ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೃಷಿ ಜೊತೆ ಕೈಹಿಡಿದ ಉಪ ಕಸುಬು

ಪೂಜಾರು ರಮೇಶ್‌
Published 28 ಜನವರಿ 2024, 7:12 IST
Last Updated 28 ಜನವರಿ 2024, 7:12 IST
ಅಕ್ಷರ ಗಾತ್ರ

ಅರಸೀಕೆರೆ: ಅರಸೀಕೆರೆ  ಚಗಚಗೆರೆ ಗ್ರಾಮ ಪಂಚಾಯಿತಿಯ ಚಿಕ್ಕಯರಗನಾಳು ಗ್ರಾಮದ ಯುವ ರೈತರೊಬ್ಬರು ಕೃಷಿಯಲ್ಲಿ ಹಲವು ಪ್ರಯೋಗಗಳನ್ನು ಮಾಡಿ ಇತರ ರೈತರಿಗೆ ಮಾದರಿಯಾಗಿದ್ದಾರೆ.

ಗ್ರಾಮದ ಚಂದ್ರಣ್ಣ ತಮ್ಮ 8 ಎಕರೆ ಜಮೀನಿನಲ್ಲಿ ವ್ಯವಸಾಯ, ಮೀನುಗಾರಿಕೆ, ಜೇನು ಸಾಕಣೆ, ಹೈನುಗಾರಿಕೆ, ಕೋಳಿ ಸಾಕಣೆ ಮಾಡುತ್ತಿದ್ದಾರೆ. ಬಿ.ಎ. ಪದವೀಧರರಾದ ಇವರು, ಪದವಿ ನಂತರ ಕಂಪ್ಯೂಟರ್ ಮೆಕ್ಯಾನಿಸ್ಟ್ ಎಂಬ 6 ತಿಂಗಳ ಕೋರ್ಸ್ ಮಾಡಿದರು. 2000 ನೇ ಇಸವಿಯಲ್ಲಿ ಮುಂಬೈಗೆ ಹೋಗಿ ಕೆಲಸಕ್ಕೆ ಸೇರಿದರು.  ಕೌಟುಂಬಿಕ ಸಮಸ್ಯೆಗಳ ಕಾರಣ 2010ರಲ್ಲಿ ಸ್ವಗ್ರಾಮಕ್ಕೆ ಮರಳಿದರು. ಗಂಡಸಿ ಹ್ಯಾಂಡ್ ಪೋಸ್ಟ್‌ನಲ್ಲಿ ಎಸ್. ಕೆ. ಕಂಪ್ಯೂಟರ್ಸ್ ಆರಂಭಿಸಿದರು.  8 ವರ್ಷಗಳ ಇದರಲ್ಲೇ ಜೀವನ ಸಾಗಿಸಿದರು.

ಕೋವಿಡ್–19 ಕಂಪ್ಯೂಟರ್ಸ್ ಸಂಸ್ಥೆಯನ್ನು ಮುಚ್ಚಬೇಕಾಯಿತು. ಅಂದು ಕೃಷಿಯನ್ನು ಶುರು ಮಾಡಿದ ಚಂದ್ರಣ್ಣ, ಪ್ರಾರಂಭದ ದಿನಗಳಲ್ಲಿ ಹೊಸದಾಗಿ ಏನಾದರೂ ಮಾಡಬೇಕು ಎಂದು ನಿರ್ಧರಿಸಿದರು. ವ್ಯವಸಾಯದ ಜೊತೆಗೆ ಮೀನುಗಾರಿಕೆ ಮತ್ತು ಜೇನು ಸಾಕಣೆ ಆರಂಭಿಸಿದರು.

ಸುಮಾರು 70 X 70 ಅಡಿ ನೀರಿನ ಹೊಂಡದಲ್ಲಿ ರಾಹು, ಕಾಟ್ಲಾ, ಮ್ರಿಗಾಲ್, ಕಾಮನ್ ಕಾರ್ಪ್ ಇತ್ಯಾದಿ ಬೇಡಿಕೆ ಇರುವ ಮೀನುಗಳ ಸಾಕಾಣೆ ಮಾಡುತ್ತಿದ್ದಾರೆ. 3 ಸಾವಿರ ಮೀನಿನ ಮರಿಗಳನ್ನು ಹೊಂಡದಲ್ಲಿ ಸಾಕಿದ್ದು, ವರ್ಷಕ್ಕೆ ₹ 1 ಲಕ್ಷದಿಂದ ₹1.5 ಲಕ್ಷ ಆದಾಯ ಪಡೆಯುತ್ತಿದ್ದಾರೆ.

ಇದರ ಜೊತೆಗೆ ಕೋಳಿ ಸಾಕಾಣಿಕೆ ಮಾಡುತ್ತಿದ್ದು, 40 ಕಡಕ್ ನಾಥ್ ಕೋಳಿಗಳನ್ನು ಸಾಕಿದ್ದಾರೆ. 4 ಎಕರೆ ತೋಟದಲ್ಲಿ ತೆಂಗು, ಅಡಿಕೆ, ಬಾಳೆ ಗಿಡಗಳನ್ನು ಬೆಳೆಯುತ್ತಿದ್ದು, ಉಳಿದ 4 ಎಕರೆಯಲ್ಲಿ ಜೋಳ, ರಾಗಿ, ಆಲುಡ್ಡೆ, ಶುಂಠಿ ಬೆಳೆಯುತ್ತಿದ್ದಾರೆ. ಸಾವಯವ ಕೃಷಿಯಲ್ಲಿ ಆಸಕ್ತಿ ಹೊಂದಿರುವ ಚಂದ್ರಣ್ಣ, ಜೀವಾಮೃತ, ಬೀಜಾಮೃತ, ಪಂಚಗವ್ಯಗಳಂತಹ ದ್ರವರೂಪದ ಸಾವಯವ ಗೊಬ್ಬರಗಳನ್ನು ತಯಾರಿಸಿ ತಮ್ಮ ಬೆಳೆಗಳಿಗೆ ಉಪಯೋಗಿಸುತ್ತಾರೆ.

ಪದವಿ ಮುಗಿಸಿ ಕೃಷಿಯಲ್ಲಿ ತಮ್ಮ ಜೀವನವನ್ನು ಕಂಡುಕೊಂಡಿರುವ ಚಂದ್ರಣ್ಣ, ಕೃಷಿಯಿಂದ ವಾರ್ಷಿಕ  ₹5 ಲಕ್ಷ ಆದಾಯ ಪಡೆಯುತ್ತಿದ್ದಾರೆ.

ಇಳುವರಿ ಹೆಚ್ಚಿಸುವ ಜೇನು ಕೃಷಿ

ಜೈನು ಕೃಷಿಯಲ್ಲೂ ಆಸಕ್ತಿ ಹೊಂದಿರುವ ಚಂದ್ರಣ್ಣ, ಪ್ರಾರಂಭದ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಜೇನು ಸಾಕಾಣಿಕೆಯ ಬಗ್ಗೆ ಮಾಹಿತಿ ಪಡೆದರು. ಸುತ್ತಮುತ್ತಲಿನ ರೈತರಿಂದ ಹುಡುಕಿ ಜೇನು ಪೆಟ್ಟಿಗೆಗಳನ್ನು ತಂದು ಜೇನು ಸಾಕಾಣಿಕೆ ಪ್ರಾರಂಭಿಸಿದರು. ಅನೇಕ ಸಮಸ್ಯೆಗಳನ್ನು ಎದುರಿಸಿದರೂ, ಅವುಗಳಿಗೆ ಪರಿಹಾರ ಕಂಡುಕೊಂಡು ಯಶಸ್ವಿಯಾಗಿದ್ದಾರೆ.

ಪ್ರಸ್ತುತ 12 ಜೇನುಪೆಟ್ಟಿಗೆಗಳಲ್ಲಿ ಜೇನು ಸಾಕುತ್ತಿದ್ದು, ಇದರ ಸಂಖ್ಯೆಯನ್ನು ನೂರಕ್ಕೆ ಏರಿಸುವುದು ಇವರ ಗುರಿ. ಪ್ರತಿ ವರ್ಷ ಒಂದು ಪೆಟ್ಟಿಗೆಯಿಂದ ಸುಮಾರು 5 ಕೆ ಜಿ  ಜೇನುತುಪ್ಪವನ್ನು ತೆಗೆಯುತ್ತಿದ್ದಾರೆ. ಮಾರಾಟಕ್ಕಾಗಿ ಅಕ್ಷಯಕಲ್ಪ ಕಂಪನಿಯನ್ನು ಆಶ್ರಯಿಸಿದ್ದಾರೆ. ಹೈನುಗಾರಿಕೆ ಕೂಡ ಮಾಡುತ್ತಿರುವ ಇವರು, 5 ಹಸುಗಳನ್ನು ಹೊಂದಿದ್ದು, ದಿನಕ್ಕೆ 40 ಲೀಟರ್ ಹಾಲನ್ನು ಉತ್ಪಾದಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT