ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಲೇಶಪುರ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಡಿ.ಸಿಗೆ ಮನವಿ

ಕಂದಾಯ– ಭೂ ಮಾಪನ ಇಲಾಖೆ ಅಧಿಕಾರಿಗಳ ವಿರುದ್ಧ ಆರೋಪ
Last Updated 6 ಜನವರಿ 2021, 5:13 IST
ಅಕ್ಷರ ಗಾತ್ರ

ಸಕಲೇಶಪುರ: ‘ತಾಲ್ಲೂಕಿನ ಕಂದಾಯ ಹಾಗೂ ಭೂಮಾಪನ ಕಚೇರಿಯಲ್ಲಿ ಕೆಲವು ಅಧಿಕಾರಿಗಳು ಹಾಗೂ ನೌಕರರು ಕಚೇರಿಯಲ್ಲಿಯೇ ಕುಳಿತು ಜಮೀನಿನ ನಕ್ಷೆ ಹಾಗೂ ದಾಖಲೆಗಳನ್ನು ತಿದ್ದಿ ಮಾಲೀಕರ ನಡುವೆ ವ್ಯಾಜ್ಯ ಸೃಷ್ಟಿಸಿ ಹಣ ವಸೂಲಿ ಮಾಡುತ್ತಿದ್ದಾರೆ’ ಎಂದು ರೈತರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ನೇರವಾಗಿ ಆರೋಪಿಸಿದ್ದಾರೆ.

‘ಹೆಗ್ಗದ್ದೆ ಗ್ರಾಮದ ಸರ್ವೇ ನಂ 340 ರಲ್ಲಿನ 3.30 ಎಕರೆ ಜಮೀನು ಮಲ್ಲೇಗೌಡ ಎಂಬುವವರ ಹೆಸರಿನಲ್ಲಿತ್ತು. ವ್ಯಕ್ತಿಯೊಬ್ಬ ನಕಲಿ ವಂಶವೃಕ್ಷ ಸೃಷ್ಟಿಸಿ ಈ ಜಮೀನನ್ನು ಅವರ ಹೆಸರಿಗೆ ನೋಂದಾಯಿಸಿಕೊಂಡಿದ್ದಾರೆ. ಇದಕ್ಕೆ ಅಂದಿನ ಹಾನುಬಾಳ್ ಕಂದಾಯ ನಿರೀಕ್ಷಕ ಈಶ್ವರ್ ಅವರೇ ಕಾರಣ. ವಂಶವೃಕ್ಷ ನಕಲಿ ಮಾಡಿಕೊಂಡು ಆಗಿರುವ ಖಾತೆಯನ್ನು, ಒಂದೂವರೆ ವರ್ಷದಿಂದ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ರದ್ದುಗೊಳಿಸುತ್ತಿಲ್ಲ’ ಎಂದು ಅಶೋಕ್ ಹೇಳಿದರು.

‘ಇದೇ ಸ.ನಂ.ನಲ್ಲಿ 24 ಎಕರೆ ಜಮೀನಿಗೆ ಕುಬೇರನಾಯ್ಕ ಎಂಬ ಸರ್ವೇಯರ್ ನಕಲಿ ನಕ್ಷೆ ತಯಾರಿಸಿ, ಪೋಡ್ ಮಾಡಿದ್ದಾರೆ. ನಿಯಮದ ಪ್ರಕಾರ ಮೂಲ ಖಾತೆದಾರರ ಹೆಸರಿಗೆ ಜಮೀನು ಪೋಡ್ ಮಾಡಿದ ನಂತರ ಪರಭಾರೆ ಆಗಬೇಕು. ಇದರ ವಿರುದ್ದ ಡಿಡಿಎಲ್‌ಆರ್ ಅವರಿಗೆ ದೂರು ನೀಡಿದ್ದು, ವಿಚಾರಣೆಯಲ್ಲಿ ಕುಬೇರ ನಾಯ್ಕ ತಪ್ಪಿತಸ್ಥ ಎಂದು ದೃಢಪಟ್ಟು ಒಂದು ವರ್ಷದ ಹಿಂದೆ ಸೇವೆಯಿಂದ ವಜಾ ಮಾಡಲಾಗಿತ್ತು. ಪುನಃ ಈ ಸರ್ವೇಯರನ್ನು ಸೇವೆಗೆ ಸೇರಿಸಿಕೊಳ್ಳಲಾಗಿದೆ. ನಿಯಮ ಬಾಹಿರವಾಗಿ ನಡೆದಿರುವ ಪೋಡ್ ಅನ್ನು ಇನ್ನೂ ರದ್ದುಪಡಿಸಿಲ್ಲ’ ಎಂದು ದೂರಿದರು.

ಪ್ರಕರಣ 2: ‘ಗೊದ್ದು ಗ್ರಾಮದ ಸರ್ವೇ ನಂ 108 ಪೋಡ್‌ಗೆ ಅರ್ಜಿ ಕೊಟ್ಟರೆ ಸರ್ವೇಯರ್ ಮನು ಅವರು ಜಮೀನು ನಿಮ್ಮದಲ್ಲ ಎಂದು ಹೇಳುತ್ತಿದ್ದಾರೆ. ನಮ್ಮ ಜಮೀನಿನಲ್ಲಿ ನಮಗೆ ತಿಳಿಯದಂತೆ ಮರ ಕಡಿಯಲು ಅಗತ್ಯವಿರುವ ಎಲ್ಲ ನಕಲಿ ದಾಖಲೆಗಳನ್ನು ಮತ್ತೊಬ್ಬರಿಗೆ ಸಿದ್ಧಪಡಿಸಿಕೊಟ್ಟಿದ್ದಾರೆ. ಪಾವರ್ ಆಫ್ ಅಟಾರ್ನಿ ಕೂಡಾ ನಕಲಿ ಮಾಡಿದ್ದಾರೆ. ಈ ಸರ್ವೇಯರ್ ತಪ್ಪು ಮಾಡಿದ್ದಾರೆ ಎಂದು ಮೇಲಧಿಕಾರಿಗೆ ವರದಿ ನೀಡಿದ್ದರೂ ಸರ್ವೆಯರ್ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ’ ಎಂದು ಗೊದ್ದು ಗ್ರಾಮದ ಸುಮಿತ್ರಾ ಆರೋಪಿಸಿದರು.

ಪ್ರಕರಣ 3: ‘ಹಸಿಡೆ ಗ್ರಾಮದ ಸ.ನಂ. 51 ಜಮೀನನ್ನು ಸರ್ವೇಯರ್ ಮೋಹನ್ ಅವರು ಮೂರನೇ ವ್ಯಕ್ತಿಗೆ ಪೋಡ್ ಮಾಡಿ 11ಇ ಸ್ಕೆಚ್ ಮಾಡಿದ್ದಾರೆ. ಮೂಲ ಮಂಜೂರುದಾರರಿಗೆ ಪೋಡ್ ಮಾಡದೆ ಮೂರನೇ ವ್ಯಕ್ತಿಯ ಹೆಸರಿಗೆ ಪೋಡ್ ಮಾಡಿರುವ ಕುರಿತು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜವಾಗಿಲ್ಲ. ಸರ್ವೇಯರ್ ಮಾಡಿದ ತಪ್ಪಿಗೆ ದೂರು ಕೊಟ್ಟು ದೊಡ್ಡಬಳ್ಳಾಪುರಕ್ಕೆ ಹೋಗಬೇಕಾಗಿದೆ. ಲೋಕಾಯುಕ್ತ ತನಿಖೆಯಲ್ಲಿ ಸರ್ವೇಯರ್ ತಪ್ಪಿತಸ್ಥ ಎಂಬುದು ದೃಢಪಟ್ಟಿದೆ. ಆದರೆ, ತಪ್ಪು ಮಾಡಿದವರಿಗೆ ಶಿಕ್ಷೆಯೇ ಇಲ್ಲ. ನಮ್ಮಂತವರ ಮನೆ ಹಾಳು ಮಾಡುತ್ತಿದ್ದಾರೆ’ ಎಂದು ಹಸಿಡೆ ಗ್ರಾಮದ ಮಂಜುನಾಥ್ ಆರೋಪಿಸಿದರು.

‘ಜಿಲ್ಲಾಧಿಕಾರಿಗಳು ಈ ಆರೋಪಗಳನ್ನು ಗಂಭೀರವಾಗಿ ತೆಗೆದುಕೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT