ಬೇಲೂರು: ತಾಲ್ಲೂಕಿನ ಕುಶಾವರ ಗ್ರಾಮ ಪಂಚಾಯಿತಿಯ ಚೌಡನಹಳ್ಳಿಯಲ್ಲಿ ಬುಧವಾರ ರಾತ್ರಿ ಗೋಣಿಚೀಲದ ಮೂಟೆಯಲ್ಲಿ 38 ಮಂಗಗಳ ಮೃತದೇಹಗಳು ಕಂಡು ಬಂದಿವೆ. ಸ್ಥಳೀಯರು ಮೂಟೆಯನ್ನು ಬಿಚ್ಚಿದ್ದಾಗ ಜೀವಂತವಿದ್ದ 15 ಮಂಗಗಳು ಕೂಡಲೇ ಓಡಿ ಹೋದವು. ತೀವ್ರವಾಗಿ ಗಾಯಗೊಂಡಿದ್ದ ಮಂಗವೊಂದಕ್ಕೆ ಚಿಕಿತ್ಸೆ ನೀಡಲಾಗಿದೆ.
‘ಬುಧವಾರ ರಾತ್ರಿ 10.30ರ ವೇಳೆಯಲ್ಲಿ ಸ್ನೇಹಿತರೊಂದಿಗೆ ನಡೆದು ಹೋಗುವಾಗ ಗೋಣಿಚೀಲದ ಮೂಟೆಗಳನ್ನು ಗಮನಿಸಿ ಬಿಚ್ಚಿ ನೋಡಿದಾಗ ಮಂಗಗಳು ಕಂಡು ಬಂದವು. ಜೀವಂತವಾಗಿದ್ದ ಮಂಗಗಳು ಜೀವಭಯದಿಂದ ಓಡಿ ಹೋದವು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದೆವು’ ಎಂದು ಗ್ರಾಮದ ಆದೇಶ ‘ಪ್ರಜಾವಾಣಿ’ಗೆ ತಿಳಿಸಿದರು.
‘ತಗರೆ ಅರಣ್ಯದಲ್ಲಿ ಮಂಗಗಳ ಅಂತ್ಯಸಂಸ್ಕಾರ ಮಾಡಿದೆವು. ಗಾಯಾಳು ಮಂಗವೊಂದಕ್ಕೆ ಚಿಕಿತ್ಸೆ ಕೊಡಿಸಿದೆವು. ಮರಣೋತ್ತರ ಪರೀಕ್ಷೆ ನಡೆಸಿ, ದೇಹದ ಅಂಗಾಂಗ ಮಾದರಿಯನ್ನು ಮೈಸೂರಿನ ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ಯಶ್ಮಾ ಮಾಚಮ್ಮ ತಿಳಿಸಿದರು.
‘ವಿಷಪ್ರಾಷನ ಅಥವಾ ಬಲವಾದ ಆಯುಧದಿಂದ ಹಲ್ಲೆ ನಡೆಸಿ ಮಂಗಗಳನ್ನು ಕೊಂದಿರಬಹುದು. ಪ್ರಯೋಗಾಲಯದ ವರದಿ ಬಂದ ಮೇಲಷ್ಟೇ ನಿಖರ ಕಾರಣ ಗೊತ್ತಾಗುತ್ತದೆ’ ಎಂದು ಪಶುಪಾಲನೆ ಇಲಾಖೆಯ ಸಹಾಯಕ ನಿರ್ದೇಶಕ ಗಂಗಾಧರ್ ತಿಳಿಸಿದರು. ‘ಪ್ರಕರಣದ ತನಿಖೆ ಪ್ರಾರಂಭಿಸಿದ್ದು, ತಪ್ಪಿತಸ್ಥರನ್ನು ಹುಡುಕಿ ಕ್ರಮ ಕೈಗೊಳ್ಳಲಾಗುವುದು’ ಎಂದು ಸಿಪಿಐ ಶ್ರೀಕಾಂತ್ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.