ಮಂಗಳವಾರ, ನವೆಂಬರ್ 24, 2020
19 °C
₹1.5 ಲಕ್ಷ ಮೌಲ್ಯದ ಐದು ದ್ವಿಚಕ್ರ ವಾಹನ ವಶ

ಮೂವರು ಬೈಕ್‌ ಕಳ್ಳರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ನಿರ್ಜನ ಪ್ರದೇಶದಲ್ಲಿ ನಿಲ್ಲಿಸುತ್ತಿದ್ದ ಬೈಕ್‍ಗಳನ್ನು ಕಳ್ಳತನ ಮಾಡಿ ನಂಬರ್ ಪ್ಲೇಟ್ ಬದಲಿಸಿ ಮಾರಾಟ ಮಾಡಲು ಯತ್ನಿಸಿದ್ದ ಮೂವರು ಆರೋಪಿಗಳನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೇಕರಿ ಕೆಲಸ ಮಾಡಿಕೊಂಡಿದ್ದ ಹಾಸನ ತಾಲ್ಲೂಕಿನ ಛತ್ರನಹಳ್ಳಿ ಗ್ರಾಮದ ಮೋಹನಕಮಾರ (25), ಮಹೇಶ್ (23) ಹಾಗೂ ಹಂಚಿಹಳ್ಳಿಯ ಮಂಜುನಾಥ್ (27) ನನ್ನು ಬಂಧಿಸಿ, ₹1.50 ಲಕ್ಷ ಮೌಲ್ಯದ ಐದು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಶ್ರೀನಿವಾಸ್‌ ಗೌಡ ತಿಳಿಸಿದರು.

ಅ. 22 ರಂದು ಹಾಸನ-ಬೇಲೂರು ರಸ್ತೆಯ ಕುಪ್ಪಳಿ ಬಳಿ ವಾಹನಗಳ ತಪಾಸಣೆ ನಡೆಸುತ್ತಿದ್ದಾಗ ಬೈಕ್‍ನಲ್ಲಿ ಬಂದ ಮೋಹನ ಕುಮಾರ್‌ನನ್ನು ತಡೆದು ವಿಚಾರಿಸಿದಾಗ ಕಳವು ಸಂಗತಿ ಬೆಳಕಿಗೆ ಬಂದಿದೆ. ಬೈಕ್‍ನ ಯಾವುದೇ ದಾಖಲೆ ಇರಲಿಲ್ಲ. ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಲು ತಡವರಿಸುತ್ತಿದ್ದ. ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ, ಒಂದೂವರೆ ವರ್ಷದಿಂದ ಬೈಕ್ ಕಳ್ಳತನ ದಂಧೆಯಲ್ಲಿ ತೊಡಗಿರುವುದು ಗೊತ್ತಾಯಿತು ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ಮನೆ ಮುಂದೆ ಅಥವಾ ತೋಟದ ರಸ್ತೆಯಲ್ಲಿ ನಿಲ್ಲಿಸಿದ ಬೈಕ್‍ಗಳನ್ನು ನಕಲಿ ಕೀ ಬಳಸಿ ಕಳ್ಳತನ ಮಾಡುತ್ತಿದ್ದರು. ನಂತರ ಅದರ ನಂಬರ್ ಪ್ಲೇಟ್ ಬದಲಿಸಿ ಮಾರಾಟ ಮಾಡುತ್ತಿದ್ದರು. ಆದರೆ ಇದುವರೆಗೆ ಒಂದೂ ಬೈಕ್ ಮಾರಾಟ ಮಾಡಿಲ್ಲವೆಂದು ಆರೋಪಿಗಳು ಹೇಳಿದ್ದಾರೆ. ಈ ಕುರಿತು ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದರು.

ಹಾಸನ ಜಿಲ್ಲೆಯ ಗೊರೂರು, ಬೇಲೂರು, ಹೊಳೆನರಸೀಪುರ, ಆಲೂರು ಹಾಗೂ ಚಿಕ್ಕಮಗಳೂರು ಜಿಲ್ಲೆ ಕಡೂರು ಠಾಣೆ
ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ನಡೆಸಿದ್ದಾರೆ. ಬಂಧಿತರು ಮೊದಲ ಬಾರಿಗೆ ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿದ್ದು, ಈ ಮೊದಲು ಯಾವುದೇ ಪ್ರಕರಣ ದಾಖಲಾಗಿಲ್ಲ. ನಿರ್ಜನ ಪ್ರದೇಶದಲ್ಲಿ ನಕಲಿ ಕೀ ಬಳಸಿ ವಾಹನ ಕಳವು ಮಾಡುತ್ತಿದ್ದರು. ಅದನ್ನು ಗ್ರಾಮಾಂತರ ಪ್ರದೇಶದಲ್ಲಿ ಮಾರಾಟಕ್ಕೆ ಯತ್ನಿಸಿದ್ದಾರೆ. ಕೆಲವರು ದಾಖಲೆಗಳು ಸರಿಯಾಗಿ ಇಲ್ಲದ ಕಾರಣ ಖರೀದಿಸಲು ನಿರಾಕರಿಸಿರುವ ಉದಾಹರಣೆ ಇದೆ. ಹಾಗಾಗಿ ವಾಹನಗಳನ್ನು ಛತ್ರನಹಳ್ಳಿಯಲ್ಲಿ ಇರಿಸಿಕೊಂಡಿದ್ದರು. ಕೆಲ ಪ್ರಕರಣಗಳಲ್ಲಿ ಬೈಕ್‌ನ ಬಿಡಿ ಭಾಗಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿವರಿಸಿದರು.

ಮೂವರ ಜತೆ ಇತರರು ಶಾಮೀಲಾಗಿದ್ದಾರೆಯೇ? ಎಷ್ಟು ಬೈಕ್‌ಗಳನ್ನು ಕಳವು ಮಾಡಲಾಗಿದೆ ಎಂಬುದರ ಕುರಿತು ತನಿಖೆ ಮುಂದುವರೆದಿದೆ. ಕಳವು ವಾಹನಗಳನ್ನು ಯಾರು ಖರೀದಿಸಬಾರದು. ಆರೋಪಿಗಳು ಸಿಕ್ಕಿ ಬಿದ್ದಾಗ ಕಳವು ಮಾಲು ವಶಪಡಿಸಿಕೊಳ್ಳಲಾಗುತ್ತದೆ. ಇದರಿಂದ ಹಣ ಕಳೆದುಕೊಳ್ಳಬೇಕಾಗುತ್ತದೆ. ಜತೆಗೆ ಪ್ರಕರಣವನ್ನು ದಾಖಲಿಸಲಾಗುವುದು ಎಂದು ಎಸ್ಪಿ ಎಚ್ಚರಿಕೆ ನೀಡಿದರು.

ಆರೋಪಿ ಪತ್ತೆ ಕಾರ್ಯದಲ್ಲಿ ಗ್ರಾಮಾಂತರ ಸಿಪಿಐ ಪಿ. ಸುರೇಶ್, ಪಿಎಸ್‍ಐ ಬಸವರಾಜು, ಎಎಸ್‍ಐ ರಂಗಪ್ಪ, ಸಿಬ್ಬಂದಿ
ಕಾಂತರಾಜಪ್ಪ, ದೇವರಾಜೇಗೌಡ, ಉಮಾಶಂಕರ, ದಿವಾಕರ, ಶಿವಣ್ಣ, ಸಂತೋಷ್ ಶ್ರಮಿಸಿದ್ದಾರೆ.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎನ್. ನಂದಿನಿ, ಡಿವೈಎಸ್ಪಿ ಪುಟ್ಟಸ್ವಾಮಿಗೌಡ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು