ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅರಸೀಕೆರೆ | 25 ವರ್ಷಗಳ ರಾಜಕೀಯ ಬದಲಿಸುವ ಸಮಯ: ಸಚಿವ ಕೆ.ಎನ್‌. ರಾಜಣ್ಣ

Published 29 ಮಾರ್ಚ್ 2024, 13:51 IST
Last Updated 29 ಮಾರ್ಚ್ 2024, 13:51 IST
ಅಕ್ಷರ ಗಾತ್ರ

ಅರಸೀಕೆರೆ: 25 ವರ್ಷಗಳಿಂದ ಹಾಸನ ಜಿಲ್ಲೆಯಲ್ಲಿ ನಡೆದಿರುವ ವಿವಿಧ ರೀತಿಯ ರಾಜಕೀಯ ಆಗುಹೋಗುಗಳಿಗೆ ಅಂತ್ಯ ಹಾಡುವ ಸಮಯ ಬಂದಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರನ್ನು ಗೆಲ್ಲಿಸಿಕೊಡಿ ಎಂದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ ಮನವಿ ಮಾಡಿದರು.

ಅರಸೀಕೆರೆ ಹಾಗೂ ಗಂಡಸಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಶುಕ್ರವಾರ ಇಲ್ಲಿನ ಕಸ್ತೂರಿ ಬಾ ಶಿಬಿರದಲ್ಲಿ ನಡೆದ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು, ಬೂತ್ ಮಟ್ಟದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದ ಜನರ ನೆಮ್ಮದಿಯ ಬದುಕಿಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಬಡವರು, ಮಹಿಳೆಯರು, ದೀನ ದಲಿತರಿಗೆ ಆಸರೆಯಾಗಿದೆ ಎಂದರು. 

ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ದೇಶದ ಬಡವರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು, ಮಹಿಳೆಯರ ಪರವಾಗಿದೆ. ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ವರ್ಷಕ್ಕೆ ₹ 1 ಲಕ್ಷ ನೀಡುವುದು ಸೇರಿದಂತೆ ವಿವಿಧ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಿದ್ದವಿದೆ ಎಂದರು. 

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಹಾಸನಕ್ಕೆ ಭೇಟಿ ನೀಡಿದಾಗೆಲ್ಲಾ, ಪ್ರಜ್ವಲ್ ರೇವಣ್ಣನನ್ನು ಕ್ಷಮಿಸಿಬಿಡಿ ಎಂದು ಪದೇ ಹೇಳುವುದರ ಹಿಂದಿನ ಅರ್ಥ ಏನು ಎಂಬುದನ್ನು ಜಿಲ್ಲೆಯ ಮತದಾರರು ಅರ್ಥ ಮಾಡಿಕೊಳ್ಳಬೇಕು ಎಂದರು.

ಗೃಹ ಮಂಡಳಿ ಅಧ್ಯಕ್ಷ, ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ನನ್ನ ಮಾನ ಮರ್ಯಾದೆ ಉಳಿಯಬೇಕಾದರೆ ಹಾಗೂ ನಾನು ಮಂತ್ರಿ ಆಗಬೇಕೆಂದರೆ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಗೆಲ್ಲಲೇಬೇಕು. ಅದರಲ್ಲೂ ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 30 ಸಾವಿರ ಮತಗಳಿಗೂ ಹೆಚ್ಚು ಅಂತರ ಸಾಧಿಸಲೇಬೇಕು ಎಂದು ಹೇಳಿದರು. 

ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಒಂದೇ ಕುಟುಂಬದ ರಾಜಕೀಯ ಸಾರ್ವಭೌಮತೆ ಮೆರೆಯುತ್ತಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ತಂದೆ ಕಳೆದುಕೊಂಡಿರುವ ಶ್ರೇಯಸ್ ಪಟೇಲ್ ಅವರನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಮತದಾರರು ಗೆಲ್ಲಿಸಲೇಬೇಕು ಎಂದರು.

ಭಾರತದ ಒಕ್ಕೂಟದ ವ್ಯವಸ್ಥೆಗೆ ಕೇಂದ್ರ ಸರ್ಕಾರ ವಿರುದ್ಧವಾಗಿ ಆಡಳಿತ ನಡೆಸುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಕೇವಲ ಕಾರ್ಪೋರೇಟ್ ಸಂಸ್ಥೆಗಳು ಮಾತ್ರ ಕಾಣಿಸುತ್ತಿವೆ. ಬಡವರು, ದೀನ ದಲಿತರು, ಅಲ್ಪಸಂಖ್ಯಾತರು, ಮಹಿಳೆಯರು, ಹಿಂದುಳಿದ ವರ್ಗಗಳವರು ಹಾಗೂ ಅವರ ಸಮಸ್ಯೆಗಳು ಕಾಣಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. 

ನನ್ನ ದೇಹದಲ್ಲಿರುವ ರಕ್ತದ ಕಣವೂ ಬಿಜೆಪಿ ಪಕ್ಷ ಸೇರುವುದಿಲ್ಲ. ನಾವೂ ಯಾವಾಗಲೂ ಜಾತ್ಯಾತೀತ ಪಕ್ಷ ಎಂದು ಈಗ ಮೈತ್ರಿ ಮಾಡಿಕೊಂಡಿದ್ದಿರಾ ಎಂದು ದೇವೇಗೌಡರನ್ನು ಪ್ರಶ್ನಿಸಿದ ಶಿವಲಿಂಗೇಗೌಡ, ರಾಜ್ಯದ ಜನತೆ ಮೈತ್ರಿ ಒಪ್ಪುವುದಿಲ್ಲ. ಹಾಸನ ಜನ ಬುದ್ದಿವಂತರಿದ್ದಾರೆ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡುತ್ತಾರೆ ಎಂದರು.

ನಿಮ್ಮ 60 ವರ್ಷ ರಾಜಕೀಯದಲ್ಲಿ ಅರಸೀಕೆರೆಗೆ ನೀರು ಕೊಟ್ಟಿದ್ದಿರೇನ್ರಿ. ನಗರ, ಹಳ್ಳಿಗಳಿಗೆ ನೀರು ಕೊಟ್ಟಿದ್ದು ಸಿದ್ದರಾಮಯ್ಯ. ಆದ್ದರಿಂದ ನಾವೂ ಜನರ ಸೇವೆಯ ಅವಕಾಶ ಹಾಗೂ ಅಭಿವೃದ್ದಿಗಾಗಿ ಪಕ್ಷ ಬದಲಾವಣೆ ಮಾಡಿದ್ದೇವೆ ಎಂದರು.

ಅರಕಲಗೂಡು ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕುಗಳ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕಡೂರು ಶಾಸಕ ಆನಂದ್, ಚನ್ನರಾಯಪಟ್ಟಣ ಮಾಜಿ ಶಾಸಕ ಪುಟ್ಟೇಗೌಡ, ಕಾಂಗ್ರೆಸ್ ಮುಖಂಡ ಜಿ.ಬಿ. ಶಶಿಧರ್ ಮಾತನಾಡಿದರು. 

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣ್, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್, ಗಂಡಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಟ್ರೊ ಬಾಬು, ಕಾಂಗ್ರೆಸ್ ಮುಖಂಡರಾದ ಜೆ.ಪಿ. ಜಯಣ್ಣ, ಗಂಜಿಗೆರೆ ಚಂದ್ರಶೇಖರ್, ಬಿಳಿಚೌಡಯ್ಯ, ಪಟೇಲ್ ಶಿವಪ್ಪ, ತೊಂಡಿಗನಹಳ್ಳಿ ಕೃಷ್ಣಮೂರ್ತಿ, ಮಾಡಾಳು ಸ್ವಾಮಿ, ನಾಗಸಮುದ್ರ ಸ್ವಾಮಿ, ವಿಧಾನ ಪರಿಷತ್ ಮಾಜಿ ಸದಸ್ಯ ಗೋಪಾಲಸ್ವಾಮಿ, ಧರ್ಮಶೇಖರ್ ಗೀಜಿಹಳ್ಳಿ, ಸಕಲೇಶಪುರದ ಮುರುಳಿ ಮೋಹನ್, ಹಾಸನದ ಬನವಾಸೆ ರಂಗಸ್ವಾಮಿ, ದೇವರಾಜೇಗೌಡ, ತಾಲ್ಲೂಕಿನ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು, ಹಾಸನ ಜಿಲ್ಲೆಯ ವಿವಿಧ ತಾಲ್ಲೂಕುಗಳ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. 

ಜಿಲ್ಲೆಯನ್ನು ಗೌಡರ ಕುಟುಂಬ ದತ್ತು ಪಡೆದಿದೆಯೇ?

ಹಿಂದೆ ಮಹಾರಾಣಿ ಉದರದಿಂದ ಜನಿಸಿದವರು ಮಾತ್ರ ರಾಜರಾಗುತ್ತಿದ್ದರು. ಪ್ರಸ್ತುತ ದಿನಗಳಲ್ಲಿ ಮತಗಟ್ಟೆಯಿಂದ ರಾಜಕುಮಾರ ಹುಟ್ಟುತ್ತಾನೆ ಎಂದು ಈ ಹಿಂದೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಹೇಳಿದ ಸತ್ಯ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಜವಾಗುತ್ತಿದೆ ಎಂದು ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಹೇಳಿದರು.  ಹಾಸನ ಜಿಲ್ಲೆಯನ್ನು ಎಚ್.ಡಿ. ದೇವೇಗೌಡರ ಕುಟುಂಬ ದತ್ತು ಪಡೆದಿದೆಯೇ? ಶ್ರೇಯಸ್ ಪಟೇಲ್ ಹೊಸ ಮುಖ. ಅವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಎಚ್.ಡಿ. ದೇವೇಗೌಡರು ಹಾಸನ ಜಿಲ್ಲೆಯ ಸಂಸದರಾಗಿರಲು ಅವರ ಕುಟುಂಬದವರೇ ಬಿಡಲಿಲ್ಲ. ಈ ಇಳಿ ವಯಸ್ಸಿನಲ್ಲಿ ಅವರನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ವಿಪರ್ಯಾಸ ಎಂದರು. 

‘ಒಂದು ಬಾರಿ ನನಗೂ ಅವಕಾಶ ನೀಡಿ’

25 ವರ್ಷಗಳಿಂದ ನಮ್ಮ ಕುಟುಂಬವೂ ಚುನಾವಣೆಗಳಲ್ಲಿ ಸೋತು ನೊಂದಿದ್ದೀವಿ. ಒಂದು ಬಾರಿ ಜಿಲ್ಲೆಯ ಜನರ ಸೇವೆ ಮಾಡಲು ಅವಕಾಶ ಕೊಡಿ. ತಬ್ಬಲಿ ಹುಡುಗ ನಿಮ್ಮ ಮನೆಯ ಮಗನಂತೆ ಕೆಲಸ ಮಾಡುತ್ತೇನೆ ಎಂದು ಲೋಕಸಭಾ ಅಭ್ಯರ್ಥಿ ಶ್ರೇಯಸ್ ಪಟೇಲ್ ಮನವಿ ಮಾಡಿದರು. ಹೊಟ್ಟೆ ಹಸಿದವರಿಗೆ ಊಟ ಹಾಕಿ. ಹೊಟ್ಟೆ ತುಂಬಿದವರಿಗೆ ಕುಟುಂಬ ರಾಜಕಾರಣಕ್ಕೆ ಮತ್ತೊಮ್ಮೆ ಅವಕಾಶ ಕೊಡದೇ ಜನರ ಸೇವೆಗೆ ನಮಗೂ ಒಂದು ಅವಕಾಶ ಕೊಡಿ. ಬಡವರ ಅಭಿವೃದ್ದಿಯನ್ನೇ ತಮ್ಮ ಗುರಿಯನ್ನಾಗಿ ಹೊಂದಿರುವ ಕಾಂಗ್ರೆಸ್ ಪಕ್ಷವನ್ನು ಜಿಲ್ಲೆಯಲ್ಲಿ ಗೆಲ್ಲಿಸಬೇಕು. ಮತದಾರರು ಕಾರ್ಯಕರ್ತರು ಮುಖಂಡರು ನಮ್ಮ ಕೈ ಬಿಡಬೇಡಿ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT