ಭಾನುವಾರ, ಸೆಪ್ಟೆಂಬರ್ 19, 2021
23 °C
14ನೇ ತೀರ್ಥಂಕರ ಅನಂತನಾಥ ಸ್ವಾಮಿಗೆ ವಿವಿಧ ಅರ್ಘ್ಯಗಳ ಅರ್ಪಣೆ

ಶ್ರವಣಬೆಳಗೊಳ: ಶ್ರದ್ಧಾ ಭಕ್ತಿಯ ಅನಂತ ಚತುರ್ದಶಿ ನೋಂಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರವಣಬೆಳಗೊಳ: ಕ್ಷೇತ್ರದ ಭಂಡಾರ ಬಸದಿಯಲ್ಲಿ 14ನೇ ತೀರ್ಥಂಕರ ಅನಂತನಾಥ ಚತುರ್ದಶಿ ನೋಂಪಿಯನ್ನು ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ಸರಳವಾಗಿ ಮಂಗಳವಾರ ಆಚರಿಸಲಾಯಿತು.

ಕೋವಿಡ್‌–19 ಪ್ರಯುಕ್ತ 3 ದಿನ ನಡೆಯಬೇಕಿದ್ದ ಅನಂತ ನೋಂಪಿಯು ಸಂಕ್ಷಿಪ್ತವಾಗಿ ಚತುರ್ದಶಿಯಂದು ಒಂದೇ ದಿನಕ್ಕೆ ಸೀಮಿತ ಮಾಡಿದ್ದು, ನೋಂಪಿ ಆಚರಿಸುವ ವ್ರತಧಾರಿಗಳಿಗೆ ಕಂಕಣಧಾರಣೆ ಮತ್ತು ವ್ರತಿಕರಿಗೆ 14 ವರ್ಷಗಳ ಕಾಲ ಆಚರಿಸುವ ನೋಂಪಿಯ ದಾರವನ್ನು ವಿತರಿಸಲಾಯಿತು.

ನೋಂಪಿಯ ನಿಮಿತ್ತ ಪೂರ್ಣ ಉಪವಾಸ ಒಳಗೊಂಡಂತೆ ದಿನದಲ್ಲಿ ಒಂದು ಬಾರಿ ಆಹಾರ ಸ್ವೀಕರಿಸುವ ವ್ರತಿಕರಿಗೆ ವ್ರತ ನಿಯಮಗಳನ್ನು ನೀಡಲಾಯಿತು. ತ್ರಿ ಮೇಕಲ ಮಂಟಪದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಅನಂತನಾಥ ತೀರ್ಥಂಕರರ ಮುಂದೆ ಆಸೀನರಾದ ವ್ರತಿಕರು ಕಲಶವನ್ನು ಪ್ರತಿಷ್ಠಾಪಿಸಿ ಸಕಲ ಧಾರ್ಮಿಕ ವಿಧಿಗಳೊಂದಿಗೆ ದಾರಕ್ಕೆ ಮಂತ್ರ ಸಹಿತ 108 ಲವಂಗ ಅರ್ಪಿಸಿ ಸ್ವಾಮಿಯ ಮುಂದೆ ಇರಿಸಿದ್ದ ಯಂತ್ರಕ್ಕೆ ದಾರಗಳನ್ನು ಇರಿಸಲಾಯಿತು. ಅನಂತನಾಥ ಚತುರ್ದಶಿ ನೋಂಪಿಯ ಪೂಜೆಯಲ್ಲಿ 61 ದಂಪತಿಗಳು ಭಾಗಿಯಾಗಿದ್ದರು.

ಮಂಟಪದಲ್ಲಿ ಪ್ರತಿಷ್ಠಾಪಿಸಲ್ಪಟ್ಟ 14ನೇ ತೀರ್ಥಂಕರ ಅನಂತನಾಥ ಸ್ವಾಮಿಯ ಜಿನಮೂರ್ತಿಗೆ ಪ್ರತ್ಯೇಕವಾಗಿ 14 ಬಾರಿ ಜಲ, ಗಂಧ, ಅಕ್ಷತೆ, ಪುಷ್ಪ, ಲವಂಗ, ಚರು, ದೀಪ, ಧೂಪ, ಫಲ, ಅರ್ಘ್ಯಗಳನ್ನು ಅರ್ಪಿಸಿ, 24 ತೀರ್ಥಕರರಿಗೆ, ಬಾಹುಬಲಿಗೆ, ಶ್ರುತ, ಗಣಧರ, ಪಾತಾಳ ಯಕ್ಷ, ಅನಂತಮತಿ ಯಕ್ಷಿಗೆ ಅಷ್ಟವಿಧಾರ್ಚನೆಯನ್ನು ಮಾಡಲಾಯಿತು. ಅನಂತಮತಿ ಯಕ್ಷಿಗೆ ಷೋಡಶೋಪಚಾರ ಪೂಜೆ ನಡೆಸಿದ ನಂತರ ಜಯಮಾಲಾರ್ಘ್ಯದೊಂದಿಗೆ ಮಹಾಮಂಗಳಾರತಿ ಮಾಡಲಾಯಿತು.

ಭಂಡಾರ ಬಸದಿಯ ಸುತ್ತಲಿನ ಅಷ್ಟ ದಿಕ್ಪಾಲಕರಿಗೆ ಪೂಜೆ ಸಲ್ಲಿಸಿದ ನಂತರ ಪ್ರತಿಷ್ಠಾಪಿಸಲ್ಪಟ್ಟ ಕಲಶವನ್ನು ವಿಸರ್ಜಿಸಿ 61 ದಂಪತಿಗಳು ಪರಸ್ಪರ ಬಾಗಿನವನ್ನು ಬದಲಾಯಿಸಿಕೊಂಡರು. ನೋಂಪಿ ವಿಧಾನ ನಡೆದ ನಂತರ ಶ್ರುತಕ್ಕೆ ಪೂಜೆ ಸಲ್ಲಿಸಿದ ವ್ರತಿಕರು ಮಂತ್ರ ಪಠಣದೊಂದಿಗೆ ಹಳೆ ದಾರವನ್ನು ತೆಗೆದು ನೂತನ ದಾರವನ್ನು ಧರಿಸಿಕೊಂಡರು. ಅನಂತ ನೋಂಪಿ ವಿಧಾನ ಕಥಾ ಶ್ರವಣ ನೆರವೇರಿತು.

ನೋಂಪಿಗೂ ಮೊದಲು ಹರಿಪೀಠದಲ್ಲಿ ವಿರಾಜಮಾನರಾದ 24 ತೀರ್ಥಂಕರರಿಗೆ ಕಲ್ಪಧ್ರುಮ ಅಭಿಷೇಕ ನೆರವೇರಿತು. ಕ್ಷೇತ್ರದಲ್ಲಿ ಚಾತುರ್ಮಾಸ್ಯ ಆಚರಿಸುತ್ತಿರುವ ಆಚಾರ್ಯ ಗುಲಾಬ್‌ ಭೂಷಣ್‌ ಮಹಾರಾಜರು, ಮತ್ತು ಸಂಘಸ್ಥ ತ್ಯಾಗಿಗಳು ಸಾನ್ನಿಧ್ಯ ವಹಿಸಿದ್ದರು.

ನೋಂಪಿ ವಿಧಾನದ ಪೂಜಾ ನೇತೃತ್ವವನ್ನು ಪ್ರತಿಷ್ಠಾಚಾರ್ಯರಾದ ಎಸ್‌.ಡಿ.ನಂದಕುಮಾರ್‌, ಪ್ರೇಮ್‌ಕುಮಾರ್‌ ವಹಿಸಿದ್ದರು. ಸಂಚಾಲಕರಾಗಿ ಜಿ.ಬಿ.ದೇವೇಂದ್ರಕುಮಾರ್‌, ಕಾರ್ಯದರ್ಶಿ ಎಸ್‌.ಬಿ.ಬಾನುಕುಮಾರ್‌, ಪ್ರಸನ್ನ ಕುಮಾರ್‌ ಪೂಜಾ ಕಾರ್ಯದ ಮೇಲ್ವಿಚಾರಣೆ ವಹಿಸಿದ್ದರು.

ವಿಶಾಲವಾದ ಬಸದಿಯಲ್ಲಿ ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಂಡು ಪೂಜೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.