ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಮ್ಮ ಸಂವಿಧಾನದ ಆಶಯಗಳು ಈಡೇರಿಲ್ಲ: ಬಸವರಾಜ ನವಲಗುಂದ ವಿಷಾದ

Published 31 ಮಾರ್ಚ್ 2024, 15:29 IST
Last Updated 31 ಮಾರ್ಚ್ 2024, 15:29 IST
ಅಕ್ಷರ ಗಾತ್ರ

ಮುಂಡರಗಿ: ‘ನಮ್ಮ ಸಂವಿಧಾನ ಜಾರಿಯಾಗಿ 75 ವರ್ಷಗಳು ಕಳೆದರೂ ಸಂವಿಧಾನದ ಆಶಯಗಳು ಸಂಪೂರ್ಣವಾಗಿ ಈಡೇರಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೂ ರಾಜಪ್ರಭುತ್ವ ಹಾಗೂ ನಿರಂಕುಶ ಪ್ರಭುತ್ವಗಳು ಆಡಳಿತ ನಡೆಸುತ್ತಿರುವುದು ನಮ್ಮ ದೇಶದ ಬಹುದೊಡ್ಡ ದುರಂತವಾಗಿದೆ' ಎಂದು ಬಿಎಸ್‍ಪಿ ಹಾವೇರಿ–ಗದಗ ಲೋಕಸಭಾ ಕ್ಷೇತ್ರದ ಸಂಚಾಲಕ ಬಸವರಾಜ ನವಲಗುಂದ ವಿಷಾದಿಸಿದರು.

ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹಾವೇರಿ–ಗದಗ ಲೋಕಸಭಾ ಕ್ಷೇತ್ರದ ಬಿಎಸ್‍ಪಿ ಅಭ್ಯರ್ಥಿ ಎಸ್.ಎಂ.ಗಣಜೂರು ಅವರ ಚುನಾವಣಾ ಪ್ರಚಾರದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಭಾರತಕ್ಕೆ ಸ್ವಾತಂತ್ರ್ಯ ದೊರಕಿದಾಗಿನಿಂದ ನಮ್ಮ ದೇಶದ ಆಡಳಿತ ಒಂದೆ ಕುಟುಂಬದ ಹಿಡಿತದಲ್ಲಿದ್ದು, ದೇಶ ಅಭಿವೃದ್ಧಿ ಕಾಣದಂತಾಗಿದೆ. ಪ್ರಜಾಪ್ರಭುತ್ವ ದೇಶದಲ್ಲಿ ವಂಶಾಡಳಿತ ನಿರಂತರವಾಗಿ ನಡೆಯುತ್ತಿರುವುದು ಸಂವಿಧಾನಕ್ಕೆ ಮಾಡಿದ ಅವಮಾನವಾಗಿದ್ದು, ನಮ್ಮ ದೇಶದಲ್ಲಿ ವಂಶಾಡಳಿತವನ್ನು ಕೊನೆಗಾಣಿಸಬೇಕಿದೆ ಎಂದು ತಿಳಿಸಿದರು.

ಹಲವು ದಶಕಗಳಿಂದ ಹಣಬಲ, ತೋಳ್ಬಲ, ಜಾತಿ ಬಲಗಳಿಂದ ನಮ್ಮ ಚುನಾವಣೆಗಳು ನಡೆಯುತ್ತಿದ್ದು, ಅದಕ್ಕೆ ನಾವೆಲ್ಲ ಕಡಿವಾಣ ಹಾಕಬೇಕಿದೆ. ಬಿಎಸ್‍ಪಿ ಪಕ್ಷವು ದೇಶದ ಸಮಗ್ರ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಆಡಳಿತ ನಡೆಸುತ್ತಿದ್ದು, ಪಾರದರ್ಶಕ ಆಡಳಿತ ನೀಡಲು ಬಯಸಿದೆ. ಆದ್ದರಿಂದ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಬಿಎಸ್‍ಪಿಗೆ ಮತ ನೀಡಬೇಕು ಎಂದು ಮನವಿ ಮಾಡಿಕೊಂಡರು.

ಹಾವೇರಿ–ಗದಗ ಲೋಕಸಭಾ ಕ್ಷೇತ್ರದ ಬಿಎಸ್‍ಪಿ ಅಭ್ಯರ್ಥಿ ಎಸ್.ಎಂ. ಗಣಜೂರು ಮಾತನಾಡಿ, ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಗದಗ-ಹರಪನಹಳ್ಳಿ ನೂತನ ರೈಲು ಮಾರ್ಗ ಮಂಜೂರಾತಿ ಸೇರಿದಂತೆ ಗದಗ ಹಾಗೂ ಹಾವೇರಿ ಜಿಲ್ಲೆಗಳ ರೈಲು ಮಾರ್ಗ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಹಾವೇರಿ ಕ್ಷೇತ್ರವನ್ನು ಒಂದು ಮಾದರಿ ಕ್ಷೇತ್ರವನ್ನಾಗಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ನಂತರ ಬಿಎಸ್ಪಿ ಅಭ್ಯರ್ಥಿ ಎಸ್.ಎಂ.ಗಣಜೂರು ಹಾಗೂ ಮತ್ತಿತರ ಮುಖಂಡರು ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಮಠಕ್ಕೆ ತೆರಳಿ ಡಾ.ಅನ್ನದಾನೀಶ್ವರ ಸ್ವಾಮೀಜಿ ಅವರು ಆಶೀರ್ವಾದ ಪಡೆದುಕೊಂಡರು. ಪಟ್ಟಣದ ಜಲಾಲುದ್ದೀನ ಖಾದ್ರಿ ದರ್ಗಾಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು.

ಬಿಎಸ್‍ಪಿ ಜಿಲ್ಲಾ ಸಂಯೋಜಕ ಎಂ.ಕೆ.ತಳಗಡೆ, ಉಪಾಧ್ಯಕ್ಷ ಮಂಜುನಾಥ ಹುಬ್ಬಳ್ಳಿ, ಪ್ರಧಾನ ಕಾರ್ಯದರ್ಶಿ ಗುಡದಪ್ಪ ತಳಗೇರಿ, ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಮಾರಣ್ಣವರ, ರಮೇಶ ರಾಮೇನಹಳ್ಳಿ, ಬಾಬುಜಾನ್ ಡಂಬಳ, ಹನುಮಂತ ಮಾದರ, ಬಸಪ್ಪ ವಡ್ಡರ, ಎಂ.ಎಂ.ಕಳ್ಳಿಹಾಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT