ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಕಾವ್ಯದಲ್ಲಿ 24 ಸಾವಿರ ಶ್ಲೋಕ

ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ರಂಗಕರ್ಮಿ ಜಯಶಂಕರ ಬೆಳಗುಂಬ
Last Updated 31 ಅಕ್ಟೋಬರ್ 2020, 13:33 IST
ಅಕ್ಷರ ಗಾತ್ರ

ಹಾಸನ: ಮಹರ್ಷಿ ವಾಲ್ಮೀಕಿ ರಚಿತ ರಾಮಾಯಣದಲ್ಲಿ ಬಿಂಬಿತವಾಗಿರುವ ಹಲವು ಅಂಶಗಳು ಸಮಾಜಕ್ಕೆ ದಾರಿ ದೀಪವಾಗಿವೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್‌. ಶ್ವೇತಾ ದೇವರಾಜ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ನ್ಯಾಯಾಂಗ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗಾಂಧೀಜಿ ಅವರು ಭಾರತವನ್ನು ರಾಮ ರಾಜ್ಯವನ್ನಾಗಿ ಮಾಡಬೇಕೆಂಬ ಮಹಾಭಿಲಾಷೆ ಹೊಂದಿದ್ದರು. ವಾಲ್ಮೀಕಿ ಅವರು ನಾರದರ ಮಾತಿಗೆ ಪ್ರೇರೇಪಿತರಾಗಿ ಸಾಂಸಾರಿಕ ಸಾಂಗತ್ಯ ತೊರೆದು, ತದೇಕಚಿತ್ತದಿಂದ ರಾಮ ಧ್ಯಾನವನ್ನು ಮಾಡಿ ಜ್ಞಾನ ಪಡೆದು ಇಂದಿಗೂ ಚಿರಸ್ಮರಣೀಯವಾಗಿರುವ ರಾಮಾಯಣ ಮಹಾಕಾವ್ಯ ರಚಿಸಿದರು. ಈ ಮಹಾಕಾವ್ಯವನ್ನುಆದರ್ಶವಾಗಿರಿಸಿಕೊಂಡು ಪ್ರತಿಯೊಬ್ಬರೂ ಸನ್ಮಾರ್ಗದಲ್ಲಿ ನಡೆದು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ, ರಾಮಾಯಣ ಮಹಾಕಾವ್ಯ ಸಾಮಾಜಿಕ, ರಾಜಕೀಯ, ವೈಯುಕ್ತಿಕ ಜೀವನ
ಸೇರಿದಂತೆ ಹಲವಾರು ವಿಷಯಗಳ ಮೌಲ್ಯಗಳನ್ನು ಬಿಂಬಿಸುತ್ತದೆ. ಆದ್ದರಿಂದಲೇ ಈ ಕಾವ್ಯವು ಇಂದಿಗೂ ಸಮಾಜಕ್ಕೆ
ಮಾದರಿಯಾಗಿ ಉಳಿದಿದೆ ಎಂದು ಹೇಳಿದರು.

ಒಬ್ಬ ವ್ಯಕ್ತಿ ಹಿನ್ನೆಲೆ ಏನೇ ಆಗಿದ್ದರೂ ಏಕಾಗ್ರತೆ ಹಾಗೂ ಶ್ರದ್ಧೆಯಿಂದ ದೊಡ್ಡ ಸಾಧನೆ ಮಾಡಬಹುದು ಎನ್ನುವುದಕ್ಕೆ ಮಹರ್ಷಿ ವಾಲ್ಮೀಕಿ ಸಾಕ್ಷಿ ಆಗಿದ್ದಾರೆ. ರಾಮಾಯಣ ಕಾವ್ಯದಲ್ಲಿ ವಾಲ್ಮೀಕಿ ಚಿತ್ರಿಸಿರುವ ನಿದರ್ಶನಗಳು ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯ ಜೀವನಕ್ಕೆ ಹೋಲಿಕೆ ಆಗುತ್ತವೆ. ಆದ್ದರಿಂದ ಆ ಮಹಾಕಾವ್ಯದಲ್ಲಿ ವ್ಯಕ್ತವಾಗಿರುವ ಸತ್ಯ, ಧೈರ್ಯ, ಸಹನೆ, ಕ್ಷಮೆ ಹೀಗೆ ಹಲವು ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ರಂಗಕರ್ಮಿ ಜಯಶಂಕರ್ ಬೆಳಗುಂಬ ಮಾತನಾಡಿ, ರಾಮಾಯಣ ರಚಿಸಿದ ವಾಲ್ಮೀಕಿ ಜೀವನ ಕುರಿತು ಅನೇಕ ರೀತಿಯ ಉಲ್ಲೇಖಗಳಿವೆ. ಆದರೆ ವಾಸ್ತವಿಕತೆಯನ್ನು ಅರಿಯಲು ಯಾರೂ ಪ್ರಯತ್ನಿಸುತ್ತಿಲ್ಲ. ಸುಮಾರು 24,000 ಶ್ಲೋಕಗಳು ಹಾಗೂ 6 ಖಂಡಗಳನ್ನು ಒಳಗೊಂಡಿರುವ ರಾಮಾಯಣ ಮಹಾಕಾವ್ಯ ಪ್ರೀತಿ, ತ್ಯಾಗ, ಸಹನೆ, ಪ್ರಕೃತಿ ಸೌಂದರ್ಯ, ವಿರಹ ಹೀಗೆ ಹಲವಾರು ಅಂಶಗಳನ್ನು ಒಳಗೊಂಡಿದೆ ಎಂದು ವಿವರಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್, ಹೆಚ್ಚುವರಿ ಪೊಲೀಸ್ ವರೀಷ್ಠಾಧಿಕಾರಿ ಬಿ.ಎನ್. ನಂದಿನಿ, ಉಪವಿಭಾಗಾಧಿಕಾರಿ ಬಿ.ಎ. ಜಗದೀಶ್, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ. ಶಿವಣ್ಣ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀಧರ್, ತಹಶೀಲ್ದಾರ್ ಶಿವಶಂಕರಪ್ಪ ಇದ್ದರು.‌


ಇದೇ ವೇಳೆ ಭಾರತದ ಪ್ರಥಮ ಗೃಹಮಂತ್ರಿ ಸರ್ದಾರ್‌ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT