ಭಾನುವಾರ, ಮಾರ್ಚ್ 7, 2021
19 °C
ಗಾಂಧಿ ಪ್ರಭಾವ; ‘ನೇತಾಜಿ ಗಾಂಧಿ ಟ್ಯಾಗೋರ್’ ಆದ ನೀಲೇಶ ಬೇನಾಳ

ನಿಡಗುಂದಿ: ಗ್ರಾಮೀಣ ಭಾಗದಲ್ಲೊಬ್ಬ ಗಾಂಧಿ ಪ್ರೇಮಿ

ಚಂದ್ರಶೇಖರ ಕೋಳೇಕರ Updated:

ಅಕ್ಷರ ಗಾತ್ರ : | |

Prajavani

ನಿಡಗುಂದಿ (ವಿಜಯಪುರ ಜಿಲ್ಲೆ): ಮಹಾತ್ಮ ಗಾಂಧೀಜಿ ಅವರ ತತ್ವಗಳು ಮರೆಯಾಗುತ್ತಿರುವ ಕಾಲಘಟ್ಟದಲ್ಲಿ ತಮ್ಮ ಹೆಸರು, ಉಸಿರು, ನಡೆ ನುಡಿಯಲ್ಲಿ ಗಾಂಧಿ ತತ್ವಗಳನ್ನು ಅಳವಡಿಸಿಕೊಂಡು, ಗಾಂಧಿ ಮೌಲ್ಯಗಳನ್ನು ಪ್ರಚುರ ಪಡಿಸುತ್ತಿರುವ ಯುವಕ ‘ನೇತಾಜಿ ಗಾಂಧಿ ಟ್ಯಾಗೋರ್’ ಇತರರಿಗೂ ಮಾದರಿಯಾಗಿದ್ದಾರೆ.

ಸಮೀಪದ ಬೇನಾಳ ಆರ್‌ಎಸ್‌ ಗ್ರಾಮದ ನೀಲೇಶ ಬೇನಾಳ (ಮೂಲ ಹೆಸರು), ಗಾಂಧಿ, ನೇತಾಜಿ ಅವರ ತತ್ವ ಸಿದ್ಧಾಂತದಿಂದ ಪ್ರೇರಿತರಾಗಿ ತಮ್ಮ ಹೆಸರನ್ನು ಆರು ವರ್ಷಗಳ ಹಿಂದೆ ‘ನೇತಾಜಿ ಗಾಂಧಿ’ ಎಂದು ಬದಲಾಯಿಸಿಕೊಂಡಿದ್ದಲ್ಲದೇ, ತಮ್ಮ ಇಬ್ಬರ ಮಕ್ಕಳ ಹೆಸರುಗಳನ್ನು ಸಹ ‘ಗಾಂಧಿ ತಿಲಕ್ ಟ್ಯಾಗೋರ್’ ಹಾಗೂ ‘ಗಾಂಧಿ ಗೋಖಲೆ ಟ್ಯಾಗೋರ್’ ಎಂದು ಬದಲಾಯಿಸಿದ್ದಾರೆ. ಆಧಾರ್ ಕಾರ್ಡ್‌ನಲ್ಲೂ ಇವೇ ಹೆಸರುಗಳು ಇವೆ.

ಪತ್ರಕರ್ತರಾಗಿರುವ ನೀಲೇಶ, 2012ರ ಹೊತ್ತಿಗೆ ಗಾಂಧೀಜಿ ಅವರ ತತ್ವ, ಸಿದ್ಧಾಂತಗಳಿಗೆ ಮಾರು
ಹೋಗಿ ತಮ್ಮ ವ್ಯಕ್ತಿತ್ವವನ್ನೇ ಬದಲಾಯಿಸಿಕೊಂಡರು. ಹೆಸರು ಬದಲಾವಣೆಯಿಂದ ಆರಂಭಗೊಂಡ ಅವರ ಪ್ರಕ್ರಿಯೆ ಸದ್ಯ ಉಸಿರೆತ್ತಿದ್ದರೆ ಸಾಕು ಗಾಂಧಿ ಜೀವನದ ವಿವಿಧ ಮಜಲಗಳು ಅನಾವರಣಗೊಳ್ಳುತ್ತವೆ.

2013ರಲ್ಲಿ ‘ಯಂಗ್ ಇಂಡಿಯಾ’ ಹೆಸರಿನ ಕನ್ನಡ ಪಾಕ್ಷಿಕ ಪತ್ರಿಕೆಯನ್ನು ಆರಂಭಿಸಿದ್ದಾರೆ. ಕೇವಲ ಗಾಂಧೀಜಿ ವಿಚಾರಧಾರೆಗಳನ್ನು ಇಟ್ಟುಕೊಂಡು, ಯಾವುದೇ ಜಾಹೀರಾತು ಇಲ್ಲದೇ ಪ್ರಕಟವಾಗುವ ಈ ಪತ್ರಿಕೆ ಸದಸ್ಯರಿಗೆ ಸರಬರಾಜಾಗುತ್ತದೆ. ಯುವ ಪೀಳಿಗೆಯಲ್ಲಿ ರಾಷ್ಟ್ರಪಿತನ ಮೌಲ್ಯಗಳನ್ನು ಪ್ರಚುರಪಡಿಸಬೇಕು ಎನ್ನುವ ಉದ್ದೇಶ ಇಟ್ಟುಕೊಂಡು ‘ಗಾಂಧಿ ಫಿಲಾಸಫಿಕಲ್ ಯುಥ್‌ ಫೋರಂ’ ಸ್ಥಾಪಿಸಿದ್ದಾರೆ. ಇದರ ಮೂಲಕ ರೂಪುಗೊಂಡ ಕಾರ್ಯಕ್ರಮವೇ ‘ಕಾಲೇಜ್ ಟು ಕಾಲೇಜ್ ಗಾಂಧೀಸ್‌ ಥಾಟ್ಸ್’.

ಈ ವಿಷಯದ ಮೇಲೆ ವಿವಿಧ ಶಾಲೆ– ಕಾಲೇಜುಗಳಿಗೆ ತೆರಳಿ, ಗಾಂಧೀಜಿ ಅವರ ಬದುಕಿನ ಕಾಲಘಟ್ಟದ ಬಗ್ಗೆ ಲಿಖಿತ ರಸಪ್ರಶ್ನೆ ಮತ್ತು ಗಾಂಧಿ ಉಪನ್ಯಾಸಗಳನ್ನು ಏರ್ಪಡಿಸುತ್ತಾರೆ. ಬಾಪೂ ಬದುಕಿನ ವಿವಿಧ ಕಾಲಘಟ್ಟ ತೋರಿಸುವ ಫ್ಲೆಕ್ಸ್‌ಗಳ ಪ್ರದರ್ಶನವೂ ನಡೆಯುತ್ತದೆ. ಇಲ್ಲಿಯವರೆಗೆ ಸುಮಾರು 80ಕ್ಕೂ ಹೆಚ್ಚು ಶಾಲೆ, ಕಾಲೇಜಿನಲ್ಲಿ ಕಾರ್ಯಕ್ರಮ ಏರ್ಪಡಿಸಿರುವುದು ವಿಶೇಷ.

ಪ್ರವಾಸಿ ತಾಣ ಆಲಮಟ್ಟಿಯ ಐಬಿ ಸರ್ಕಲ್‌ನಲ್ಲಿ ಗಾಂಧೀಜಿ ವರ ಐತಿಹಾಸಿಕ ದಂಡಿಯಾತ್ರೆಯ ಪ್ರತಿಮೆಗಳು ಹಾಗೂ ಲೆಕ್ಕಾಧಿಕಾರಿಗಳ ಕಚೇರಿ ಬಳಿ ಗಾಂಧಿ ಮೂರ್ತಿ ಸ್ಥಾಪನೆಗೆ ಕಾರಣರಾದವರು ನೇತಾಜಿ ಗಾಂಧಿ.

ಗಾಂಧೀಜಿ ಅವರು ದೇಶದಾದ್ಯಂತ ಸಂಚರಿಸಿದ ಸ್ಥಳಗಳಿಗೆ ಪ್ರತಿ ವರ್ಷ ಭೇಟಿ ಕೊಟ್ಟು ಅಲ್ಲಿಯ ಮಾಹಿತಿ ಪ್ರಚುರಪಡಿಸುತ್ತಾರೆ. ನಿತ್ಯವೂ ಸಾಮಾಕ ಜಾಲತಾಣಗಳಲ್ಲಿ ಗಾಂಧಿ ಬಗ್ಗೆ ಒಂದಾದರೂ ಪೋಸ್ಟ್ ಹಾಕು ತ್ತಾರೆ. ಆ ಮೂಲಕ ಮನಸ್ಸನ್ನು ಪರಿವರ್ತನೆ ಮಾಡುತ್ತಿದ್ದಾರೆ. ಇವರ ‘ಗಾಂಧಿಗಿರಿ’ಯನ್ನು ಕಂಡು ಅನೇಕ ಸಂಘ ಸಂಸ್ಥೆಗಳು ಇವರನ್ನು ಗೌರವಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು