ಶನಿವಾರ, ಜುಲೈ 2, 2022
24 °C

ಬೇಲೂರು: ಗುಂಡೇಟಿನಿಂದ ಕಾಡಾನೆ ಸಾವು, ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೇಲೂರು: ತಾಲ್ಲೂಕಿನ ಅರೇಹಳ್ಳಿ ಹೋಬಳಿಯ ಮಲಸಾವರ ಗ್ರಾಮದ ದಾಸನಗುಡ್ಡದ ಮೊಹಮ್ಮದ್‌ ಸತ್ತರ್‌ ಎಂಬುವವರ ಭತ್ತದ ಗದ್ದೆಯಲ್ಲಿ ಸುಮಾರು 20 ವರ್ಷದ ಒಂಟಿ ಸಲಗವೊಂದು ಗುರುವಾರ ಗುಂಡೇಟಿನಿಂದ ಮೃತಪಟ್ಟಿದೆ.

ಆನೆ ಕಿವಿಯ ಹಿಂಭಾಗದಲ್ಲಿ ರಕ್ತ ಒಸರುತ್ತಿದ್ದು, ಗುಂಡಿನ ದಾಳಿಯಿಂದ ಮೃತಪಟ್ಟಿರುವಂತೆ ಮೇಲ್ನೋಟಕ್ಕೆ ಕಂಡುಬಂದಿದೆ. ಅದು ಅನುಮಾನಾಸ್ಪದವಾಗಿ ಮೃತಪಟ್ಟ ನಾಲ್ಕನೇ ಆನೆ.

‘ಕಡೆಗರ್ಜೆಯಲ್ಲಿ ದಾಳಿ ನಡೆಸಿದ್ದ ಆನೆಗೂ, ಮೃತಪಟ್ಟಿರುವ ಆನೆಗೂ ಸಾಮ್ಯತೆಯಿಲ್ಲ. ಮರಣೋತ್ತರ ಪರೀಕ್ಷೆಯ ನಂತರ ನಿಖರ ಕಾರಣ ತಿಳಿಯಲಿದೆ. ಪರೀಕ್ಷೆ ಬಳಿಕ ಇದೇ ಜಾಗದಲ್ಲಿ ಸುಡಲಾಗುವುದು. ತಪಿಸ್ಥತರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಎಸಿಎಫ್ ಪ್ರಭು ತಿಳಿಸಿದರು.

‘ಸಕಲೇಶಪುರ ಬಿಸ್ಲೆಘಾಟ್ ಬಳಿ ಎರಡು ಆನೆಗಳನ್ನು ಇದೇ ರೀತಿ ಗುಂಡೇಟಿನಿಂದ ಕೊಂದಿದ್ದರು. ಸುಂಡೇಕೆರೆ ಬಳಿಯೂ ಆನೆಯನ್ನು ಕೊಲ್ಲಲಾಗಿತ್ತು. ಆಗಲೇ ಕ್ರಮ ಕೈಗೊಂಡಿದ್ದರೆ ಪ್ರಕರಣ ಮರುಕಳಿಸುತ್ತಿರಲಿಲ್ಲ. ಆನೆಗಳನ್ನು ಹೀಗೇ ಕೊಲ್ಲುತ್ತಿದ್ದರೆ ಡಿಎಫ್ ಕಚೇರಿ ಬಳಿ ಪ್ರತಿಭಟನೆ ನಡೆಸಲಾಗುವುದು’ ಎಂದು ಪರಿಸರವಾದಿ ವಿಕ್ರಮಗೌಡ ಆಕ್ರೋಶ ಹೊರಹಾಕಿದರು.

ಐವರು ವಶಕ್ಕೆ: ಬೇಲೂರು ವಲಯದ ಗುರಿಗೆಹಳ್ಳಿ ಸಮೀಪದ ಭತ್ತದ ಗದ್ದೆಯಲ್ಲಿ ದೊರೆತ ಆನೆಯ ಶವದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಂಡೇಟಿನಿಂದ ಮೃತ ಪಟ್ಟಿರುವುದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿರುತ್ತದೆ.

ಐದು ಜನರನ್ನು ವಶಕ್ಕೆ ಪಡೆಯಲಾಗಿದ್ದು, ಬಂದೂಕು ಹಾಗೂ ಗುಂಡುಗಳನ್ನು ಜಪ್ತಿ ಮಾಡಲಾಗಿದೆ. ಮುಂದುವರಿದ ತನಿಖೆ ಪ್ರಗತಿಯಲ್ಲಿರುತ್ತದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು