ಭಾನುವಾರ, ಜನವರಿ 17, 2021
17 °C
2018ರಲ್ಲಿ ಬೇಲೂರಿನಲ್ಲಿ ಉದ್ಘಾಟನೆಗೊಂಡಿದ್ದ ದೇವಸ್ಥಾನ, ದೇವರ ದರ್ಶನ ಪಡೆದ ಭಕ್ತರು

ಅಯ್ಯಪ್ಪ ದೇಗುಲಕ್ಕೆ ಮಾಲಾಧಾರಿಗಳ ದಂಡು

ಮಲ್ಲೇಶ Updated:

ಅಕ್ಷರ ಗಾತ್ರ : | |

Prajavani

ಬೇಲೂರು: ಇಲ್ಲಿನ ಅಯ್ಯಪ್ಪ ದೇವಸ್ಥಾನಕ್ಕೆ ಅಯ್ಯಪ್ಪ ಮಾಲಾಧಾರಿಗಳ ದಂಡು ಹರಿದು ಬರುತ್ತಿದೆ.

ಪ್ರತಿವರ್ಷ ಡಿಸೆಂಬರ್, ಜನವರಿ ತಿಂಗಳಿನಲ್ಲಿ ಎಲ್ಲಿ ನೋಡಿದರೂ ಕಪ್ಪು, ನೀಲಿ, ಕೇಸರಿ ಪಂಚೆ ಹಾಕಿ ತಿರುಗುತ್ತಿದ್ದ ಅಯ್ಯಪ್ಪ ಮಾಲಾಧಾರಿಗಳನ್ನು ಕಾಣುತ್ತಿದ್ದೆವು. ಈ ವರ್ಷ ಬೆರಳೆಣಿಕೆಯಷ್ಟು ಅಯ್ಯಪ್ಪ ಮಾಲಾಧಾರಿಗಳು ಕಾಣಿಸುತ್ತಿದ್ದಾರೆ.

ಕೇರಳದ ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನಕ್ಕೆ ಕೋವಿಡ್ ಕಾರಣದಿಂದ ಕಟ್ಟುನಿಟ್ಟಿನ ನಿಯಮ ವಿಧಿಸಿರುವುದರಿಂದ ಬೇಲೂರಿನ ಅಯ್ಯಪ್ಪ ದೇಗುಲಕ್ಕೆ ಮಾಲಾಧಾರಿಗಳು ಇರುಮುಡಿಯೊಂದಿಗೆ ಧಾವಿಸಿ 18 ಮೆಟ್ಟಿಲುಗಳನ್ನು ಹತ್ತಿ ಅಯ್ಯಪ್ಪನ ದರ್ಶನ ಪಡೆಯುತ್ತಿದ್ದಾರೆ.

ಬೇಲೂರು ತಾಲ್ಲೂಕಿನಿಂದ ಪ್ರತಿವರ್ಷ ಸುಮಾರು 5,000 ಮಾಲಾಧಾರಿಗಳು ಶಬರಿಮಲೆಗೆ ತೆರಳುತ್ತಿದ್ದರು. ಆದರೆ, ಈ ಭಾರಿ 300 ಮಾಲಾಧಾರಿಗಳು ಮಾತ್ರ ಶಬರಿಮಲೆಗೆ ಹೋಗಿಬಂದಿದ್ದಾರೆ. 1,000 ಮಾಲಾಧಾರಿಗಳು ಮಾಲೆ ಧರಿಸಿ ವ್ರತ ಮಾಡಿ ಇರುಮುಡಿಯೊಂದಿಗೆ 18 ಮಟ್ಟಿಲುಗಳನ್ನು ಬೇಲೂರಿನ ದೇಗುಲದಲ್ಲೇ ಹತ್ತಿದ್ದಾರೆ. 2020ರ ನವೆಂಬರ್‌ನಿಂದ 2021ರ ಜ.12ರವರೆಗೆ ಹೊರ ಜಿಲ್ಲೆಯ ಸುಮಾರು 2,000 ಮಾಲಾಧಾರಿಗಳು ಬೇಲೂರಿನ ಅಯ್ಯಪ್ಪನ ದರ್ಶನ ಪಡೆದಿದ್ದಾರೆ.

2018ರಲ್ಲಿ ಉದ್ಘಾಟನೆಯಾದ ಬೇಲೂರಿನ ಅಯ್ಯಪ್ಪ ದೇಗುಲವನ್ನು ಶಬರಿಮಲೆಯ ದೇಗುಲದ ರೀತಿಯಲ್ಲೇ ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ.

ಕೋವಿಡ್ ಕಾರಣದಿಂದ ಶಬರಿಮಲೆಗೆ ತೆರಳಲು ಸಾಧ್ಯವಾಗದೆ ಬೆಂಗಳೂರು, ಕೋಲಾರ, ಕಡೂರು, ಚಿಕ್ಕಮಗಳೂರು, ತುಮಕೂರು, ಸವದತ್ತಿ, ಜಮಖಂಡಿಯ ಸುಮಾರು 2,000 ಮಾಲಾಧಾರಿಗಳು ಈ ವರ್ಷ ಬೇಲೂರಿನ ಅಯ್ಯಪ್ಪ ದೇಗುಲಕ್ಕೆ ಬಂದು ದರ್ಶನ ಮಾಡಿದ್ದಾರೆ ಎಂದು ದೇಗುಲದ ಕಾರ್ಯದರ್ಶಿ ಯಮಸಂಧಿ ಪಾಪಣ್ಣ ತಿಳಿಸಿದರು.

ಭಕ್ತಾದಿಗಳಿಗೆ ದಾಸೋಹ, ವಸತಿ, ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ಸಂಕ್ರಾಂತಿ ದಿನ ದೇಗುಲದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿದೆ ಎಂದರು.

***

ಭಕ್ತರ ಅನುಕೂಲಕ್ಕಾಗಿ ಪ್ರತಿನಿತ್ಯ ಅಯ್ಯಪ್ಪನಿಗೆ ತುಪ್ಪದ ಅಭಿಷೇಕ ಮಾಡಲಾಗುತ್ತಿದೆ. ಭಕ್ತರು ಕೋವಿಡ್‌ ಮಾರ್ಗಸೂಚಿ ಪಾಲಿಸಬೇಕು.

-ವೈ.ಎನ್.ಕೃಷ್ಣೇಗೌಡ, ದೇಗುಲ ಟ್ರಸ್ಟ್ ಅಧ್ಯಕ್ಷ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು