ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಥಳೀಯ ಸಂಸ್ಥೆಯಲ್ಲೂ ಮೈತ್ರಿ ಧರ್ಮ ಪಾಲನೆ: ಪ್ರೀತಂ ಗೌಡ

ಹೊಳೆನರಸೀಪುರಕ್ಕಿಂತ ಹಾಸನದಲ್ಲಿ ಹೆಚ್ಚು ಮತ ಕೊಡಿಸಿದ್ದೇನೆ
Published : 19 ಆಗಸ್ಟ್ 2024, 14:22 IST
Last Updated : 19 ಆಗಸ್ಟ್ 2024, 14:22 IST
ಫಾಲೋ ಮಾಡಿ
Comments

ಹಾಸನ: ರಾಷ್ಟ್ರಮಟ್ಟದಲ್ಲಿ ತೀರ್ಮಾನ ಆಗಿರುವಂತೆ ಮೈತ್ರಿ ಧರ್ಮವನ್ನು ಹಾಸನದಲ್ಲೂ ಪಾಲಿಸಲಾಗುವುದು. ಅದರಂತೆ ಐದು ಸ್ಥಳೀಯ ಸಂಸ್ಥೆಗಳಲ್ಲಿ ಮೈತ್ರಿ ಮುಂದುವರಿಯಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಸ್ಪಷ್ಟಪಡಿಸಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿ ಧರ್ಮ ಪಾಲನೆಯ ಉದ್ದೇಶ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಇರಲಿ ಎಂದು ತೀರ್ಮಾನ ಕೈಗೊಳ್ಳಲಾಗಿದೆ. ಸಮಬಲ ಇರುವ ಸ್ಥಳೀಯ ಸಂಸ್ಥೆಗಳಲ್ಲಿ ಯಾರು ಮೊದಲು ಅಧಿಕಾರ ಹಿಡಿಯಬೇಕು ಎಂಬುದರ ಬಗ್ಗೆ ಚರ್ಚೆ ಮುಂದುವರಿದಿದ್ದು, ಅಂತಿಮವಾಗಿ ಉತ್ತಮ ಫಲಿತಾಂಶ ಹೊರ ಬೀಳಲಿದೆ ಎಂದರು. 

ಚಿಕ್ಕಮಗಳೂರಿನಲ್ಲಿ ಬಿಜೆಪಿ ಬಹುಮತ ಇದೆ. ಜೆಡಿಎಸ್ ಮೂರು ಸ್ಥಾನಗಳನ್ನು ಮಾತ್ರ ಹೊಂದಿದೆ. ಆದರೆ ಇಲ್ಲಿಯೂ ಮೈತ್ರಿ ಧರ್ಮ ಪಾಲಿಸಲಾಗಿದ್ದು, 10 ತಿಂಗಳು ಜೆಡಿಎಸ್ ಹಾಗೂ 20 ತಿಂಗಳು ಬಿಜೆಪಿ ಅಧಿಕಾರ ಹಂಚಿಕೆ ಆಗಿದೆ. ಅದರಂತೆಯೇ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲೂ ಮೈತ್ರಿ ಧರ್ಮ ಮುಂದುವರಿಯಲಿದೆ ಎಂದು ಹೇಳಿದರು.

ಲೋಕಸಭೆ ಚುನಾವಣೆ ಸಂದರ್ಭದಲ್ಲಿಯೂ ಮೈತ್ರಿ ಧರ್ಮ ಪಾಲಿಸಲಾಗಿದೆ. ಅಂದು ನಾನು ಹೇಳಿದಂತೆ ಹೊಳೆನರಸೀಪುರದಲ್ಲಿ ಎಷ್ಟು ಮತ ಬೀಳಲಿವೆಯೋ ಅದಕ್ಕೆ ಒಂದು ಮತ ಹೆಚ್ಚಿಗೆಯಾಗಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಬರಲಿದೆ ಎಂದು ಹೇಳಿದ್ದೆ. ಅದರಂತೆ ಆಗಿದೆ ಎಂದ ಅವರು, ಹಾಸನ ಜಿಲ್ಲೆಯ ಐದು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ಧರ್ಮ ಪಾಲನೆ ಆಗಲಿದ್ದು ಕಾಂಗ್ರೆಸ್ ಪಕ್ಷವನ್ನು ದೂರ ಇಡುವುದೇ ನಮ್ಮ ಉದ್ದೇಶ ಎಂದರು.

ರಾಜ್ಯಪಾಲರ ನಡೆಯ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಪ್ರತಿಭಟನೆ ಮಾಡಲು ಎಲ್ಲರೂ ಸ್ವತಂತ್ರರು. ರಾಜ್ಯಪಾಲರು ಅವರ ಅಧಿಕಾರವನ್ನು ಬಳಸಿ ಆದೇಶ ಮಾಡಿದ್ದಾರೆ. ಇದಕ್ಕೆ ಪರ–ವಿರೋಧ ಎರಡೂ ಇರುತ್ತವೆ. ಕಾನೂನಿಗೆ ಗೌರವ ಕೊಟ್ಟು, ಮುಖ್ಯಮಂತ್ರಿ ಸಹ ತನಿಖೆಗೆ ಸಹಕಾರ ನೀಡಬೇಕು ಎಂದು ಹೇಳಿದರು.

ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸರ್ಜರಿ ಸಂಬಂಧ ಚರ್ಚೆ ಆಗುತ್ತಿದೆ. ಯಾರು ಏನು ಆಗುತ್ತಾರೆ? ತೀರ್ಮಾನ ಮಾಡುವವರು ಯಾರಿದ್ದಾರೆ ಅವರನ್ನೇ ಕೇಳಬೇಕು ಎಂದಷ್ಟೇ ಹೇಳಿದರು.

ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ನಗರಸಭೆ ಮಾಜಿ ಅಧ್ಯಕ್ಷ ಆರ್‌. ಮೋಹನ್, ನಗರ ಮಂಡಲದ ಮಾಜಿ ಅಧ್ಯಕ್ಷ ವೇಣುಗೋಪಾಲ್, ಮಂಜು ಬೀರನಹಳ್ಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT