ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಲ್: ಮೈ ಕೊರೆಯುವ ‘ಮಾಗಿ ಚಳಿ’

ರಸ್ತೆ ಆಸುಪಾಸಿನಲ್ಲಿ ಸಿಕ್ಕ ಕಸ, ಕಡ್ಡಿಗೆ ಬೆಂಕಿ ಗೀರಿ ಚಳಿ ಕಾಯಿಸಿಕೊಳ್ಳುವ ಮಂದಿ
ಅಕ್ಷರ ಗಾತ್ರ

ನರೇಗಲ್: ಮೈ ನಡುಗಿಸುವ ಮಾಗಿ ಚಳಿಗೆ ಜನ ನಡುಗುತ್ತಿದ್ದಾರೆ. ಮಧ್ಯ ಕರ್ನಾಟಕದ ಜನರು ಈವರೆಗೆ ಇಷ್ಟು ತಣ್ಣನೆಯ ಅನುಭವ ಪಡೆಯದ ಕಾರಣ ಅನೇಕರು, ‘ಈ ಸಲ ಎಂತಾ ತಂಡಿ ಐತಿ ಪಾ ಇದು’ ಎಂದು ತಮ್ಮಲ್ಲೇ ಹೇಳಿಕೊಳ್ಳುತ್ತಿದ್ದಾರೆ.

ಮೈ ನಡುಗಿಸುವ ಚಳಿಗೆ ಜನ ಬೆಳಿಗ್ಗೆ ಮತ್ತು ಸಂಜೆ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಸ್ವೆಟರ್‌, ಜಾಕೆಟ್‌, ಜರ್ಕಿನ್‌, ಕಿವಿ ಕವಚ (ಮಪ್ಲರ್‌), ಮಂಕಿ ಕ್ಯಾಪ್‌ ಮುಂತಾದ ಬೆಚ್ಚನೆ ಬಟ್ಟೆಗಳನ್ನು ಧರಿಸಿಯೇ ಹೊರಗೆ ಬರುತ್ತಿದ್ದಾರೆ. ಬೆಳಿಗ್ಗೆ ಎದ್ದ ತಕ್ಷಣವೇ ಕೆಲವರು ರಸ್ತೆ ಆಸುಪಾಸಿನಲ್ಲಿ ಸಿಕ್ಕ ಕಸ, ಕಡ್ಡಿಗೆ ಬೆಂಕಿ ಗೀರಿ ಚಳಿ ಕಾಯಿಸಿಕೊಳ್ಳುವುದು ಸಾಮಾನ್ಯವೆನಿಸಿದೆ.

ಈ ಬಾರಿ ಮುಂಗಾರು, ಹಿಂಗಾರು ಮಳೆ ಹೆಚ್ಚಿನ ಪ್ರಮಾಣದಲ್ಲಿ ಆಗಿರುವುದರಿಂದ ಕೃಷಿ ಹೊಂಡ, ಕೆರೆ, ಚೆಕ್ ಡ್ಯಾಂ, ಬಾವಿ, ಕಣಿವೆಗಳಲ್ಲಿ ನೀರು ತುಂಬಿದೆ. ಭೂಮಿಯಲ್ಲಿ ತೇವಾಂಶದ ಪ್ರಮಾಣ ಹೆಚ್ಚಾಗಿದೆ. ಈ ಕಾರಣಕ್ಕಾಗಿ ಚಳಿ ಹೆಚ್ಚಾಗುತ್ತಿದೆ ಎಂಬುದು ಗ್ರಾಮೀಣ ಭಾಗದ ರೈತರ ಅಭಿಪ್ರಾಯವಾಗಿದೆ.

ಕಳೆದ ವರ್ಷ ಬಿಸಿಲಿಗೂ ಬೆಂದು, ಮಳೆಯಲ್ಲಿ ಒದ್ದಾಡಿದ ಹೋಬಳಿಯ ಜನ, ಈಗಿನ ಚಳಿಗೆ ಮುದುಡುತ್ತಿದ್ದಾರೆ. ಬೆಚ್ಚನೆ ವಸ್ತುಗಳಿಗೆ ಈಗ ಬೇಡಿಕೆ ಸೃಷ್ಟಿಯಾಗಿದೆ.

ಪ್ರತಿ ವರ್ಷ ಸಾಮಾನ್ಯವಾಗಿ ಡಿಸೆಂಬರ್‌ನಲ್ಲಿ ಚಳಿ ಇರುತ್ತದೆಯಾದರೂ ಈ ವರ್ಷ ಮಾತ್ರ ತುಸು ಜಾಸ್ತಿಯೇ ಇದೆ. ವಾರದಿಂದ ಬೆಳಿಗ್ಗೆ ವಾಕಿಂಗ್‌ಗೆ ಹೋಗದೆ ಮನೆಯಲ್ಲೇ ಬೆಚ್ಚನೆ ನಿದ್ದೆಗೆ ಜಾರುತ್ತಿದ್ದೇವೆ. ಸಂಜೆ ವೇಳೆ ಬೇಗನೆ ಮನೆ ಸೇರಿಕೊಳ್ಳುತ್ತಿದ್ದೇವೆ ಎಂದು ಪಟ್ಟಣದ ದಿನೇಶ ಕೋಗಿಲೆ, ನಾಗರಾಜ ಯಲಿಗಾರ ಹೇಳಿದರು.

ಸೂರ್ಯ ದಕ್ಷಿಣದಿಂದ ಪಥ ಬದಲಿಸಲು ಆರಂಭಿಸುತ್ತಾನೆ. ಹೀಗಾಗಿ ಸೂರ್ಯನ ಕಿರಣಗಳು ನೇರವಾಗಿ ಬೀಳದೆ, ಓರೆಯಾಗಿ ಭೂಮಿಗೆ ಬೀಳುವುದರಿಂದಲೂ ಚಳಿಯ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ. ಡಿಸೆಂಬರ್, ಜನವರಿಯಲ್ಲಿ ಚಳಿ ಹೆಚ್ಚಲಿದೆ ಎಂದು ಜೀವವೈವಿಧ್ಯ ಸಂಶೋಧಕ ಮಂಜುನಾಥ ನಾಯಕ ತಿಳಿಸಿದರು.

ಜನರಿಗೆ ಚಳಿಯ ಬಿಸಿ ತಾಗುತ್ತಿದ್ದರೂ ಕೆಲ ಬೆಳೆಗಳಿಗೆ ಚಳಿ ಒಳ್ಳೆಯದೇ ಆಗಿದೆ. ಗೋಧಿ, ಕಡಲೆ, ಕುಸುಬೆ ಬೆಳೆಗಳ ಬೆಳವಣಿಗೆಗೆ ಚಳಿಯ ಇಬ್ಬನಿಯೇ ಸಾಕು. ಬೆಳೆಗಳ ಮಧ್ಯದಲ್ಲಿ ಎಡೆ ಹೊಡೆದರೆ ನೀರು ಆವಿಯಾಗುವುದನ್ನು ತಡೆಗಟ್ಟಬಹುದು. ಬೆಳೆಯೂ ಉತ್ತಮವಾಗಿರಲಿದೆ ಎಂದು ರೈತರಾದ ಶರಣಪ್ಪ ಮಾರನಬಸರಿ, ಸದ್ದಾಂ ನಶೇಖಾನ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT