ಹಾಸನ: ನಗರಕ್ಕೆ 24x7 ಕುಡಿಯುವ ನೀರು ಪೂರೈಕೆ

ಹಾಸನ: ನಗರಕ್ಕೆ 24x7 ಕುಡಿಯುವ ನೀರು ಪೂರೈಸುವ ಅಮೃತ್ ಯೋಜನೆ ಶೇ 90ರಷ್ಟು ಪೂರ್ಣಗೊಂಡಿದ್ದು, ಗುರುವಾರ ದಿಂದಲೇ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ ಎಂದು ಶಾಸಕ ಪ್ರೀತಂ ಗೌಡ ತಿಳಿಸಿದರು.
ನಗರಸಭೆಯ 35 ವಾರ್ಡ್‍ಗಳ ಪೈಕಿ 16 ವಾರ್ಡ್‌ಗಳಿಗೆ ಪೈಪ್‌ಲೈನ್ ಅಳವಡಿಕೆ ಕಾರ್ಯ ಮುಕ್ತಾಯ ಗೊಂಡಿದ್ದು, ಪ್ರಾಯೋಗಿಕ ವಾಗಿ ಕುಡಿಯುವ ನೀರು ಪೂರೈಸಲಾಗುತ್ತಿದೆ. ಉಳಿದ 17 ವಾರ್ಡ್‌ಗಳಿಗೆ ಹಂತ ಹಂತವಾಗಿ ಪೈಪ್‌ಲೈನ್ ಅಳವಡಿಸಿದ ನಂತರ ನೀರು ಪೂರೈಸಲಾಗುವುದು. ನಗರಸಭೆಗೆ ಹೊಸದಾಗಿ ಸೇರ್ಪಡೆ ಯಾಗಿರುವ 25 ಹಳ್ಳಿಗಳಿಗೂ ನೀರು ಪೂರೈಕೆ ಮಾಡಲಾಗುವುದು. ಪ್ರಾಯೋಗಿಕವಾಗಿ ನೀರು ಹರಿಸುತ್ತಿರು ವುದರಿಂದ ಕ್ಲೋರಿನ್ ಮಿಶ್ರಿತ ನೀರು ಪೂರೈಕೆ ಆಗಲಿದ್ದು, ನಾಗರಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅಮೃತ್ ಯೋಜನೆಯ ಅನುಷ್ಠಾನಕ್ಕೆ ₹ 136 ಕೋಟಿ ವೆಚ್ಚವಾಗಿದೆ. ಜಯನಗರದಲ್ಲಿ ಬೃಹತ್ ನೀರು ಸಂಗ್ರಹ ಟ್ಯಾಂಕ್ ನಿರ್ಮಾಣ, ಪೈಪ್‌ಲೈನ್ ಅಳವಡಿಕೆಗೆ ₹ 60 ಕೋಟಿ ವೆಚ್ಚವಾಗಲಿದ್ದು, ಅನುದಾನ ಕೋರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡ ಲಾಗುವುದು. ಸದ್ಯ ಮನೆಗಳಿಗೆ ಮೀಟರ್ ಅಳವಡಿಸುವುದಿಲ್ಲ. ಪೈಪ್‌ಲೈನ್ ಅಳವಡಿಕೆ ಪೂರ್ಣಗೊಂಡ ಬಳಿಕ ಮೀಟರ್ ಅಳವಡಿಸಿ, ನಾಗರಿಕರು, ಸದಸ್ಯರ ಜತೆ ಚರ್ಚಿಸಿ ಶುಲ್ಕ ನಿಗದಿ ಪಡಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ವಿದ್ಯಾನಗರ, ಜಯನಗರಕ್ಕೆ ಪೈಪ್ ಲೈನ್ ವ್ಯವಸ್ಥೆ ಇದೆ. ಬೂವನಹಳ್ಳಿ, ಗವೇನಹಳ್ಳಿಗಳಿಗೆ ಹೊಸದಾಗಿ ಪೈಪ್‌ಲೈನ್ ಅಳಡಿಸಬೇಕಾಗಿದೆ. ಕೃಷ್ಣನಗರ ಸೇರಿದಂತೆ ಹೊಸ ಬಡಾವಣೆ ಗಳಿಗೂ ನೀರೂ ಪೂರೈಕೆ ಆಗಲಿದೆ ಎಂದರು.
ಹೊಸ ಬಸ್ ನಿಲ್ದಾಣ ಬಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಡಿಸೆಂಬರ್ ವೇಳೆಗೆ ಮುಗಿಯಬೇಕಾಗಿತ್ತು. ಆದರೆ, ಕೊರನಾ ಎರಡನೇ ಅಲೆ ಹಿನ್ನೆಲೆಯಲ್ಲಿ ವಿಳಂಬವಾಗಿದೆ. 2022 ರ ಮಾರ್ಚ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದರು.
ನಗರದಲ್ಲಿ ನಡೆಯುತ್ತಿರುವ ಕಾಂಕ್ರೀಟ್ ರಸ್ತೆ ಕಾಮಗಾರಿಯಾಗಿದೆ ಎಂಬ ಜೆಡಿಎಸ್ ಮುಖಂಡರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಪ್ರೀತಂ, ಕಳಪೆ ಕಾಮಗಾರಿ ನಡೆದಿರುವ ಬಗ್ಗೆ ಸಾರ್ವಜನಿಕರು ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು. ನಿಯಮದ ಪ್ರಕಾರ ಕಾಮಗಾರಿ ನಡೆಯುತ್ತಿದ್ದು, ಲೋಪವಾಗಿಲ್ಲ . ಸಾಲಗಾಮೆ ರಸ್ತೆಯ ಸರಸ್ವತಿ ದೇವಸ್ಥಾನ–ದಾಸರಕೊಪ್ಪಲು ವೆರೆಗಿನ ರಸ್ತೆ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ ಎಂದರು.
ಸಹ್ಯಾದ್ರಿ ಸರ್ಕಲ್ ಬಳಿಯ ಫುಡ್ ಕೋರ್ಟ್ ಸ್ಥಳಾಂತರಕ್ಕೆ ಹೋರಾಟ ಮಾಡಲಾಗುವುದು ಎಂಬ ಜೆಡಿಎಸ್ ಮುಖಂಡರ ಹೇಳಿಕೆಗೆ ತಿರುಗೇಟು ನೀಡಿದ ಶಾಸಕ, ಬಡವರ್ಗದ ಜನರು ವ್ಯಾಪಾರ ನಡೆಸುತ್ತಿದ್ದು, ರಾಜಕೀಯ ಮಾಡುವುದು ಬೇಡ. ಒಳ್ಳೆಯ ಕೆಲಸಕ್ಕೆ ವಿಘ್ನ ತರುವುದೇ ಜೆಡಿಎಸ್ ಕೆಲಸ ಎಂದು ವ್ಯಂಗ್ಯವಾಡಿದರು.
ನಗರಸಭೆ ಅಧ್ಯಕ್ಷ ಆರ್. ಮೋಹನ್, ಸದಸ್ಯ ದಯಾನಂದ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.