ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಮೃತ ಕುಟುಂಬಕ್ಕೆ ₹ 1 ಲಕ್ಷ ಪರಿಹಾರ: ಎಚ್‌.ಡಿ.ರೇವಣ್ಣ ಘೋಷಣೆ

ಹಾಮೂಲ್ ಅಧ್ಯಕ್ಷ ಎಚ್‌.ಡಿ.ರೇವಣ್ಣ ಘೋಷಣೆ
Last Updated 10 ಜೂನ್ 2021, 15:07 IST
ಅಕ್ಷರ ಗಾತ್ರ

ಹಾಸನ: ಹಾಸನ ಹಾಲು ಒಕ್ಕೂಟ (ಹಾಮೂಲ್‌) ದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿ ನಿರ್ಮಿಸಿರುವ ಸುವಾಸಿತ ಹಾಲಿನ ಪೆಟ್ ಬಾಟಲ್ ಘಟಕದ ಪ್ರಾಯೋಗಿಕಉತ್ಪಾದನೆ ಲಾಕ್‍ಡೌನ್ ಮುಗಿದ ನಂತರ ಆರಂಭವಾಗಲಿದೆ ಎಂದು ಒಕ್ಕೂಟದಅಧ್ಯಕ್ಷರೂ ಆದ ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು.

₹ 165 ಕೋಟಿ ವೆಚ್ಚದ ಪೆಟ್ ಬಾಟಲ್ ಘಟಕ ದೇಶದಲ್ಲೇ ಮೂರನೇ ಹಾಗೂ ದಕ್ಷಿಣ ಭಾರತದಲ್ಲಿ ಮೊದಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಪ್ರತಿ ಗಂಟೆಗೆ 30 ಸಾವಿರ ಬಾಟಲ್ ಅಂದರೆ ನಿತ್ಯ 5.40 ಲಕ್ಷ ಬಾಟಲ್‌ಗಳನ್ನು ಉತ್ಪಾದಿಸಬಹುದು. ಹಾಲು, ಮೊಸರು, ಮಜ್ಜಿಗೆ ಸೇರಿದಂತೆ ಅನೇಕ ಉಪ ಉತ್ಪನ್ನಗಳು ಬಾಟಲ್‌ನಲ್ಲಿ ತಯಾರಾಗುತ್ತವೆ ಎಂದು ‌ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಘಟಕವು ಸ್ವಯಂ ಚಾಲಿತ ಯಂತ್ರ ಹೊಂದಿದ್ದು, ಇಟಲಿ, ಜರ್ಮನಿ ಹಾಗೂ ಬೆಲ್ಜಿಯಂ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. 12 ಬಗೆಯ ಫ್ಲೇವರ್ಡ್‌ ಮಿಲ್ಕ್‌, ನಾಲ್ಕು ತರಹ ಲಸ್ಸಿ, ಮೂರು ಬಗೆಯ ನಂದಿನಿ ಸ್ಕೂಥೀಸ್‌, ಬಟರ್‌ ಮಿಲ್ಕ್‌, ಮಿಲ್ಕ್‌ ಶೇಕ್‌ ಬಾಟಲಿಗಳನ್ನು ತಯಾರಿಸಲು ನಿರ್ಧರಿಸಲಾಗಿದೆ.ಸುವಾಸಿತ ಹಾಲು, ಲಸ್ಸಿ ಹಾಗೂ ಮಸಾಲ ಮಜ್ಜಿಗೆ (200ಎಂಎಲ್). ಅಲ್ಲದೇ ಪ್ಲೈನ್ ಮಿಲ್ಕ್ (1000 ಎಂಎಲ್) ಸಹ ತಯಾರಾಗಲಿದೆ ಎಂದು ವಿವರಿಸಿದರು.

ಸುವಾಸಿತ ಹಾಲು, ಲಸ್ಸಿ ಸರಬರಾಜಿಗೆ ಭಾರತೀಯ ಸೇನೆಯಿಂದಲೂ ಬೇಡಿಕೆ ಬಂದಿದ್ದು, ಮುಂದಿನ ವರ್ಷದಿಂದ ಪೂರೈಸಲು ನಿರ್ಧರಿಸಲಾಗಿದೆ ಎಂದರು.

ಪ್ರತಿ ವರ್ಷ ಹಾಲಿನ ಶೇಖರಣೆ ಶೇ.10 ರಿಂದ 15 ರಷ್ಟು ಹೆಚ್ಚಳವಾಗುತ್ತಿದ್ದು, ಈ ಹಾಲನ್ನು ಲಾಭದಾಯಕ ರೀತಿಯಲ್ಲಿ ಸಂಸ್ಕರಿಸಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ 57.38 ಎಕರೆ ಪ್ರದೇಶದಲ್ಲಿ 10 ಲಕ್ಷ ಲೀಟರ್‌ ಸಾಮರ್ಥ್ಯದ ಮೆಗಾ ಡೇರಿ ಸಿವಿಲ್‌ ಕಾಮಗಾರಿ ಆರಂಭವಾಗಿದೆ. ಮೆಗಾ ಡೇರಿ ಸಮುಚ್ಚಯ ನಿರ್ಮಾಣ ಯೋಜನೆಯ ಸಿವಿಲ್ ಕಾಮಗಾರಿ, ಗೋದಾಮು, ಯಂತ್ರೋಪಕರಣ ಸರಬರಾಜು ಮತ್ತು ಅಳವಡಿಕೆಗೆ ಒಟ್ಟಾರೆ ಯೋಜನಾ ವೆಚ್ಚ ಸುಮಾರು ₹500 ಕೋಟಿ ಎಂದರು.

ಒಕ್ಕೂಟದ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಸಿಬ್ಬಂದಿ ಕೋವಿಡ್‌ನಿಂದ ಮೃತಪಟ್ಟರೆ, ಅಂತಹ ಕುಟುಂಬಗಳಿಗೆಗರಿಷ್ಠ ₹1 ಲಕ್ಷ ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ನಂದಿನಿ ಹಾಲು, ಉತ್ಪನ್ನ ಮಾರಾಟ ಮಾಡುವ ಅಧಿಕೃತ ಏಜೆಂಟರಿಗೂ ಇದು ಅನ್ವಯವಾಗಲಿದೆ ಎಂದು
ತಿಳಿಸಿದರು.

ಪ್ರಸ್ತುತ ಹಾಮೂಲ್‌ ವಹಿವಾಟು ₹1,900 ಕೋಟಿ ಇದ್ದು, ತಿಂಗಳಿಗೆ ₹100 ಕೋಟಿ ಹಣವನ್ನು ಹಾಲು ಉತ್ಪಾದಕರ ಖಾತೆಗೆ ಜಮಾ ಮಾಡಲಾಗುತ್ತಿದೆ. ನಿತ್ಯ 12 ಲಕ್ಷ ಲೀಟರ್‌ ಹಾಲು ಶೇಖರಣೆಯಾಗುತ್ತಿದ್ದು, ಸ್ಥಳೀಯವಾಗಿ 1 ಲಕ್ಷ ಲೀಟರ್‌ ಮಾರಾಟವಾದರೆ, ಹೈದರಾಬಾದ್‌ಗೆ 1 ಲಕ್ಷ ಲೀಟರ್‌, 8 ಲಕ್ಷ ಲೀಟರ್ ಪರಿವರ್ತನೆ ಹಾಗೂ ವರ್ಷಕ್ಕೆ 70 ಲಕ್ಷ ಲೀಟರ್‌ ಸೇನೆಗೆ ಸರಬರಾಜು ಆಗುತ್ತಿದೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಕೆ.ಗೋಪಾಲಯ್ಯ, ಶಾಸಕ ಸಿ.ಎನ್‌.ಬಾಲಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT