ಸೋಮವಾರ, ಮಾರ್ಚ್ 8, 2021
26 °C
ಸಾವು–ಬದುಕಿನ ನಡುವೆ ಹೋರಾಟ

ಮೇಲಧಿಕಾರಿಗಳ ಕಿರುಕುಳ ಆರೋಪ: ಕೆಎಸ್ಆರ್‌ಟಿಸಿ ಬಸ್ ಚಾಲಕ ಆತ್ಮಹತ್ಯೆಗೆ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಮೇಲಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ರಾಮನಾಥಪುರ ವಿಭಾಗದ ಕೆಎಸ್ಆರ್‌ಟಿಸಿ ಬಸ್ ಚಾಲಕ ಕಮ್ ನಿರ್ವಾಹಕ ಎಂ.ಜೆ.ರಾಮು ಅವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

‘ಘಟನೆ ನಡೆದು ನಾಲ್ಕು ದಿನವಾದರೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ. ಪತಿಗೆ ಆಗಿರುವ ಅನ್ಯಾಯ ಸರಿಪಡಿಸದಿದ್ದರೆ ಐದು ತಿಂಗಳ ಮಗುವಿನೊಂದಿಗೆ ತಾನೂ ವಿಷ ಕುಡಿಯುವುದಾಗಿ’ ರಾಮು ಪತ್ನಿ ಎಚ್ಚರಿಕೆ ನೀಡಿದ್ದಾರೆ.

ಘಟನೆ ವಿವರ: 2011 ರಲ್ಲಿ ರಾಮು ಕರ್ತವ್ಯದಲ್ಲಿದ್ದಾಗ ಟಿಕೆಟ್ ಪಡೆಯುವ ವಿಷಯಕ್ಕೆ ಮಧು ಎಂಬುವರ ಜತೆ ಮಾತಿನ ಚಕಮಕಿ ನಡೆದಿತ್ತು. ಇಬ್ಬರು ಪರಸ್ಪರ ಕೈ ಕೈ ಮಿಲಾಯಿಸಿದ್ದರು. ಏಳು ವರ್ಷಗಳ ಹಿಂದಿನ ಈ ಪ್ರಕರಣದ ಬಗ್ಗೆ ಈಗಲೂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

ಮಧು ಅವರ ಅಣ್ಣ, ಕಮಲ್ ಕುಮಾರ್ ಎಂಬುವರು ಇದೇ ಕೆಎಸ್ಆರ್‌ಟಿಸಿ ಹಾಸನ ವಿಭಾಗದಲ್ಲಿ ಡಿಟಿಓ ಆಗಿದ್ದು, ತನ್ನ ತಮ್ಮನ ಮೇಲಿನ ಕೇಸ್ ವಾಪಸ್ ಪಡೆಯುವಂತೆ ಕಿರುಕುಳ ನೀಡಲು ಆರಂಭಿಸಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ರಾಮು, ತನಗಾಗುತ್ತಿರುವ ತೊಂದರೆ ಬಗ್ಗೆ ಎರಡು ಪುಟಗಳ ಪತ್ರ ಬರೆದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸ್ ವರಿಷ್ಠಾಧಿಕಾರಿ ಎ.ಎನ್.ಪ್ರಕಾಶ್ ಗೌಡ, ‘ಆರಂಭದಲ್ಲಿ ರಾಮು ಹೇಳಿಕೆ ನೀಡುವ ಸ್ಥಿತಿಯಲ್ಲಿ ಇರಲಿಲ್ಲ. ಶೀಘ್ರವೇ ಅವರಿಂದ ಹೇಳಿಕೆ ದಾಖಲಿಸಿ ನಂತರ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸಲಾಗುವುದು. ಸರ್ಕಾರಿ ಹುದ್ದೆಯಲ್ಲಿದ್ದವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದು ಅಪರಾಧ. ರಾಮು ಮೇಲಿದ್ದ ಹಿಂದಿನ ಪ್ರಕರಣಗಳು ವಜಾ ಆಗಿದೆ. ಅವರು ಟಿಕೆಟ್ ವಿತರಣೆ ವೇಳೆ ಲೋಪ ಎಸಗಿದ್ದಾರೆ ಎಂಬ ಮಾಹಿತಿ ಇದೆ. ಶಿಸ್ತು ಕ್ರಮ ಜರುಗಿಸುತ್ತಾರೆ ಎಂಬ ಕಾರಣಕ್ಕೂ ಹೀಗೆ ಮಾಡಿಕೊಂಡಿರಬಹುದು ಎಂಬ ಅನುಮಾನವಿದೆ. ಒಟ್ಟಿನಲ್ಲಿ ಅವರ ಹೇಳಿಕೆ ನಂತರ ಇಡೀ ಪ್ರಕರಣದ ವಾಸ್ತವಾಂಶ ತಿಳಿಯಲಿದೆ’ ಎಂದರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು