇ ನವಿಲುತೀರ್ಥ ಜಲಾಶಯದಲ್ಲಿ ನೀರಿನ ಮಟ್ಟ ಸಂಪೂರ್ಣ ಕಡಿಮೆಯಾಗಿದೆ. ಮುಂದೆ ಮಳೆಯಾದಾಗ ಮಾತ್ರ ಮತ್ತೇ ನೀರು ದೊರೆಯಲು ಸಾಧ್ಯ.
ಬೇಸಿಗೆಯಲ್ಲಿನ ತೊಂದರೆ ಅರಿತು ಮೇಲಾಧಿಕಾರಿಗಳಿಗೆ ಕಾಲುವೆಗೆ ನೀರು ಹರಿಸಲು ಮನವಿ ಮಾಡಲಾಗಿತ್ತು. ಈಗ ನೀರು ಹರಿಸಲಾಗುತ್ತಿದೆ
ಶ್ರೀಶೈಲ ತಳವಾರ, ತಹಶೀಲ್ದಾರ್ ನರಗುಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT