ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಬಗ್ಗೆ ಆಗ ಇದ್ದ ಕಾಳಜಿ ಈಗ ಏಕಿಲ್ಲ: ದೇವೇಗೌಡ, ಮೋದಿಗೆ ಪ್ರಶ್ನೆ

ಹಾಲಿ–ಮಾಜಿ ಪ್ರಧಾನಿಗಳಿಗೆ ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷ ವರಲಕ್ಷ್ಮಿ ಪ್ರಶ್ನೆ
Published 30 ಮೇ 2024, 10:22 IST
Last Updated 30 ಮೇ 2024, 10:22 IST
ಅಕ್ಷರ ಗಾತ್ರ

ಹಾಸನ: ಮಹಿಳಾ ಮೀಸಲಾತಿ ಪರಿಚಯಿಸಿದಾಗ ಮಹಿಳೆಯರ ಬಗ್ಗೆ ನಮಗೆ ಕಾಳಜಿ ಇದೆ ಎಂದು ದೇವೇಗೌಡರು ಹೇಳಿದರು. ಆದರೆ, ಹಾಸನದ ಹೆಣ್ಣುಮಕ್ಕಳ ಬಗ್ಗೆ ಏಕೆ ಆ ಕಾಳಜಿ ಮಾಜಿ ಪ್ರಧಾನಿ ಹಾಗೂ ಹಾಲಿ ಪ್ರಧಾನಿಯಲ್ಲಿ ಕಾಣುತ್ತಿಲ್ಲ. ಹಾಸನದ ಅಕ್ಕ–ತಂಗಿಯರೇ ನಮ್ಮ ಹಕ್ಕುಗಳು ಯಾರ ಭಿಕ್ಷೆಯೂ ಅಲ್ಲ, ಹೋರಾಟದ ಫಲವಾಗಿ ನಮಗೆ ಸಿಕ್ಕಿವೆ. ಈ ದೌರ್ಜನ್ಯದ ಸಂದರ್ಭದಲ್ಲೂ ನಾವೆಲ್ಲರೂ ಗಟ್ಟಿಯಾದ ಹೋರಾಟ ಮಾಡಬೇಕು ಎಂದು ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷೆ ವರಲಕ್ಷ್ಮಿ ಹೇಳಿದರು.

ಈ ಸಮಾಜದ ಸ್ವಾಸ್ಥ್ಯವನ್ನು ಕಡೆಸಿ ಹೆಣ್ಣಿನ ಘನತೆಯನ್ನು ಕುಗ್ಗಿಸಿರುವ ವ್ಯಕ್ತಿಗೆ ನೀಡುವ ಶಿಕ್ಷೆ, ಇಂತಹ ಕೆಲಸ ಮಾಡುವ ಯಾರಿಗೇ ಆದರೂ ಎಚ್ಚರಿಕೆಯ ಗಂಟೆ ಆಗಬೇಕು. ಯಾವ ಮಹಿಳೆಯ ಮೇಲೆ, ಯಾವ ಪುರುಷ ಬಲಾತ್ಕಾರ ಮಾಡಿ, ಆಕೆ ಇರೋದೆ ನಮ್ಮ ಅನುಭೋಗಕ್ಕೆ ಎಂಬ ಮನಸ್ಥಿತಿಯ ಪ್ರಜ್ವಲನಂತಹ ವ್ಯಕ್ತಿಗೆ ತಕ್ಕ ಪಾಠ ಕಲಿಸಲು ಈ ಹೋರಾಟ ನಡೆಯುತ್ತಿದೆ ಎಂದು ಹೇಳಿದರು.

ಹಾಸನದಲ್ಲಿ ನಡೆಯುತ್ತಿರುವ ಹಾಸನ ಚಲೋ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯ ನೇಹಾ ಹತ್ಯೆಯಾದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹಾಗೂ ಅವರ ಚಮಚಾ ಸಂಘಟನೆಗಳು, ಬಿಜೆಪಿ ನಾಯಕರು ಸಾಲು ಸಾಲು ಪ್ರತಿಭಟನೆ ಮಾಡಿ, ಆ ಕುಟುಂಬವನ್ನು ಭೇಟಿ ಮಾಡಿದವು. ಆದರೆ, ಇಂದು ಹಾಸನದ ಯಾವ ಹೆಣ್ಣುಮಕ್ಕಳಿಗೆ ಸಾಂತ್ವನ ಹೇಳಲು ಏಕೆ ಬಂದಿಲ್ಲ. ಈ ರಾಜಕೀಯ ಡೊಂಬರಾಟವನ್ನು ನೋಡಿಕೊಂಡು ಯಾಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದರು.

ಕರ್ನಾಟಕ ಜನಶಕ್ತಿಯ ಮಲ್ಲಿಗೆ ಸಿರಿಮನೆ ಮಾತನಾಡಿ, ಪ್ರಕರಣ ಬಯಲಿಗೆ ಬಂದಾಗ ಒಂದೇ ರೀತಿಯ ಪ್ರತಿಕ್ರಿಯೆಗಳು ಬಂದವು. ಅಪರಾಧಿಗಳು ಮತ್ತವರ ಕುಟುಂಬಗಳು ಪೆನ್‌ಡ್ರೈವ್‌ನ ಹಂಚಿದ್ಯಾರು ಎಂಬುದರ ಬಗ್ಗೆ ಮಾತನಾಡುತ್ತಾ ಪ್ರಕರಣದಿಂದ ನುಣುಚಿಕೊಳ್ಳಲು ಯತ್ನಿಸಿದರು. ಸಂತ್ರಸ್ತ ಮಹಿಳೆಯರನ್ನೇ ಅಪರಾಧಿಗಳನ್ನಾಗಿ ಮಾಡುವ ಯತ್ನಗಳು ನಡೆದವು. ಸರ್ಕಾರವೂ ಪ್ರಕರಣದಲ್ಲಿ ತಮ್ಮದು ಹೆಚ್ಚಿನ ಪಾತ್ರವಿಲ್ಲ ಎಂಬಂತೆ ನುಣುಚಿಕೊಳ್ಳಲು ಯತ್ನಿಸಿತು. ಈ ಎಲ್ಲ ನುಣುಚುಕೋರರ ಬಣ್ಣ ಬಯಲಾಗಿದೆ. ಇದು, ಇಡೀ ವ್ಯವಸ್ಥೆಯ ವೈಫಲ್ಯ ಎಂದು ಹೇಳಿದರು.

ಹೆಣ್ಣು ಮಕ್ಕಳು ತಮ್ಮ ಚಿಕ್ಕ ಕೆಲಸಕ್ಕಾಗಿ, ಬಡ್ತಿಗಾಗಿ, ಪಂಚಾಯಿತಿ ಮಟ್ಟದ ಟಿಕೆಟ್‌ಗಾಗಿ ಇಂತಹ ಕಾಮುಕರ ದೌರ್ಜನ್ಯಕ್ಕೆ ಬಲಿಯಾಗಬೇಕಿರುವ ಪರಿಸ್ಥಿತಿಯನ್ನು ಈ ವ್ಯವಸ್ಥೆ ಮಹಿಳೆಯರಿಗೆ ನೀಡಿದೆ. ವ್ಯವಸ್ಥೆಯನ್ನು ಬದಲಿಸಲು ಇಡೀ ದೇಶ ಒಗ್ಗೂಡಿ ಹೋರಾಟ ನಡೆಸಬೇಕು. ಇಂತಹ ದೌರ್ಜನ್ಯ ಪ್ರಕರಣಗಳನ್ನು ಸಮಗ್ರವಾಗಿ ಪರಿಶೀಲಿಸಲು ಉನ್ನತ ಸಮಿತಿಯನ್ನು ಸರ್ಕಾರ ರಚನೆ ಮಾಡಬೇಕು. ಗುಹೆಯಲ್ಲಿ ಅವಿತಿರುವ ಪ್ರಧಾನಿ ಮೋದಿ ಅವರು, ಗುಹೆಯಿಂದ ಹೊರಬರಬೇಕು. ತಮ್ಮದೇ ಮಿತ್ರ ಪಕ್ಷದ ಸಂಸದ ಎಸಗಿರುವ ದೌರ್ಜನ್ಯದ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT