ಲಕ್ಷ್ಮೇಶ್ವರ: ಕುಡಿಯುವ ನೀರು ಪೂರೈಕೆಯಲ್ಲಿ ಪುರಸಭೆ ಅಧಿಕಾರಿಗಳು ಭಾರಿ ಅವ್ಯವಹಾರ ನಡೆಸಿದ್ದು, ಈ ಕುರಿತು ಲೋಕಾಯುಕ್ತರಿಂದ ತನಿಖೆ ನಡೆಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಶರಣು ಗೋಡಿ ಆಗ್ರಹಿಸಿದರು.
ಪಟ್ಟಣದ ತಾಲ್ಲೂಕು ಕಾರ್ಯನಿತರ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸೋಮವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕಳೆದ ಒಂದು ತಿಂಗಳಿಂದ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಈ ಕುರಿತು ವಾರದ ಹಿಂದೆ ಸಮಸ್ಯೆ ಪರಿಹರಿಸುವಂತೆ ನಮ್ಮ ಸಂಘಟನೆಯಿಂದ ಮನವಿ ಮಾಡಲಾಗಿತ್ತು. ಅಧಿಕಾರಿಗಳಿಗೆ ಜನ ಅನುಭವಿಸುತ್ತಿರುವ ಬವಣೆ ಅರ್ಥ ಆಗುತ್ತಿಲ್ಲ. ಮೇವುಂಡಿ ಜಾಕ್‍ವೆಲ್‍ನಲ್ಲಿನ ಮೋಟಾರ್ ದುರಸ್ತಿ ಮಾಡಿಸುವಲ್ಲಿ ಪುರಸಭೆ ಅಧಿಕಾರಿಗಳು ಭಾರಿ ಅವ್ಯವಹಾರ ನಡೆಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ ಎಂದರು.
‘ಈ ಕುರಿತು ಜಿಲ್ಲಾಧಿಕಾರಿಗಳು ಲೋಕಾಯುಕ್ತರಿಂದ ತನಿಖೆ ಮಾಡಿಸಬೇಕು. ಬರುವ ಶುಕ್ರವಾರದ ಒಳಗೆ ನೀರು ಪೂರೈಕೆ ಆಗದಿದ್ದರೆ ಶನಿವಾರ ಲಕ್ಷ್ಮೇಶ್ವರ ಬಂದ್ ಮಾಡಿ ಉಗ್ರ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.
ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ನಾಗೇಶ ಅಮರಾಪುರ ಮಾತನಾಡಿ ‘ಮೂರು ದಿನಗಳಲ್ಲಿ ಜನತೆಗೆ ಕುಡಿಯುವ ನೀರು ಪೂರೈಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಭರವಸೆ ನೀಡಿದ್ದರು. ಆದರೆ ಇನ್ನೂ ನೀರು ಪೂರೈಕೆ ಆಗಿಲ್ಲ. ಇದರಿಂದಾಗಿ ಪುರಸಭೆ ವಿರುದ್ಧ ಪ್ರತಿಭಟನೆ ನಡೆಸಲಾಗುವುದು’ ಎಂದು ತಿಳಿಸಿದರು.