ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಕೇಂದ್ರದಲ್ಲಿ 2 ಸಾವಿರ ಬೆಡ್‌ ವ್ಯವಸ್ಥೆ ಮಾಡಿ: ರೇವಣ್ಣ

ಕೊರೊನಾ ನಿಯಂತ್ರಣಕ್ಕೆ ಪ್ರತಿ ತಾಲ್ಲೂಕಿಗೆ ₹ 2 ಕೋಟಿ ನೀಡಿ: ರೇವಣ್ಣ
Last Updated 30 ಏಪ್ರಿಲ್ 2021, 13:33 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಕೂಡಲೇ ಪ್ರತಿ ತಾಲ್ಲೂಕಿನಲ್ಲಿ 1000 ಬೆಡ್ ವ್ಯವಸ್ಥೆ ಮಾಡಬೇಕು ಎಂದು ಶಾಸಕ ಎಚ್.ಡಿ.ರೇವಣ್ಣ ಆಗ್ರಹಿಸಿದರು.

ಸೋಂಕಿತರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಯಲ್ಲಿ ಬೆಡ್ ಕೊರತೆ ಇದೆ. ಸರಿಯಾದ ರೀತಿಯಲ್ಲಿ ಪರೀಕ್ಷೆ ನಡೆಸಿದರೆ ನಿತ್ಯ ಐದು ಸಾವಿರ ಪ್ರಕರಣಗಳು ವರದಿಯಾಗುತ್ತವೆ. ಸದ್ಯ ಸಕ್ರಿಯ ಪ್ರಕರಣಗಳು ಆರು ಸಾವಿರ ಇದೆ.ಜಿಲ್ಲಾಸ್ಪತ್ರೆಯಲ್ಲಿ ಸೋಂಕಿತರ ಚಿಕಿತ್ಸೆಗೆ 400 ಬೆಡ್‌ ಇದೆ. ಮುಂದೆ ಸಮಸ್ಯೆಯಾಗದಂತೆ ಜಿಲ್ಲಾಕೇಂದ್ರದಲ್ಲಿ 2 ಸಾವಿರ ಹಾಗೂ ತಾಲ್ಲೂಕು ಕೇಂದ್ರದಲ್ಲಿ 1 ಸಾವಿರ ಬೆಡ್ ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ಸರ್ಕಾರಿ ಹಾಸ್ಟೆಲ್‌ ಮತ್ತು ಕಲ್ಯಾಣ ಮಂಟಪ ಬಳಸಿಕೊಳ್ಳುವಂತೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸಲಹೆ ನೀಡಿದರು.

ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸಂಪೂರ್ಣ ಅಧಿಕಾರ ನೀಡಬೇಕು. ಕೊರೊನಾ ನಿಯಂತ್ರಣಕ್ಕೆ ಪ್ರತಿ ತಾಲ್ಲೂಕಿಗೆ ₹ 2 ಕೋಟಿ ಹಣ, ಆಸ್ಪತ್ರೆ ಹಾಗೂಸೂಕ್ತ ಆರೋಗ್ಯ ವ್ಯವಸ್ಥೆ ಮಾಡಬೇಕು. ತಾಲ್ಲೂಕಿನಲ್ಲಿ ಬೆಡ್ ಹಾಕಲು ಈಗಿರುವ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿಗಳ ಹಾಸ್ಟೆಲ್ ಹಾಗೂ ಮೊರಾರ್ಜಿ ವಸತಿ ನಿಲಯಗಳನ್ನು ಬಳಸಿಕೊಳ್ಳಬೇಕು ಎಂದರು.

ಕೋವಿಡ್‌ ಸೋಂಕಿತರಿಗೆ ನೀಡುವ ರೆಮ್‌ಡಿಸಿವಿರ್‌ ಚುಚ್ಚುಮದ್ದು ಕೊರತೆ ಇದೆ. ಬಿಜೆಪಿಗೆ ಮತ ಹಾಕಿಲ್ಲವೆಂಬ ಕಾರಣಕ್ಕೆ ಈ ರೀತಿ ತಾರತಮ್ಯ ಮಾಡಬಾರದು. ಸರ್ಕಾರ ಲಸಿಕೆ ಪೂರೈಕೆ ಮಾಡದೆ ಸ್ಮಶಾನಕ್ಕೆ ಜಾಗ ಮಾಡಲು ಹೊರಟಿದೆ. ಜನರ ಜೀವಕ್ಕೆ ಬೆಲೆ ಇಲ್ಲವಾಗಿದೆ. ರಾಷ್ಟ್ರೀಯ ಪಕ್ಷಗಳಿಗೆ ಚುನಾವಣೆಯೇ ಮುಖ್ಯವಾಗಿತ್ತು. ಪಶ್ಚಿಮ ಬಂಗಾಳ ದಲ್ಲಿ 8 ಹಂತದ ಮತದಾನವಾಗಿದೆ. ಕೊರೊನಾ ಹಾವಳಿ ವೇಳೆ ಚುನಾವಣೆ ಅಗತ್ಯವಿತ್ತೇ ಎಂದು ಪ್ರಶ್ನಿಸಿದರು.

ರಾಜ್ಯದ 25 ಬಿಜೆಪಿ ಸಂಸದರಿಗೆ ಮಾನ, ಮರ್ಯಾದೆ ಇಲ್ಲ. ಯಾರೊಬ್ಬರೂ ಹೊರ ಬಂದು ಸಂಕಷ್ಟದಲ್ಲಿರುವ ಜನರ ನೆರವಿಗೆ ಬರುತ್ತಿಲ್ಲ. ಅಧಿಕಾರಿಗಳಿಗೆ ಕರೆ ಮಾಡಿದರೆ ಅವರು ಸ್ವೀಕರಿಸುತ್ತಿಲ್ಲ. ಯಾರಿಗೆ ಸಮಸ್ಯೆ ಹೇಳಬೇಕು ಎಂದರು.

ಎಚ್.ಡಿ. ಕುಮಾರಸ್ವಾಮಿ ಸಿ.ಎಂ ಆಗಿದ್ದಾಗ 750 ಹಾಸಿಗೆ ಸಾಮರ್ಥ್ಯದ ಜಿಲ್ಲಾಸ್ಪತ್ರೆ ನಿರ್ಮಿಸಿದರು. ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹೆಚ್ಚುವರಿಯಾಗಿ ₹250 ಕೋಟಿ ಅನುದಾನ ನೀಡಿದರು. ಕಾಂಗ್ರೆಸ್‌ ಆಡಳಿತದಲ್ಲಿ ಅನುದಾನ ನೀಡಲಿಲ್ಲ. ನಾವು ಕಟ್ಟಿದ ಕಟ್ಟಡವನ್ನು ಉದ್ಘಾಟಿಸಿದರು ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT