ಮಂಗಳವಾರ, ಅಕ್ಟೋಬರ್ 26, 2021
23 °C
ಶಿಬಿರದಲ್ಲಿ 103 ಯೂನಿಟ್ ರಕ್ತ ಸಂಗ್ರಹ

ಹಾಸನ: ‘ರಕ್ತದಾನ; ಮೂಢನಂಬಿಕೆ ಹೋಗಲಾಡಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಯುವ ಜನತೆ ಪ್ರತಿ ವರ್ಷ ಸ್ವಯಂ ಪ್ರೇರಿತ ರಕ್ತದಾನ ಮಾಡಿ ರಕ್ತದ ಕೊರತೆ ನೀಗಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್ವರ್‌ ಹೇಳಿದರು.

ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಅಂಗವಾಗಿ ನಗರದ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ ಸೇರಿದಂತೆ ವಿವಿಧ ಸಂಘ ಸಂಸ್ಥೆ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ರಕ್ತಕ್ಕೆ ವರ್ಷವಿಡೀ ಬೇಡಿಕೆ ಇರುತ್ತದೆ. ಅಪಘಾತ, ತುರ್ತು ಚಿಕಿತ್ಸೆ ಸಂದರ್ಭಗಳಿಗೆ ಅವಶ್ಯಕತೆ ಇದೆ. ರಕ್ತದಾನ ಜೀವ ಹೋಗುವ ಸ್ಥಿತಿಯಲ್ಲಿರುವ ರೋಗಿಯನ್ನು ಹೆಚ್ಚು ಕಾಲ ಬದುಕಲು ನೆರವಾಗುತ್ತದೆ ಎಂದು ತಿಳಿಸಿದರು.

ರೆಡ್ ಕ್ರಾಸ್ ಜಿಲ್ಲಾ ಘಟಕದ ಸಭಾಪತಿ ಎಚ್.ಪಿ. ಮೋಹನ್ ಮಾತನಾಡಿ, ರಕ್ತದಾನ ಮಾಡುವುದರಿಂದ ಕೆಲವು ಸಮಸ್ಯೆಗಳು ಬರುತ್ತವೆ ಎಂಬ ಮೂಢ ನಂಬಿಕದೆ ಇದೆ. ರಕ್ತದಾನ ಮಾಡುವುದರಿಂದ ಆರೋಗ್ಯ ವೃದ್ಧಿಸುತ್ತದೆಯೇ ಹೊರತು ಆರೋಗ್ಯ ಕೆಡುವುದಿಲ್ಲ. ಜಿಲ್ಲೆಗೆ ಮಾಸಿಕ 1,800 ರಿಂದ 1,900 ಬಾಟಲ್‌ ರಕ್ತದ ಅವಶ್ಯಕತೆ ಇದೆ. ಆದರೆ 1,200 ಬಾಟಲ್ ರಕ್ತ ಸಂಗ್ರಹವಾಗುತ್ತಿದೆ. ಜನರಲ್ಲಿ ರಕ್ತದಾನ ಕುರಿತ ಮೂಢನಂಬಿಕೆಗಳನ್ನು ಹೋಗಲಾಡಿಸಬೇಕು ಎಂದು ನುಡಿದರು.

ಅಂಕಿ ಅಂಶದ ಪ್ರಕಾರದ ದೇಶದಲ್ಲಿ ಪ್ರತಿ ಮೂರು ನಿಮಿಷಕ್ಕೊಬ್ಬರಿಗೆ ರಕ್ತದ ಅವಶ್ಯಕತೆ ಇದೆ. ನಿತ್ಯ 38 ರಿಂದ 40 ಸಾವಿರ ಯೂನಿಟ್ ರಕ್ತ ಬೇಕಾಗಿದೆ. ಕೋವಿಡ್‌ ಕಾಲದಲ್ಲಿ ಜಿಲ್ಲೆಯಲ್ಲಿ ರಕ್ತದೆ ಕೊರತೆ ಕಾಡಲಿಲ್ಲ. ಸಂಘ, ಸಂಸ್ಥೆಗಳು  ಹೆಚ್ಚು ಶಿಬಿರಗಳನ್ನು ಆಯೋಜಿಸಿ ರಕ್ತ ಸಂಗ್ರಹಿಸಲು ಸಹಕರಿಸಿದವು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ. ಸತಿಶ್‍ಕುಮಾರ್ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಎಸ್.ಡಿ.ಎಂ ಆಯುರ್ವೇದ ಆಸ್ಪತ್ರೆ ಜಿಲ್ಲಾಡಳಿತದೊಂದಿಗೆ ಸಹಕಾರ ನೀಡಿದ್ದನ್ನು ಸ್ಮರಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಪ್ರಸನ್ನ ನರಸಿಂಹ ರಾವ್ ಮಾತನಾಡಿ, ಜಿಲ್ಲಾಡಳಿತ, ಆರೋಗ್ಯಇಲಾಖೆ, ರೆಡ್‌ಕ್ರಾಸ್ ಹಾಗೂ ಇತರೆ ಸೇವಾ ಸಂಸ್ಥೆಗಳು ಸದಾ ನಮ್ಮೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿ ಕೈ ಜೋಡಿಸುತ್ತಿವೆ ಎಂದರು.

ಶಿಬಿರದಲ್ಲಿ 103 ಯೂನಿಟ್ ರಕ್ತ ಸಂಗ್ರಹವಾಯಿತು. ಜಿಲ್ಲಾ ಏಡ್ಸ್ ಮತ್ತು ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ಪಿ.ನಾಗೇಶ್ ಆರಾಧ್ಯ, ರೆಡ್ ಕ್ರಾಸ್ ಘಟಕದ ನಿರ್ದೇಶಕಿ ಡಾ.ಎ.ಸಾವಿತ್ರಿ, ಮಹಾವಿದ್ಯಾಲಯದ ಯುವ ರೆಡ್‌ಕ್ರಾಸ್ ಘಟಕದ ಮುಖ್ಯಸ್ಥ ಡಾ.ಲೋಹಿತ್, ಹಾಸನ ತಾಲ್ಲೂಕು ವೈದ್ಯಾಧಿಕಾರಿ ಡಾ.ವಿಜಯ್, ಹಾಸನ ರೆಡ್ ಕ್ರಾಸ್ ಘಟಕದ ಖಜಾಂಚಿ ಜಯೇಂದ್ರ ಕುಮಾರ್, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ.ಶಿವಣ್ಣ, ಕೆ.ಟಿ.ಜಯಶ್ರೀ, ನಿರ್ಮಲಾ, ಬಿ.ಆರ್.ಉದಯ್‌ ಕುಮಾರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.