ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲಕ್ಷ್ಮೇಶ್ವರ | ಹೆಸರು ಬೆಳೆಗೆ ಹಳದಿ ರೋಗ: ನೆರವಿನ ನಿರೀಕ್ಷೆಯಲ್ಲಿ ರೈತವರ್ಗ

ಸಾಂಕ್ರಾಮಿಕವಾಗುವ ಭೀತಿ: ಅಧಿಕಾರಿಗಳ ನೆರವಿನ ನಿರೀಕ್ಷೆಯಲ್ಲಿ ರೈತವರ್ಗ
Published 9 ಜುಲೈ 2024, 5:11 IST
Last Updated 9 ಜುಲೈ 2024, 5:11 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ತಾಲ್ಲೂಕಿನಲ್ಲಿ ಬಿತ್ತನೆಯಾಗಿರುವ ಹೆಸರು ಬೆಳೆಗೆ ಹಳದಿ ರೋಗದ ಬಾಧೆ ಕಾಣಿಸಿಕೊಂಡಿದ್ದು, ರೈತರ ಆತಂಕಕ್ಕೆ ಕಾರಣವಾಗಿದೆ. ಈ ವರ್ಷ ಕೃಷಿ ಇಲಾಖೆಯ ನಿರೀಕ್ಷೆಗೂ ಮೀರಿ ಹೆಸರು ಬಿತ್ತನೆಯಾಗಿದೆ. ಉತ್ತಮ ತೇವಾಂಶದಿಂದಾಗಿ ಬೆಳೆಯೂ ಚೆನ್ನಾಗಿ ಬೆಳೆಯುತ್ತಿದೆ. ಬೇಗ ಬಿತ್ತನೆ ಮಾಡಿದ ಬೆಳೆ ಸೊಗಸಾಗಿ ಬೆಳೆದು ಹೂಕಟ್ಟುವ ಹಂತಕ್ಕೆ ಬಂದಿದೆ. ಆದರೆ ಬೆಳೆಗೆ ಹಳದಿ ರೋಗ ಬಾಧೆ ಕಾಡುತ್ತಿದೆ.

ತಾಲ್ಲೂಕಿನ ಹದಿನಾಲ್ಕು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಾವಿರಾರು ಎಕರೆಯಲ್ಲಿ ಹೆಸರು ಬಿತ್ತನೆಯಾಗಿದ್ದು ಸದ್ಯ ಬೆಳೆ ಚೆನ್ನಾಗಿದೆ. ಆದರೆ ಕಳೆದ ಒಂದು ವಾರದಿಂದ ಬೆಳೆ ಹಳದಿ ಆಗುತ್ತಿದೆ. ಇದೊಂದು ಸಾಂಕ್ರಾಮಿಕ ರೋಗವಾಗಿದ್ದು ಬೇಗನೇ ಹತೋಟಿ ಮಾಡದಿದ್ದರೆ ಇಳುವರಿ ಮೇಲೆ ಹೊಡೆತ ಬೀಳುವುದರಿಂದ ರೈತರಲ್ಲಿ ಆತಂಕ ಶುರುವಾಗಿದೆ.

ಮೊದಲು ಗಿಡದ ಎಲೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ರೋಗ ಬೆಳೆದಂತೆ ಇಡೀ ಗಿಡ ಹಳದಿಯಾಗಿ ಒಣಗಿ ಬಿಡುತ್ತದೆ. ಈ ರೋಗ ಅಂಟಿದ ಹೆಸರು ಹೊಲಗಳು ಬಂಡಾರ ಉಗ್ಗಿದಂತೆ ಹಳದಿಯಾಗಿ ಕಾಣುತ್ತವೆ. ಒಂದು ಹೊಲದ ಬೆಳೆಗೆ ಇದು ಅಂಟಿದರೆ ಪಕ್ಕದ ಹೊಲಕ್ಕೂ ಸರಾಗವಾಗಿ ಹರಡುತ್ತದೆ. ಕಾರಣ ಇದನ್ನು ಸಾಮೂಹಿಕವಾಗಿ ರೈತರು ಹತೋಟಿ ಮಾಡಬೇಕಾಗುತ್ತದೆ.

‘ಸದ್ಯ ಹೆಸರು ಬೆಳೆ ಚೆನ್ನಾಗಿ ಬೆಳದೈತಿ. ಆದರ ಹಳದಿ ರೋಗ ಬರಾಕತ್ತೈತ್ರಿ’ ಎಂದು ಗೊಜನೂರು ಗ್ರಾಮದ ರೈತ ಚೆನ್ನಪ್ಪ ಷಣ್ಮುಖಿ ಆತಂಕ ವ್ಯಕ್ತಪಡಿಸಿದರು.

‘ಹೆಸರು ಬೆಳೆಗೆ ಹಳದಿ ರೋಗ ಬಂದಿದ್ದು ಕೃಷಿ ಇಲಾಖೆ ಅಧಿಕಾರಿಗಳು ಹೊಲಗಳಿಗೆ ಭೇಟಿ ನೀಡಿ ರೈತರಿಗೆ ರೋಗ ನಿಯಂತ್ರಣದ ಕುರಿತು ಮಾಹಿತಿ ನೀಡಬೇಕು’ ಎಂದು ಭಾರತೀಯ ಕಿಸಾನ್ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಟಾಕಪ್ಪ ಸಾತಪುತೆ ಒತ್ತಾಯಿಸಿದರು.

‘ಇದೊಂದು ವೈರಾಣು ರೋಗವಾಗಿದೆ. ಹಳದಿ ಬಣ್ಣಕ್ಕೆ ತಿರುಗುವ ಗಿಡಗಳನ್ನು ಆಯ್ದು ಕಿತ್ತು ಸುಡಬೇಕು ಅಥವಾ ಮಣ್ಣಿನಲ್ಲಿ ಮುಚ್ಚಬೇಕು. ರಸ ಹೀರುವ ಕೀಟಗಳು ವೈರಾಣುಗಳನ್ನು ರೋಗಪೀಡಿತ ಗಿಡಗಳಿಂದ ಆರೋಗ್ಯಯುತ ಗಿಡಗಳ ಮೇಲೆ ಕುಳಿತುಕೊಳ್ಳುವುದರಿಂದ ರೋಗ ವೇಗವಾಗಿ ಹರಡುತ್ತದೆ’ ಎಂದು ಲಕ್ಷ್ಮೇಶ್ವರದ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಚಂದ್ರಶೇಖರ ನರಸಮ್ಮನವರ ಹೇಳಿದರು.

ಹಳದಿ ರೋಗ ಹರಡುವ ರಸ ಹೀರುವ ಕೀಟಗಳನ್ನು ನಿಯಂತ್ರಿಸಲು ಥೈಮೆಥೋಕ್ಷಾಮ್ 8 ರಿಂದ 10 ಗ್ರಾಂನಷ್ಟು ಔಷಧವನ್ನು 15 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು
–ಚಂದ್ರಶೇಖರ ನರಸಮ್ಮನವರ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಲಕ್ಷ್ಮೇಶ್ವರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT