ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ

ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್‌ ಭರವಸೆ
Published 20 ಮಾರ್ಚ್ 2024, 16:06 IST
Last Updated 20 ಮಾರ್ಚ್ 2024, 16:06 IST
ಅಕ್ಷರ ಗಾತ್ರ

ಸಕಲೇಶಪುರ: ಮಲೆನಾಡು ಭಾಗದ ಕಾಡಾನೆ ಸಮಸ್ಯೆಗೆ ಖಂಡಿತ ಶಾಶ್ವತ ಪರಿಹಾರ ರೂಪಿಸಲಾಗುವುದು ಎಂದು ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶ್ರೇಯಸ್ ಪಾಟೀಲ್‌ ಭರವಸೆ ನೀಡಿದರು.

ಪಟ್ಟಣದ ಒಕ್ಕಲಿಗರ ಕಲ್ಯಾಣ ಮಂಟಪ‍ದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಸಕಲೇಶಪುರ, ಆಲೂರು, ಬೇಲೂರು ತಾಲ್ಲೂಕುಗಳಲ್ಲಿ ಕಳೆದ ಎರಡು ದಶಗಳಿಂದ ಕಾಡಾನೆಗಳ ನಿರಂತರ ದಾಳಿಯಿಂದ ಜೀವ, ಬೆಳೆ ಹಾಗೂ ಆಸ್ತಿಪಾಸ್ತಿ ಹಾನಿ ಆಗುತ್ತಲೇ ಇದೆ. ಈ ಸಮಸ್ಯೆಗೆ ಇದುವರೆಗೂ ಒಂದು ಶಾಶ್ವತ ಪರಿಹಾರ ರೂಪಿಸುವಲ್ಲಿ ಹಿಂದಿನ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ‘ನನ್ನನ್ನು ಆಯ್ಕೆ ಮಾಡಿ ಲೋಕಸಭೆಗೆ ಕಳಿಸಿ, ನಿಮ್ಮ ಇಂತಹ ಹತ್ತಾರು ಸಮಸ್ಯೆಗಳಿಗೆ ಪರಿಹಾರ ರೂಪಿಸುತ್ತೇನೆ’ ಎಂದರು.

ಈ ಲೋಕಸಭಾ ಚುನಾವಣೆ ಜಿಲ್ಲೆಯ ರಾಜಕೀಯ ದಿಕ್ಕನ್ನೇ ಬದಲಾವಣೆ ಮಾಡಲಿದೆ. ನನ್ನ ಅಜ್ಜ ಪುಟ್ಟಸ್ವಾಮಿ ಗೌಡರು ಸಂಸದರಾಗಿ, ಸಚಿವರಾಗಿ ಸಕಲೇಶಪುರ ತಾಲ್ಲೂಕಿಗೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂದು ಈ ಭಾಗದ ಕಾಂಗ್ರೆಸ್‌ ಮುಖಂಡರು ಈಗಲೂ ನೆನಪು ಮಾಡಿಕೊಳ್ಳುತ್ತಿದ್ದಾರೆ. ಅವರ ಅಡಿಪಾಯದಲ್ಲಿಯೇ ಜಿಲ್ಲೆಯಲ್ಲಿ ಪಕ್ಷವನ್ನು ಬಲಗೊಳಿಸುವುದು ಮಾತ್ರವಲ್ಲ, ಸಮಗ್ರ ಅಭಿವೃದ್ಧಿಗೆ ಶಕ್ತಿಮೀರಿ ಕೆಲಸ ಮಾಡುತ್ತೇನೆ ಎಂದರು.

ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಶಿವಲಿಂಗೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಹಲವು ದಶಕಗಳಿಂದ ಒಂದೇ ಕುಟುಂಬದ ಹಿಡಿತದಿಂದ ಜಡ್ಡುಗಟ್ಟಿರುವ ರಾಜಕೀಯವನ್ನು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವಿನ ಫಲಿತಾಂಶದ ಮೂಲಕ ಜಡ್ಡು ಕರಗಿಸಿ ತಿಳಿಗೊಳಿಸುವ ಅಗತ್ಯವಿದೆ. ಇಂತಹ ಅವಕಾಶವನ್ನು ಜಿಲ್ಲೆಯ ಜನತೆ ಕೈಬಿಡಬಾರದು ಎಂದರು.

ತಾಲ್ಲೂಕು ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಬೈರಮುಡಿ ಚಂದ್ರು ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಪ್ರಾಮಾಣಿಕರಿಗೆ ಮಾತ್ರ ಅವಕಾಶವಿದೆ. ಪಕ್ಷ ವಿರೋದಿ ಚಟುವಟಿಕೆ ನಡೆಸುವವರು ಪಕ್ಷದಲ್ಲಿ ಇರಲು ಅರ್ಹರಲ್ಲ. ಪಕ್ಷದೊಳಗೆ ಇದ್ದು ಪಕ್ಷಕ್ಕೆ ದ್ರೋಹ ಬಗೆಯುವ ಮನಸ್ಥಿತಿ ಇರುವವರು ಬೇರೆ ಪಕ್ಷಕ್ಕೆ ಹೋಗಬಹುದು ಎಂದು ಸೂಚನೆ ನೀಡಿದರು.

ಕಾಂಗ್ರೆಸ್ ಮುಖಂಡ ಮುರಳಿ ಮೋಹನ್ ಮಾತನಾಡಿ, ಪಕ್ಷಕ್ಕೆ ಮತ ನೀಡುವವರು ಬಹಳಷ್ಟು ಜನ ಇದ್ದಾರೆ. ಆದರೆ ಪಕ್ಷ ಸೋಲಿಸಲು ಪ್ರಯತ್ನಿಸುವವರು ಕೆಲವರು ಪಕ್ಷದೊಳಗೆ ಇದ್ದಾರೆ. ಇವರಿಂದ ನಮಗೆ ಸೋಲಾಗುತ್ತಿದೆ, ಇನ್ನು ಮುಂದೆ ಇದೆಲ್ಲ ನಡೆಯುವುದಿಲ್ಲ. ಇಂಥವರನ್ನು ಪಕ್ಷದಿಂದ ಹೊರಗೆ ಹಾಕಲಾಗುವುದು ಎಂದರು.

ಪಕ್ಷದ ಪ್ರಧಾನ ಕಾರ್ಯದರ್ಶಿ ಗೊದ್ದು ಲೊಕೇಶ್‌, ಲಕ್ಷ್ಮಣ್‌, ಕಲ್ಗಣೆ ಗಿರೀಶ್‌, ಕೊಲ್ಲಹಳ್ಳಿ ಸಲೀಂ, ಪುರಸಭಾ ಸದಸ್ಯೆ ಅನ್ನಪೂರ್ಣ, ಬಿ.ಡಿ.ವಿಜಯ್‌ಕುಮಾರ್, ಹಾನುಬಾಳು ಭಾಸ್ಕರ್, ಮುಫೀಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT