ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲ: ಶಾಸಕ ರೇವಣ್ಣ ಆರೋಪ

ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಜನರು ದಂಗೆ ಏಳುತ್ತಾರೆ: ಡಿ.ಸಿ ವಿರುದ್ಧ ಶಾಸಕ ರೇವಣ್ಣ ಆರೋಪ
Last Updated 11 ಮೇ 2021, 13:22 IST
ಅಕ್ಷರ ಗಾತ್ರ

ಹಾಸನ: ಕೋವಿಡ್‌ 2ನೇ ಅಲೆ ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದ್ದು, ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಜನರೇ ದಂಗೆ ಏಳುತ್ತಾರೆ ಎಂದು ಶಾಸಕ ಎಚ್‌.ಡಿ.ರೇವಣ್ಣಎಚ್ಚರಿಸಿದರು.

ಕೊರೊನಾ ಪ್ರಕರಣಗಳು ಹೆಚ್ಚು ಇರುವ ಜಿಲ್ಲೆಗಳಲ್ಲಿ ಹಾಸನ ಮೂರನೇ ಸ್ಥಾನದಲ್ಲಿದೆ. ಹದಿನೈದು ದಿನಗಳಿಂದ ಕೊರೊನಾ ಸೋಂಕಿತರಿಗೆ ಅಗತ್ಯ ಔಷಧಿ ಹಾಗೂ ಆಸ್ಪತ್ರೆಗಳಿಗೆವೈದ್ಯಕೀಯ ಸಾಮಗ್ರಿ ಖರೀದಿಸಲು ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದರೂ ಈವರೆಗೂ ಬಿಡಿಗಾಸು ಹಣ ಬಿಡುಗಡೆ ಮಾಡಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಹಿಮ್ಸ್ ಆಸ್ಪತ್ರೆಯಲ್ಲಿ 200 ಕೊರೊನಾ ಸೋಂಕಿತರ ಸಾವಿಗೆ ಜಿಲ್ಲಾಧಿಕಾರಿಯೇ ನೇರಹೊಣೆ. ಸರಿಯಾದ ಸಮಯಕ್ಕೆ ಹಣ ಬಿಡುಗಡೆ ಮಾಡಿ ಔಷಧ ಖರೀದಿಸಿ ಚಿಕಿತ್ಸೆ ನೀಡಿದ್ದರೆಯಾಕೆ ಸಾಯುತ್ತಿದ್ದರು’ ಎಂದು ಪ‍್ರಶ್ನಿಸಿದರು.

ತಾಲ್ಲೂಕಿನಲ್ಲಿ ಟಾಸ್ಕ್ ಫೋರ್ಸ್ ಸಮಿತಿ ರಚಿಸಿ, ಈವರೆಗೂ ಹಣ ಬಿಡುಗಡೆ ಮಾಡಿಲ್ಲ. ಜಿಲ್ಲೆಯ ಜನರ ಪ್ರಾಣದ ಜೊತೆ ಜಿಲ್ಲಾಧಿಕಾರಿ ಚೆಲ್ಲಾಟವಾಡುತ್ತಿದ್ದಾರೆ. ಮೈಸೂರಿನಲ್ಲಿ ₹ 17 ಕೋಟಿ ಖರ್ಚು ಮಾಡಲಾಗಿದೆ. ಕೂಡಲೇ ಕೊರೊನಾ ನಿರ್ವಹಣೆಗಾಗಿ ₹20 ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಜಿಲ್ಲಾಧಿಕಾರಿ ಪ್ರಸ್ತಾವನೆ ಸಲ್ಲಿಸಬೇಕು ಎಂದು ಆಗ್ರಹಿಸಿದರು.

ಖಾಸಗಿ ಆಸ್ಪತ್ರೆಗಳ ಜತೆ ಜಿಲ್ಲಾಡಳಿತ ಶಾಮೀಲಾಗಿದೆ. ಕೋವಿಡ್ ರೋಗಿಗಳ ವೈದ್ಯಕೀಯ ಚಿಕಿತ್ಸಾ ವೆಚ್ಚ ದುಪ್ಪಟ್ಟು ವಸೂಲು ಮಾಡುತ್ತಿದ್ದರೂ ಕ್ರಮ ಕೈಗೊಂಡಿಲ್ಲ. ಬಡವರು ಹಣ ಕಟ್ಟಲು ಸಾಧ್ಯವಾಗದೆ ಮಾಂಗಲ್ಯ ಸರ ಮಾರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಸದೆ ಖಾಸಗಿ ಆಸ್ಪತ್ರೆಗಳಿಗೆ ಸರಬರಾಜು ಮಾಡಲಾಗುತ್ತಿದೆ. ಆಸ್ಪತ್ರೆ, ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ದಾಳಿ ನಡೆಸಿಲ್ಲ. ಇದರ ಹಿಂದೆ ಯಾರು ಇದ್ದಾರೆ ಎಂಬುದು ಗೊತ್ತಿದೆ ಎಂದು ಗುಡುಗಿದರು.

ಸತತವಾಗಿ‌ ಒಂದು ವಾರದಿಂದ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಜಿಲ್ಲೆಯ ಜನರು ಶಾಂತಿಪ್ರಿಯರು, ಅವರ ತಾಳ್ಮೆ ಪರೀಕ್ಷೆ ಮಾಡಬೇಡಿ. ಜನ‌ ದಂಗೆ ಏಳುವ ಸನ್ನಿವೇಶ ಸೃಷ್ಟಿಮಾಡಬೇಡಿ, ಜನ‌ ದಂಗೆ ಎದ್ದರೆ ಯಾರೂ ಉಳಿಯಲ್ಲ. ಜಿಲ್ಲಾಡಳಿತ ಎಚ್ಚೆತ್ತುಕೊಳ್ಳದಿದ್ದರೆ ದೊಣ್ಣೆ, ಬಡಿಗೆ ತೆಗೆದುಕೊಳ್ಳುವಂತೆ ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ ಕೋವಿಡ್‌ ಅಂಕಿ ಅಂಶ ಸರಿಯಾಗಿಲ್ಲ. ನಿತ್ಯ ಔಷಧ ಸಿಗದೆ 50 ರಿಂದ 60 ಜನ ಸಾಯುತ್ತಿದ್ದಾರೆ. ಇದರ ಲೆಕ್ಕವೇ ಇಲ್ಲ. ವೈದ್ಯರು, ನರ್ಸ್‌ಗಳಿಗೆ ಸರಿಯಾದ ಪಿಪಿಇ ಕಿಟ್‌ಗಳು ಇಲ್ಲ. ಕೈ ಗವಸು ಇಲ್ಲ. ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಜಿಲ್ಲಾ ಶಸ್ತ್ರಚಿಕಿತ್ಸಕ, ತಾಲ್ಲೂಕು ಆರೋಗ್ಯಾಧಿಕಾರಿ, ತಹಶೀಲ್ದಾರ್‌ ಅವರು ಹಗಲು, ರಾತ್ರಿ ಶ್ರಮ ವಹಿಸಿ ಒಂದು ತಂಡವಾಗಿ ಕೆಲಸ ಮಾಡಿದರೆ ಮಾತ್ರ ಸೋಂಕು ನಿಯಂತ್ರಿಸಲು ಸಾಧ್ಯ ಎಂದು ಸಲಹೆ ನೀಡಿದರು.

ಕಾಳಸಂತೆಯಲ್ಲಿ ರೆಮ್‌ಡಿಸಿವಿರ್‌ ಮಾರಾಟ, ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್‌ ಬ್ಲಾಕಿಂಗ್ ಹಾಗೂ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ದುಪ್ಪಟು ಹಣ ವಸೂಲಿಗೆ ಕಡಿವಾಣ ಹಾಕುವಂತೆ ಪೊಲೀಸ್‌ ವರಿಷ್ಠಾಧಿಕಾರಿಗೆ ಮನವಿ ಮಾಡಿದರು.

ಅನುದಾನ ಹಂಚಿಕೆಯಲ್ಲೂ ತಾರತಮ್ಯ ಮಾಡಲಾಗಿದೆ. ಹಾಸನ ತಾಲ್ಲೂಕಿಗೆ ₹96 ಲಕ್ಷ ನೀಡಿದರೆ, ಹೊಳೆನರಸೀಪುರಕ್ಕೆ ₹30 ಲಕ್ಷ ನೀಡಲಾಗಿದೆ. ಹಾಸನ ತಾಲ್ಲೂಕಿನ ಎರಡು ಹೋಬಳಿಗಳು ಹೊಳೆನರಸೀಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಕಾರಣ ₹96 ಲಕ್ಷ ಹಣ ಖರ್ಚು ಮಾಡಿರುವಬಗ್ಗೆ ತಹಶೀಲ್ದಾರ್‌ ಲೆಕ್ಕ ನೀಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT