ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹22 ಸಾವಿರ ಕೋಟಿ ಬಿಲ್‌ ಬಾಕಿ: ಆರ್‌. ಮಂಜುನಾಥ್

ಶೇ 40 ರಷ್ಟು ಕಮಿಷನ್‌ ಆರೋಪ ಸತ್ಯ
Last Updated 26 ನವೆಂಬರ್ 2021, 15:25 IST
ಅಕ್ಷರ ಗಾತ್ರ

ಹಾಸನ: ‘ಗುತ್ತಿಗೆ ಟೆಂಡರ್‌ನಲ್ಲಿ ಶೇ 40 ರಷ್ಟು ಕಮಿಷನ್ ಪಡೆಯುತ್ತಿರುವುದು ಸತ್ಯ. ಪ್ಯಾಕೇಜ್ ಪದ್ಧತಿ ಕೈ ಬಿಟ್ಟು, ಪ್ರತಿ ಕಾಮಗಾರಿಗೂ ಪ್ರತ್ಯೇಕ ಟೆಂಡರ್ಕರೆಯಬೇಕು’ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಆರ್‌. ಮಂಜುನಾಥ್‌ ಹೇಳಿದರು.

‘ಪ್ಯಾಕೇಜ್‌ ಪದ್ಧತಿಯಿಂದಸ್ಥಳೀಯರು ಭಾಗವಹಿಸಲು ಸಾಧ್ಯವಾಗುವುದಿಲ್ಲ. ಹೊರ ರಾಜ್ಯದ ಗುತ್ತಿಗೆದಾರರಿಗೆ ಹೆಚ್ಚು ಅನುಕೂಲ ಮತ್ತು ಭ್ರಷ್ಟಾಚಾರಕ್ಕೆ ಆಸ್ಪದವಾಗುತ್ತದೆ. ಗುತ್ತಿಗೆದಾರರಸಮಸ್ಯೆ ಹೇಳಿಕೊಳ್ಳಲು ಅವಕಾಶ ಮಾಡಿಕೊಡಬೇಕು. ನಮ್ಮ ಬೇಡಿಕೆ ಈಡೇರಿಸಲು ಜನವರಿ ಅಂತ್ಯದ ವರೆಗೂ ಕಾಲಾವಕಾಶ ನೀಡಲಾಗುವುದು. ಅನ್ಯಾಯ ಸರಿಪಡಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು. ಹೋರಾಟದ ರೂಪುರೇಷೆ ಸಿದ್ಧಪಡಿಸಲುರಾಜ್ಯದಾದ್ಯಂತ ವೇದಿಕೆ ಸಿದ್ಧಪಡಿಸಲಾಗುತ್ತಿದೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿತಿಳಿಸಿದರು.

‘ರಾಜ್ಯದಲ್ಲಿ ವಿವಿಧ ಇಲಾಖೆಗಳಿಂದ ಸುಮಾರು ₹22 ಸಾವಿರ ಕೋಟಿಗೂ ಹೆಚ್ಚು ಬಿಲ್‌ ಬಾಕಿ ಇದೆ. ಪ್ರಮುಖವಾಗಿ ಲೋಕೋಪಯೋಗಿ, ನೀರಾವರಿ ಇಲಾಖೆ ಮತ್ತು ಬಿಬಿಎಂಪಿಯಲ್ಲಿ ಅತಿ ಹೆಚ್ಚು ಕಾಮಗಾರಿಗಳು ನಡೆಯುತ್ತಿದ್ದು, ಈ ಮೂರು ಇಲಾಖೆಗಳಲ್ಲಿ ಈ ಹಿಂದೆ ಪೂರ್ಣಗೊಳಿಸಿರುವ ಕಾಮಗಾರಿಗಳ ಬಾಕಿ ಮೊತ್ತ ಸುಮಾರು ಹತ್ತು ಸಾವಿರ ಕೋಟಿ ರೂಪಾಯಿಗೂ ಅಧಿಕ. ಲೋಕೋಪಯೋಗಿ ಇಲಾಖೆ ಸುಮಾರು ₹5 ಸಾವಿರ ಕೋಟಿ ಹಣ ಬಾಕಿ ಉಳಿಸಿಕೊಂಡಿದ್ದರೆ, ಬೃಹತ್‌ ಮತ್ತು ಮಧ್ಯಮ ನೀರಾವರಿ ಮತ್ತು ಸಣ್ಣ ನೀರಾವರಿ ಇಲಾಖೆ ಸುಮಾರು ₹8 ಸಾವಿರ ಕೋಟಿ ಮತ್ತು ಬಿಬಿಎಂಪಿ ಸುಮಾರು ₹3 ಸಾವಿರ ಕೋಟಿ ಬಾಕಿ ಉಳಿಸಿಕೊಂಡಿದೆ’ ಎಂದು ಮಾಹಿತಿ ನೀಡಿದರು.

‘ಕೊರೊನಾ ಕಾರಣ ನೀಡಿ 2 ವರ್ಷಗಳಿಂದ ಬೃಹತ್ ಮೊತ್ತದ ಬಾಕಿ ಉಳಿಸಿಕೊಳ್ಳಲಾಗಿದೆ. ಇಷ್ಟೊಂದು ಬೃಹತ್‌ ಮೊತ್ತದ ಬಾಕಿ ಉಳಿಸಿಕೊಂಡಿರುವ ಉದಾಹರಣೆ ಕಡಿಮೆ. 2019–19 ರಿಂದೀಚೆಗೆ ಬಾಕಿ ಉಳಿಸಿಕೊಳ್ಳುವ ಪರಿಪಾಠ ಹೆಚ್ಚಳವಾಗಿದೆ. ಇದನ್ನುಕಾಲಮಿತಿಯೊಳಗೆ ಬಿಡುಗಡೆ ಮಾಡಬೇಕು’ಎಂದು ಆಗ್ರಹಿಸಿದರು.

‘ಶೇಕಡಾ 40 ರಷ್ಟು ಕಮಿಷನ್ ವಿಷಯವಾಗಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣಮಾಡಿರುವ ಆರೋಪ ಸತ್ಯವಾಗಿದೆ. ಅವರಿಗೆ ಬೆದರಿಕೆ ಕರೆ ಬರುತ್ತಿದ್ದು, ಸೂಕ್ತ ಪೊಲೀಸ್‌ ರಕ್ಷಣೆನೀಡಬೇಕು. ಟೆಂಡರ್ ಪಡೆಯಲು ಕೆಲವು ಇಲಾಖೆ ಅಧಿಕಾರಿಗಳು ಮತ್ತು ಕೆಲ ಸಚಿವರಿಗೆಇಂತಿಷ್ಟು ಕಮಿಷನ್ ಕೊಡದಿದ್ದರೆ ಕಾಮಗಾರಿ ಪೂಜೆಗೆ ಅಡ್ಡಿ ಸೇರಿದಂತೆ ಅನೇಕ ರೀತಿಯತೊಂದರೆ ನೀಡುತ್ತಾರೆ’ ಎಂದು ಆರೋಪಿಸಿದರು.

‘ಸರ್ಕಾರದ ವಿವಿಧ ಇಲಾಖೆಗಳ ಗುತ್ತಿಗೆ ಕಾಮಗಾರಿ ಮೊತ್ತದ ಶೇ 40 ರಷ್ಟು ಹಣ ಭ್ರಷ್ಟಾಚಾರಸೇರಿದಂತೆ ವಿವಿಧ ರೂಪದಲ್ಲಿ ಸೋರಿಕೆಯಾಗುತ್ತಿದ್ದು, ಕಾಮಗಾರಿ ಗುಣಮಟ್ಟಕಾಪಾಡಿಕೊಳ್ಳುವುದು ಕಷ್ಟವಾಗಿದೆ. ಲೋಕೋಪಯೋಗಿ, ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತುಪಂಚಾಯತ್ ರಾಜ್ ಇಲಾಖೆಗಳಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ’ ಎಂದು ದೂರಿದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಬಿ.ಸಿ.ದಿನೇಶ್, ಪ್ರಧಾನ ಕಾರ್ಯದರ್ಶಿ ರವೀಂದ್ರ, ಸಂಘಟನಾಕಾರ್ಯದರ್ಶಿ ಗುರುಸಿದ್ದಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಕಾರ್ಲೆ ಇಂದ್ರೇಶ್, ಕಾರ್ಯದರ್ಶಿ ಜ್ಞಾನೇಶ್ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT