ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

152 ಅರ್ಜಿ; ಕೆಲವು ಸ್ಥಳದಲ್ಲೇ ಪರಿಹಾರ

‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’: ಶಾಸಕ ಶಿವಲಿಂಗೇಗೌಡ ಗ್ರಾಮ ವಾಸ್ತವ್ಯ, ಜನರ ಸಮಸ್ಯೆ ಆಲಿಕೆ
Last Updated 18 ಅಕ್ಟೋಬರ್ 2021, 7:13 IST
ಅಕ್ಷರ ಗಾತ್ರ

ಅರಸೀಕೆರೆ: ಶುದ್ಧ ಕುಡಿಯುವ ನೀರಿನ ಘಟಕ, ನ್ಯಾಯಬೆಲೆ ಅಂಗಡಿ ತೆರೆಯುವುದು, ಪಹಣಿ, ಖಾತೆ ಬದಲಾವಣೆ, ದುಬಾರಿ ವಿದ್ಯುತ್ ಬಿಲ್, ಬೇಚಾರಕ್ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ ಹೀಗೆ ಸಮಸ್ಯೆಗಳ ಕುರಿತು ಒಟ್ಟು 152 ಅಹವಾಲುಗಳು ಸಲ್ಲಿಕೆಯಾದವು. ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಂಡು ಕೊಳ್ಳಲಾಯಿತು.

ತಾಲ್ಲೂಕಿನ ಕಾಚೀಘಟ್ಟ– ಮೇಗಳಹಟ್ಟಿಭೋವಿ ಕಾಲೊನಿ ಗ್ರಾಮದಲ್ಲಿ ತಾಲ್ಲೂಕು ಆಡಳಿತ ಶನಿವಾರ ರಾತ್ರಿ ಆಯೋಜಿಸಿದ್ದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಕೆ.ಎಂ. ಶಿವಲಿಂಗೇಗೌಡ, ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ, ‘ಗ್ರಾಮೀಣ ಭಾಗದ ಜನರು ಪ್ರತಿಯೊಂದು ಸಮಸ್ಯೆಗಳಿಗೆ ನಗರದ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಇಡೀ ಆಡಳಿತ ವ್ಯವಸ್ಥೆಯೇ ಹಳ್ಳಿಗೆ ಬಂದಿದೆ. ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರಿ ಅಧಿಕಾರಿಗಳು ಸಿದ್ಧರಿದ್ದಾರೆ’ ಎಂದರು.

‘ಇಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ನ್ಯಾಯಬೆಲೆ ಅಂಗಡಿ ಇಲ್ಲ. ಗ್ರಾಮದಲ್ಲಿ ವೃದ್ಧರು ಹಾಗೂ ಅನಾರೋಗ್ಯ ಪೀಡಿತರಿದ್ದಾರೆ. ಹಾಗಾಗಿ ನಮ್ಮ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ನ್ಯಾಯಬೆಲೆ ಅಂಗಡಿ ತೆರೆಯಬೇಕು’ ಎಂದು ಗ್ರಾಮಸ್ಥರು ಮನವಿ ಸಲ್ಲಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ, ‘ಸದ್ಯದಲ್ಲೇ ನಿಮ್ಮ ಗ್ರಾಮದ ಪ್ರತಿ ಮನೆಗೂ ಕುಡಿಯುವ ನೀರಿನ ನಲ್ಲಿಗಳನ್ನು ಅಳವಡಿಸಲಾಗುವುದು. ಗ್ರಾಮದಲ್ಲಿ ಯಾವುದಾದರೂ ಮನೆ ಬಾಡಿಗೆಗೆ ಪಡೆದು ಗ್ರಾಮದಲ್ಲಿ ಒಂದು ನ್ಯಾಯಬೆಲೆ ಅಂಗಡಿ ತೆರೆದು ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡುವಂತೆ’ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗೆ ಸೂಚಿಸಿದರು.

ತಹಶೀಲ್ದಾರ್ ಸಂತೋಷ್ ಕುಮಾರ್ ಮಾತನಾಡಿ, ‘ಇ–ಸ್ವತ್ತು ಎಲ್ಲರಿಗೂ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ. ಕಾಚೀಘಟ್ಟ ಮೇಗಳಹಟ್ಟಿ ಬೋವಿ ಕಾಲೊನಿ ಹಾಗೂ ಕೆಳಗಳ ಹಟ್ಟಿ ಗ್ರಾಮಗಳು ಇಲ್ಲಿಯವರೆಗೂ ಕೇವಲ ದಾಖಲೆ ಗ್ರಾಮಗಳಾಗಿದ್ದವು. ಈಗ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲಾಗಿದೆ. ಈ ಎರಡೂ ಗ್ರಾಮಸ್ಥರ ಕೋರಿಕೆ ಮೇರೆಗೆ ಮೇಗಳಹಟ್ಟಿ ಗ್ರಾಮಕ್ಕೆ ‘ಪಾರ್ವತಿಪುರ’ ಹಾಗೂ ಕೆಳಗಳಹಟ್ಟಿ ಗ್ರಾಮಕ್ಕೆ ‘ಕೃಷ್ಣಾಪುರ’ ಎಂದು ನಾಮಕರಣ ಮಾಡಲಾಗಿದೆ ಎಂದರು.

ವೃದ್ಧಾಪ್ಯ ವೇತನದ ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರ ವಿತರಿಸಲಾಯಿತು. ಕಾಚೀಘಟ್ಟ ಮೇಗಳಹಟ್ಟಿ ಭೋವಿ ಕಾಲೊನಿಯಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡ ಹಾಗೂ ತಹಶೀಲ್ದಾರ್ ಸಂತೋಷ್ ಕುಮಾರ್ ವಾಸ್ತವ್ಯ ಹೂಡಿದರು.

ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿ ನಟರಾಜ್, ಎಪಿಎಂಸಿ ಅಧ್ಯಕ್ಷ ನಾಗರಾಜ ನಾಯ್ಕ್, ಉಪಾಧ್ಯಕ್ಷ ಕುಮಾರ್, ಕಾಚೀಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಮ್ಮ, ಉಪಾಧ್ಯಕ್ಷೆ ಆಶಾ, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT